Home ಅಂಕಣ ಹಿಂದುತ್ವ ರಾಜಕಾರಣದ ಕಥೆ – 17 : ಹಿಂದುತ್ವದ ಆರಂಭ ಮತ್ತು ಕ್ಷಮಾಪಣೆಯ ಮುಂದುವರಿಕೆ

ಹಿಂದುತ್ವ ರಾಜಕಾರಣದ ಕಥೆ – 17 : ಹಿಂದುತ್ವದ ಆರಂಭ ಮತ್ತು ಕ್ಷಮಾಪಣೆಯ ಮುಂದುವರಿಕೆ

0

ನನ್ನ ಕಡೆಯಿಂದ ಇನ್ನಷ್ಟು ಭದ್ರತೆಯನ್ನು (ಬ್ರಿಟಿಷ್)‌ ಸರಕಾರ ನಿರೀಕ್ಷಿಸುತ್ತದೆಯಾದರೆ, ಸರಕಾರ ಸೂಚಿಸುವ ನಿರ್ದಿಷ್ಟ ಮತ್ತು ಯುಕ್ತವೂ ಆದ ಸಮಯದ ತನಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಲು ನನಗೆ ಮತ್ತು ನನ್ನ ಸಹೋದರನಿಗೆ ಸಂಪೂರ್ಣ ಒಪ್ಪಿಗೆಯಿದೆ.

ಇತೀ ತಮ್ಮ ಅತ್ಯಂತ ವಿಶ್ವಸ್ಥ ಸೇವಕ,
ವಿ.ಡಿ. ಸಾವರ್ಕರ್‌
ಖೈದಿ ಸಂಖ್ಯೆ ೩೨೭೭೮

ಸಾವರ್ಕರ್‌ ಮೊಂಟಾಗುವಿಗೆ ಬರೆದ ಈ ಕ್ಷಮಾಪಣಾ ಪತ್ರವನ್ನು ಕೂಡ ತಳ್ಳಿ ಹಾಕಲಾಯಿತು. ಈ ನಡುವೆ ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಯಣ ರಾವ್‌ ವೈದಶಾಸ್ತ್ರ ಕಲಿತು ಡಾಕ್ಟರ್‌ ಆಗಿದ್ದ. ಬಾಬುರಾವನ ಹೆಂಡತಿ ಯಶುವಾಹಿನಿ ತೀರಿ ಹೋಗಿದ್ದಳು. ಅದಕ್ಕೂ ಮೊದಲು ೧೯೧೫ ಜುಲೈ ೨೮ ಮತ್ತು ಅಕ್ಟೋಬರ್‌ ೧೧ರಂದು ಯಶುವಾಹಿನಿ ಮತ್ತು ಸಾವರ್ಕರ್‌ ಪತ್ನಿ ಯಮುನಾ ಬಾಯಿ ಸೇರಿಕೊಂಡು ತಮ್ಮ ಗಂಡಂದಿರ ಬಿಡುಗಡೆಯನ್ನು ಕೋರಿಕೊಂಡು ವೈಸ್‌ರಾಯ್‌ ಆಗಿದ್ದ ಹಾರ್ಡಿಂಗ್‌ ಪ್ರಭುವಿಗೆ ಎರಡು ಪತ್ರಗಳನ್ನು ಬರೆದಿದ್ದರು.

