Friday, August 23, 2024

ಸತ್ಯ | ನ್ಯಾಯ |ಧರ್ಮ

ನೂರು ಸಿದ್ಧರಾಮಯ್ಯನವರ ಕತೆ ಅತ್ತಗಿರಲಿ, ಮೊದಲು ಒಬ್ಬ ಜಮೀರನನ್ನು ಎದುರಿಸಿ ನೋಡಿ: ಎಚ್‌ಡಿಕೆಗೆ ಸಚಿವ ಜಮೀರ್‌ ಸವಾಲ್

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ಮಾತಿನ ಚಕಮಕಿ ಮತ್ತೆ ಮುಂದುವರೆದಿದೆ. ಈಗ ಬಳ್ಳಾರಿ ಉಸ್ತುವಾರಿ ಸಚಿವ ಹಾಗೂ ಒಂದು ಕಾಲದ ಕುಮಾರಸ್ವಾಮಿಯವರ ಆಪ್ತ ಜಮೀರ್‌ ಅಹ್ಮದ್‌ ಅವರು ಕಣಕ್ಕಿಳಿದಿದ್ದಾರೆ.

ಮೊನ್ನೆ ಸಿದ್ಧರಾಮಯ್ಯನವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ “ಸದ್ಯಕ್ಕೆ ಸಚಿವ ಕುಮಾರಸ್ವಾಮಿಯವರನ್ನು ಬಂಧಿಸುವುದಿಲ್ಲ, ಆದರೆ ಸಂದರ್ಭ ಬಂದರೆ ಯಾವುದೇ ಮುಲಾಜು ನೋಡದೆ ಬಂಧಿಸುತ್ತೇವೆ” ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಎಚ್‌ ಡಿ ಕುಮಾರಸ್ವಾಮಿಯವರು “ನೂರು ಸಿದ್ದರಾಮಯ್ಯ ಬಂದರೂ ಈ ಕುಮಾರಸ್ವಾಮಿಯನ್ನು ಅರೆಸ್ಟ್‌ ಮಾಡಲು ಸಾಧ್ಯವಿಲ್ಲ. ಒಮ್ಮೆ ಆರೆಸ್ಟ್‌ ಮಾಡಿ ನೋಡಿ” ಎಂದು ಸವಾಲು ಎಸೆದಿದ್ದರು.

ಅದರ ನಂತರ ಮತ್ತೆ ಸಿದ್ಧರಾಮಯ್ಯ, “ಕುಮಾರಸ್ವಾಮಿಯವರನ್ನು ಅರೆಸ್ಟ್‌ ಮಾಡುವುದಕ್ಕೆ ನೂರು ಸಿದ್ಧರಾಮಯ್ಯ ಎಲ್ಲ ಬೇಕಿಲ್ಲ. ಅದಕ್ಕೆ ಒಬ್ಬ ಪೊಲೀಸ್‌ ಪೇದೆ ಸಾಕು” ಎಂದು ಕಾಲೆಳೆದಿದ್ದರು.

ಈಗ ವಿಷಯವಾಗಿ ಸಚಿವ ಜಮೀರ್‌ ಅಹ್ಮದ್‌ ಅವರು ಪ್ರತಿಕ್ರಿಯಿಸಿದ್ದು ಅವರು, “ನೂರು ಸಿದ್ಧರಾಮಯ್ಯನವರ ಮಾತು ಬೇಡ, ನೀವು ಒಬ್ಬ ಜಮೀರನನ್ನು ಎದುರಿಸಿ ನೋಡಿ” ಎಂದು ಸವಾಲ್‌ ಎಸೆದಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು ನಿಮಗೆ ಸಿದ್ಧರಾಮಯ್ಯನವರ ಕುರಿತು ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ತಾವು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟ ಜಾಗಕ್ಕೆ ಪ್ರತಿಯಾಗಿ ಸೈಟುಗಳನ್ನು ಪಡೆದಿದ್ದಾರೆ. ಅದನ್ನು ಕೊಟ್ಟಿರುವುದು ಕೂಡಾ ಬಿಜೆಪಿ ಸರ್ಕಾರವೇ ಎಂದು ಹೇಳಿದ್ದಾರೆ.

ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಂದು ಸರಿಯಾದ ಚಿತ್ರಣ ಸಾರ್ವಜನಿಕರಿಗೆ ಸಿಕ್ಕಿಲ್ಲವಾದರೂ ಏಟು ಎದಿರೇಟಿನ ಭರಪೂರ ಮನರಂಜನೆಯಂತೂ ಈ ರಾಜಕಾರಣಿಗಳಿಂದ ಸಿಗುತ್ತಿದೆ.

https://x.com/RadhaAvinash1/status/1826784011227988105

Related Articles

ಇತ್ತೀಚಿನ ಸುದ್ದಿಗಳು

You cannot copy content of this page