ಮದನ್‌ ಲಾಲ್‌ ಡಿಂಗ್ರ ಮತ್ತು ಅನಂತ್‌ ಕನ್ಹಾರೆಯನ್ನು ಬ್ರಿಟಿಷರ ವಿರುದ್ಧ ಕಟೆದು ನಿಲ್ಲಿಸಿದ್ದ ಅದೇ ಸಾವರ್ಕರ್‌ ಬ್ರಿಟಿಷರ ಬಳಿ ಕ್ಷಮಾಪಣೆಗಾಗಿ ಯಾಚಿಸುತ್ತಿರುವ ಹೊತ್ತಲ್ಲಿ ಭಾರತದಲ್ಲಿ ಬಹಳ ದೊಡ್ಡ ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದವು. ಬ್ರಾಹ್ಮಣರ ನಾಯಕತ್ವದ ಭೂಗತ ಸಂಘಟನೆಗಳ ಬ್ರಿಟಿಷ್‌ ವಿರೋಧಿ ಹೋರಾಟದ ಬದಲಿಗೆ ಸಾಮ್ರಾಜ್ಯಶಾಹಿ ವಿರೋಧಿ ಬಹುಜನ ಸಮರವೊಂದು ರಾಜಕಾರಣದ ಕೇಂದ್ರ ರಂಗಭೂಮಿಯಗಿ ಬಿಟ್ಟಿತ್ತು. ಗಾಂಧಿಯ ಪ್ರವೇಶ ಅದಕ್ಕೆ ಮೂಲ ಕಾರಣವಾಗಿತ್ತು. ನವ-ಸಂಪ್ರದಾಯವಾದಿ ಬ್ರಾಹ್ಮಣರ ಹೋರಾಟ ಮ್ಲೇಚ್ಛರಾದ ಬ್ರಿಟಿಷರ ವಿರುದ್ಧವಾಗಿದ್ದರೆ, ಗಾಂಧಿಯ ಹೋರಾಟ ಸಾಮ್ರಾಜ್ಯಶಾಹಿಯ ವಿರುದ್ಧವಾಗಿತ್ತು. ಜಾತಿ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ನಡೆಸುತ್ತಿದ್ದ ಹೋರಾಟ ಈಗ ರಾಜಕೀಯ ಮತ್ತು ಆರ್ಥಿಕ ಕಾರಣಗಳ ಹೊರಾಟವಾಗಿ ಬದಲಾಗಿತ್ತು. ಅದಕ್ಕೆ ಕಾರಣವಾಗಿದ್ದು ಜಸ್ಟಿಸ್‌ ಎಸ್.ಎ.ಟಿ. ರೌಲತ್ ನೇತೃತ್ವದ ಸಮಿತಿ ತಂದ ಕೆಲವು ಶಿಫಾರಸ್ಸುಗಳಾಗಿದ್ದವು. ೧೯೧೫ರ ಡಿಫೆನ್ಸ್‌ ಆಫ್‌ ಇಂಡಿಯಾ ಆಕ್ಟ್‌ ಬದಲಿಗೆ ಹೊಸದೊಂದು ಕಾನೂನನ್ನು ಆ ಸಮಿತಿ ಮುಂದಿಟ್ಟಿತ್ತು. ಅದರ ಆಧಾರದಲ್ಲಿ ಎರಡು ಬಿಲ್ಲುಗಳನ್ನು ಬ್ರಿಟಿಷ್‌ ಸರಕಾರ ರಚಿಸಿತು. ೧೯೧೯ರ ಇಂಡಿಯನ್‌ ಶಿಕ್ಷಾ ಅಧಿನಿಯಮ (ತಿದ್ದುಪಡಿ) ಒಂದನೇ ಬಿಲ್‌ ಮತ್ತು ಎರಡನೇ ಬಿಲ್.‌ ಅಪೀಲ್‌ ಹೋಗಲು ನಿರಾಕರಣೆ, ಸ್ಥಳೀಯಾಡಳಿತಗಳಿಗೆ ಅನುಮಾನದ ಮೇಲೆ ವಾರೆಂಟ್‌ ಇಲ್ಲದೆಯೇ ಮನೆಗಳ ತಪಾಸನೆಗೆ ಅನುಮತಿ ಮೊದಲಾದವುಗಳನ್ನು ಒಳಗೊಂಡಿದ್ದ ಕರಾಳ ಕಾನೂನಿನ ಆರಂಭವಾಗಿತ್ತದು. ಈ ಬಿಲ್ಲುಗಳು ಪಾಸಾಗುವುದರೊಂದಿಗೆ ಜನವಿರೋಧಿ ರೌಲತ್ ಕಾಯ್ದೆ ಜಾರಿಗೆ ಬಂದಿತು. ಗಾಂಧಿ, ವಲ್ಲಭಭಾಯಿ ಪಟೇಲ್‌, ಸರೋಜಿನಿ ನಾಯ್ಡು ಅವರನ್ನು ಒಳಗೊಂಡ ಒಂದು ಸಣ್ಣ ತಂಡ ರೌಲತ್ ಸತ್ಯಾಗ್ರಹವೆಂಬ ಹೆಸರಿನಲ್ಲಿ ಪ್ರತಿಭಟನಾ ಸತ್ಯಾಗ್ರಹ ಶುರು ಮಾಡಿದರು.ಇದು ದೊಡ್ಡ ಮಟ್ಟದಲ್ಲಿ ಜನಮನ ಸೆಳೆಯಿತು. ಪಂಜಾಬಿನಲ್ಲಿ ಈ ಚಳುವಳಿ ಜನಶಕ್ತಿ ಗಳಿಸುವುದನ್ನು ಗಮನಿಸಿದ ಸರಕಾರ ಆ ಪ್ರಾಂತ್ಯಕ್ಕೆ ಗಾಂಧಿಯ ಪ್ರವೇಶವನ್ನು ನಿಷೇಧಿಸಿತು. ಸರಕಾರ ಕರಾಳ ಕಾನೂನನ್ನು ಘೋಷಿಸಿತು. ಬ್ರಿಗೇಡಿಯರ್‌ ಜನರಲ್‌ ರೆಜಿನಾಲ್ಡ್‌ ಡಯರ್‌ಗೆ ಈ ಕಾನೂನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಯಿತು.

೧೯೧೯ ಏಪ್ರಿಲ್‌ ೧೩ರಂದು ಅಮೃತಸರದ ಜಲಿಯನ್‌ ವಾಲಾಬಾಗ್‌ ಎಂಬಲ್ಲಿ ಸುಮಾರು ಹತ್ತು ಸಾವಿರದಷ್ಟು ಜನರು ಒಂದು ಮೈದಾನದಲ್ಲಿ ಒಟ್ಟುಗೂಡಿದರು. ಅವರೆಲ್ಲ ನಿರಾಯುಧರಾಗಿದ್ದರು. ಮೈದಾನದ ಬಾಗಿಲುಗಳನ್ನು ಬ್ರಿಟಿಷರು ಮುಚ್ಚಿದರು. ಡಯರನ ಆಜ್ಞೆಯಂತೆ ಪೋಲೀಸರು ಗುಂಡಿನ ಸುರಿಮಳೆಗೈದರು. ೧೫೦೦ ಸುತ್ತು ಗುಂಡು ಹೊಡೆದದ್ದಾಗಿ ಹೇಳಲಾಗುತ್ತದೆ. ಸರಕಾರದ ಲೆಕ್ಕದ ಪ್ರಕಾರ ೩೭೯ ಜನರು ಸಾವನ್ನಪ್ಪಿ ೧೨೦೦ಕ್ಕೂ ಅಧಿಕ ಜನರು ಗಾಯಗೊಂಡರು. ಇತಿಹಾಸಕಾರರು ಈ ಲೆಕ್ಕಕ್ಕಿಂತ ಅದೆಷ್ಟೋ ಪಾಲು ಹೆಚ್ಚು ಜನರು ಸತ್ತರು ಮತ್ತು ಗಾಯಗೊಂಡರು ಎಂದು ಹೇಳುತ್ತಾರೆ. ಈ ದಾರುಣ ಘಟನೆಯ ಕುರಿತ ವರದಿಗಾಗಿ ಗಾಂಧಿ ಆಗ್ರಹಿಸಿದಾಗ ಹಂಟರ್ ಕಮಿಷನನ್ನು ಅದಕ್ಕಾಗಿ ನೇಮಿಸಲಾಯಿತು. ಆದರೆ, ಬ್ರಿಟಿಷ್‌ ಸರಕಾರದೊಂದಿಗೆ ಅಸಹಕಾರ ಮತ್ತು ಹಿಂದೂ ಮುಸ್ಲಿಂ ಸೌಹಾರ್ದತೆಗಾಗಿ ಕೆಲಸ ಮಾಡಲು ಸತ್ಯಾಗ್ರಹಿಗಳಿಗೆ ಗಾಂದಿ ಕರೆ ನೀಡಿದರು.

ಹೀಗೆ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಕ್ರೌರ್ಯ ಮೆರೆಯುತ್ತಿರುವ ಹೊತ್ತಿನಲ್ಲಿ ಸಾವರ್ಕರ್‌ ಒಳಗಿನ ಬ್ರಿಟಿಷ್‌ ವಿರೋಧಿತನ ಶೂನ್ಯಸುತ್ತಿ ಋಣಾತ್ಮಕವಾಗುತ್ತಲೇ ಹೋಯಿತು. ಅದರ ಜೊತೆಗೆ ೧೮೫೭ರ ಮೊದಲ ಸ್ವಾತಂತ್ರ್ಯ ಯುದ್ಧ ಎಂಬ ಪುಸ್ತಕದಲ್ಲಿ ತಂತ್ರವೆಂಬ ನೆಲೆಯಲ್ಲಿಯಾದರೂ, ತಿಲಕರ ಲಕ್ನೋ ಒಪ್ಪಂದಕ್ಕೆ ಸಮಾನವಾಗಿ ಸಾವರ್ಕರ್‌ ಸ್ವೀಕರಿಸಿದ್ದ ಹಿಂದೂ ಮುಸ್ಲಿಂ ಮೈತ್ರಿಯಿಂದ ಸಾವರ್ಕರ್‌ ಸಂಪೂರ್ಣವಾಗಿ ಹಿಮ್ಮೆಟ್ಟಿಕೊಂಡು ಚಿತ್ಪಾವನ ಬ್ರಾಹ್ಮಣರು ಪೇಶ್ವೆಗಳ ಕಾಲದಲ್ಲಿ ಹೊಂದಿದ್ದ ಮುಸ್ಲಿಂ ವಿರೋಧಿ ಮನಸ್ಥಿತಿಗೆ ಬದಲಾಗಿದ್ದರು. ನಾವು ಇಂದು ಕಾಣುತ್ತಿರುವ ಹಿಂದುತ್ವ ರಾಜಕಾರಣದ ಲಕ್ಷಣಗಳು ಪ್ರತ್ಯಕ್ಷವಾಗಿ ಕಂಡು ಬರುವುದು ಇದೇ ಹಂತದಲ್ಲಿ. ಮಾರಾಠ ಪ್ರಾಂತ್ಯದ ಹೊರಗೆ ಸ್ವಾಮಿ ದಯಾನಂದ ಸರಸ್ವತಿ (೧೮೨೪-೧೮೮೩) ಬೆಳೆಸಿದ್ದ ಹಿಂದೂ ಪುನರುಜ್ಜೀವನದೊಂದಿಗೆ ತನ್ನ ಚಿತ್ಪಾವನ ಕೇಂದ್ರಿತ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಸಾವರ್ಕರ್‌ ಎದುರು ಬದುರಾಗಿ ನಿಲ್ಲಿಸುವುದು ಕೂಡ ಇದೇ ಹಂತದಲ್ಲಿ. ವೇದಗಳಿಗೆ ಮರಳಿರಿ ಎಂಬುದು ದಯಾನಂದ ಸರಸ್ವತಿ ಅವರ ಘೋಷಣೆಯಾಗಿತ್ತು. ವೈದಿಕರ ಪ್ರಾಬಲ್ಯದ ಅಡಿಯಲ್ಲಿ ಬ್ರಾಹ್ಮಣ ಅಧಿಪತ್ಯದ ಒಂದು ಹಿಂದೂ ಸಂಘಟನೆಯನ್ನು ಕಟ್ಟಿ ನಿಲ್ಲಿಸುವುದು ಅವರ ಉದ್ಧೇಶವಾಗಿತ್ತು. ಈ ಬ್ರಾಹ್ಮಣ ಸಂಕಲ್ಪದ ಸೆಮಿಟಿಕ್‌ ರೂಪಾಂತರಕ್ಕೆ ಅವರು ಆರಂಭಿಸಿದ್ದ ಚಳುವಳಿಯೇ ಶುದ್ಧಿ ಚಳುವಳಿ. ಬೇರೆ ಧರ್ಮಗಳ ಜನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸುವುದು ಶುದ್ಧಿ ಚಳುವಳಿಯ ಮುಖ್ಯ ಗುರಿಯಾಗಿತ್ತು. ದಯಾನಂದ ಸರಸ್ವತಿಯ ನಂತರ ಸ್ವಾಮಿ ಶ್ರದ್ಧಾನಂದ ಅದನ್ನು ಮುಂದುವರಿಸಿದರು.

ವಿನಾಯಕ್‌ ಪ್ರತಿನಿಧಿಸುತ್ತಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಹಿಂದೂ ಸಂಘಟನಾ ಚಳುವಳಿಯೊಂದಿಗೆ ಬೆರೆಸಿದ್ದು ಭಾಯ್‌ ಪರಮಾನಂದ್.‌ ಆರ್ಯಸಮಾಜದ ಕಾರ್ಯಕರ್ತನಾಗಿ ಪರಮಾನಂದ್‌ ಬ್ರಿಟಿಷ್‌ ಗಯಾನ ತಲುಪಿದ್ದರು. ನಂತರ ಕಲಿಕೆಗೆಂದು ಎರಡು ವರ್ಷ ಅಮೇರಿಕಾದಲ್ಲಿ ಕಳೆದರು. ಅಲ್ಲಿ ಗದ್ದರ್‌ ಚಳುವಳಿಯ ನಾಯಕ ಲಾಲಾ ಹರ್‌ದಯಾಳ್‌ ಪರಿಚಯವಾಗಿ ಆ ಮೂಲಕ ಗದ್ದರ್‌ ಚಳುವಳಿಯಲ್ಲಿ ಸೇರಿಕೊಂಡರು. ನಂತರ ಭಾರತಕ್ಕೆ ಮರಳಿ ಬಂದು ಪೇಶ್ವಾರ್‌ ಮತ್ತು ಅಂದಿನ ಪಂಜಾಬ್‌ ಸಹಿತದ North West Frontier Provinceನ ಹಲವು ಕಡೆಗಳಲ್ಲಿ ವಿಧ್ವಂಸಕ ಚಟುವಟಿಕೆಗಳಿಗೆ ನೇತೃತ್ವವನ್ನು ನೀಡಿದರು. ೧೯೧೫ರಲ್ಲಿ ಲಾಹೋರ್‌ ಗೂಢಾಲೋಚನೆ ಪ್ರಕರಣದಲ್ಲಿ ಬಂಧಿತನಾಗಿ ಗಲ್ಲುಶಿಕ್ಷೆಗೆ ಗುರಿಯಾದರು. ಆದರೆ, ವೈಸ್‌ರಾಯ್‌ ಆಗಿದ್ದ ಹಾರ್ಡಿಂಗ್‌ ಪ್ರಭು ಆತನ ಗಲ್ಲುಶಿಕ್ಷೆಯನ್ನು ಗಡೀಪಾರು ಶಿಕ್ಷೆಯಾಗಿ ಕಡಿತಗೊಳಿಸಿದ. ಹೀಗೆ ಆತ ಅಂಡಮಾನಿನ ಸೆಲ್ಯುಲಾರ್‌ ಜೈಲು ತಲುಪಿದ್ದರು.

ಪರಮಾನಂದ್‌ ಜೈಲಿನಲ್ಲಿ ಶುದ್ಧಿ ಚಳುವಳಿಯನ್ನು ಕೈಗೆತ್ತಿಕೊಂಡರು. ಹಿಂದೂ ಧರ್ಮದಿಂದ ಹೊರಗಡೆ ಮಾತ್ರವೇ ಮತಾಂತರ ಸಾಧ್ಯವೆಂದು ನಂಬಿದ್ದ ವಿನಾಯಕರ ನಂಬಿಕೆಯನ್ನು ಪರಮಾನಂದ್‌ ತಿದ್ದಿದರು. ಹಿಂದೂ ಸಂಘಟನೆ ಎಂಬ ಸಿದ್ಧಾಂತ ತನ್ನ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿಗೆ ಬೆಳೆಯಲು ಹೊಸ ಪರಿಸರ ವ್ಯವಸ್ಥೆಯನ್ನು ಸೃಷ್ಠಿಸಿಕೊಡುತ್ತದೆಯೆಂದು ಅರಿತ ವಿನಾಯಕ್‌ ಜೈಲಿನಲ್ಲಿ ಶುದ್ಧಿ ಚಳುವಳಿಗೆ ದೊಡ್ಡ ಮಟ್ಟದ ಪ್ರಚಾರ ನೀಡಿದರು. ಸ್ವತಃ ವಿನಾಯಕ್‌ ಮಾತುಗಳನ್ನು ನೋಡಿ:

ʼಅಲ್ಲಿಯ ತನಕ ನಮ್ಮ ಮುಂದೆ ಯಾವಾಗಲೂ ಎದ್ದು ನಿಲ್ಲುತ್ತಿದ್ದ ಪ್ರಶ್ನೆಯೆಂದರೆ ಒಬ್ಬ ಹಿಂದೂವಿಗೆ ಮುಸಲ್ಮಾನನಾಗಬಹುದು, ಆದರೆ, ಒಬ್ಬ ಮುಸಲ್ಮಾನ ಹೇಗೆ ಹಿಂದೂವಾಗುತ್ತಾನೆ? ನೂರಾರು ಹಿಂದೂಗಳು ನನ್ನ ಬಳಿ ಈ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರವಿಲ್ಲ ಎಂದು ನಾನು ನಿಜವಾಗಿ ನಂಬಿಕೊಂಡು ಬಿಟ್ಟಿದ್ದೆ. ಆದರೆ, ಅಂತಹದ್ದೊಂದು ಪ್ರಶ್ನೆ ಇನ್ನು ಮುಂದೆ ನಮ್ಮೆದುರು ಎದ್ದು ನಿಲ್ಲುವುದಿಲ್ಲ. ಶುದ್ಧಿ ಚಳುವಳಿ ಅದು ಸಾಧ್ಯವಿದೆಯೆಂದು ತೋರಿಸಿಕೊಟ್ಟಿದೆ. ಮುಸ್ಲಿಮರು ಮುಟ್ಟಿದ್ದೋ ಅಥವಾ ಬೇಯಿಸಿದ್ದೋ ಆದ ಆಹಾರ ಹೊಟ್ಟೆಯನ್ನು ಹಾಳು ಮಾಡದೆಯೂ, ಆತನ ಜಾತಿ ಮತ್ತು ಧರ್ಮವನ್ನು ಕೆಡಿಸದೆಯೂ ನಮಗೆಲ್ಲ ತಿನ್ನಬಹುದು ಎಂದಾಯಿತು.ʼ

ಹಿಂದೂ ಧರ್ಮಕ್ಕೆ ಮತಾಂತರ ಮಾಡುವ ರೀತಿ ಹೀಗಿತ್ತು. ಅವರ ಬಳಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಬರಲು ಹೇಳಲಾಗುತ್ತಿತ್ತು. ತುಳಸಿ ಎಲೆಗಳನ್ನು ತಿನ್ನಲು ಕೊಡಲಾಗುತ್ತಿತ್ತು. ಭಗವತ್‌ಗೀತೆಯ ಕೆಲವು ಶ್ಲೋಕಗಳನ್ನು ಹೇಳಬೇಕಿತ್ತು. ತುಳಸಿದಾಸ ರಾಮಾಯಣದ ಒಂದು ಕಾಂಡ ಪಾರಾಯಣ ಮಾಡಬೇಕು. ಅದರ ನಂತರ ಸಿಹಿತಿಂಡಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಇದರೊಂದಿಗೆ ಅವರು ಹಿಂದೂಗಳಾಗಿ ಬದಲಾಗುತ್ತಾರೆ.

ರೌಲತ್ ನಿಯಮ ಮತ್ತು ಜಲಿಯನ್‌‌ ವಾಲಾಬಾಗ್‌ ಭಾರತೀಯ ಸಮಾಜದಲ್ಲಿ ಹೊತ್ತಿ ಉರಿಯುತ್ತಿರಬೇಕಾದರೆ ವಿನಾಯಕ್‌ ತನ್ನ ಕ್ಷಮಾಪಣಾ ಪತ್ರದಲ್ಲಿ ಬ್ರಿಟಿಷರ ಎದುರು ಇಟ್ಟಿದ್ದ ಸಂಗತಿಗಳನ್ನು ನಿಜಾರ್ಥದಲ್ಲಿ ಕಾರ್ಯಗತಗೊಳಿಸುತ್ತಿದ್ದರು. ಒಡೆದು ಆಳುವ ಬ್ರಿಟಿಷ್‌ ರಾಜಕಾರಣದೊಂದಿಗೆ ಸೇರಿಕೊಂಡೇ ಇದ್ದು ತನ್ನ ಬ್ರಿಟಿಷ್‌ ವಿರೋಧಿ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಹಿಂದೂ ರಾಜಕಾರಣವಾಗಿ ವಿಕಸನಗೊಳಿಸುತ್ತಿದ್ದರು. ಅದು ಕೂಡ ಭಾರತೀಯರ ಬ್ರಿಟಿಷ್‌ ವಿರೋಧಿ ಮನೋಭಾವವು ಹಿಂದೆಂದಿಗಿಂತಲೂ ಉಚ್ಛ್ರಾಯ ಹಂತ ತಲುಪಿದ್ದ ಸಂದರ್ಭದಲ್ಲಿ. ವಿನಾಯಕ್‌ ಬರೆಯುತ್ತಾರೆ, ʼಶುದ್ಧಿ ಚಳುವಳಿ ಒಂದು ದೊಟ್ಟ ವಿಜಯವಾಗಿತ್ತು. ಅದು ಜನರು ಒಗ್ಗೂಡುವುದಕ್ಕೆ ದೊಡ್ಡ ಪಾಲು ನೀಡಿತು. ಅದರ ಜೊತೆಗೆ ನಿಷೇಧಿಸಿರದಿದ್ದರೂ ಹಿಂದೂಗಳ ಪ್ರಾಂತ್ಯ, ಜಾತಿ, ಆಚಾರಗಳ ಆಧಾರದ ವ್ಯತ್ಯಾಸಗಳು ಲಘುಗೊಂಡು ಅವರೆಲ್ಲ ಒಂದೇ ಸಮೂಹದ ಕೊಂಬೆಗಳು ಎಂದು ನಂಬಿಸಲೂ ಸಾಧ್ಯವಾಯಿತು.ʼ

ಸಾವರ್ಕರ್‌ ಜಾತಿ ವಿರೋಧಿಯಾಗಿದ್ದರು ಎಂದೂ ಜಾತಿ ವಿರೋಧಿ ಕೆಲಸಗಳಲ್ಲಿ ಇನ್ನಿಲ್ಲದಂತೆ ಮುಳುಗಿದ್ದರು ಎಂದೂ ಅವರ ಬ್ರಾಹ್ಮಣ ರಾಜಕಾರಣವನ್ನು ಮರೆಮಾಚಲು ಹಲವರು ಹೇಳುತ್ತಾರೆ. ಆ ವಾದವನ್ನು ಪರಿಶೋಧಿಸಲು ಸಾವರ್ಕರ್‌ ಅವರ ಮೇಲಿನ ಮಾತುಗಳು ಸಹಕಾರಿಯಾಗುತ್ತವೆ. ಶುದ್ಧಿ ಚಳುವಳಿಗೆ, ಹಿಂದೂ ಧರ್ಮಕ್ಕೆ ಇತರ ಧರ್ಮೀಯರನ್ನು ಸ್ವೀಕರಿಸುವುದರಲ್ಲಿ ಅತ್ಯಂತ ಪ್ರಧಾನವಾಗಿದ್ದ ತಡೆಯೆಂದರೆ ಹಿಂದೂ ಧರ್ಮದ ಆಂತರಿಕ ವೈರುಧ್ಯ. ಬ್ರಾಹ್ಮಣ ರಾಜಕಾರಣದ ಆರಂಭದಲ್ಲಿಯೇ ಈ ಪ್ರಶ್ನೆ ತಡೆಗೋಡೆಯಾಗಿ ನಿಂತಿತ್ತು. ಸ್ವತಃ ಬ್ರಾಹ್ಮಣರೇ ಹಿಂದೂ ಸಮುದಾಯದಲ್ಲಿ ಅಲ್ಪಸಂಖ್ಯಾತರು. ಆದರೆ, ಮನುಸ್ಮೃತಿ ಮತ್ತು ಇತರ ಸ್ಮೃತಿಗಳು ಮತ್ತು ಹಲವು ಸನ್ನಿವೇಶಗಳು ಸೇರಿಕೊಂಡು ಸೃಷ್ಠಿಯಾದ ಸಾಂಸ್ಕೃತಿಕ ವಾತಾವರಣವು ಬ್ರಾಹ್ಮಣ ಪ್ರಾಬಲ್ಯವನ್ನು ನೆಲೆನಿಲ್ಲಿಸುವ ಸಾಮಾಜಿಕ ಪರಿಸ್ಥಿತಿಯನ್ನು ಹಲವು ಶತಮಾನಗಳ ಕಾಲ ಹಿಡಿದಿಟ್ಟಿತ್ತು. ಮರಾಠ ಪ್ರಾಂತ್ಯದಲ್ಲಿ, ಅವರಲ್ಲಿ ಒಂದು ವಿಭಾಗವಾದ ಚಿತ್ಪಾವನ ಬ್ರಾಹ್ಮಣರು, ಒಂದು ಶತಮಾನ ಕಾಲ ನೇರವಾಗಿ ರಾಜಕೀಯ ಅಧಿಕಾರವನ್ನು ಕೂಡ ಅನುಭವಿಸಿದರು. ಆಂಗ್ಲರ ಆಗಮನವು ಅವರ ರಾಜಕೀಯ ಮತ್ತು ಸಾಮಾಜಿಕ ಅಧಿಕಾರಕ್ಕೆ ಹಲವು ಮಟ್ಟದ ಹೊಡೆತ ನೀಡಿತು. ಅದರ ಜೊತೆಗೆ ಬ್ರಾಹ್ಮಣ ಪ್ರಾಬಲ್ಯವನ್ನು ಇನ್ನಿಲ್ಲದಂತೆ ಕಂಗೆಡಿಸಿದ್ದು ಜಾತಿವಿರೋಧಿ ಕೆಳಜಾತಿ ಚಳುವಳಿಗಳ ಹುಟ್ಟಾಗಿತ್ತು. ಶತಮಾನಗಳಿಂದ ಚಿರಸ್ಥಾಯಿಯಾಗಿದ್ದ ಹಿಂದೂ ಧರ್ಮದೊಳಗಿನ ಉಚ್ಛನೀಚತ್ವಕ್ಕೆ ಕೊಳ್ಳಿಯಿಡುವಂತಹ ಪ್ರಶ್ನೆಗಳು ಈ ಕಾಲದಲ್ಲಿ ಎದುರಾದವು. ಮಹಾತ್ಮ ಫುಲೆ ಮತ್ತಿತರರ ನೇತೃತ್ವದಲ್ಲಿ ಎಚ್ಚೆತ್ತುಕೊಂಡ ಈ ಚಳುವಳಿ ಮರಾಠ ಪ್ರಾಂತ್ಯದ ಬ್ರಾಹ್ಮಣ ಪ್ರಾಬಲ್ಯವನ್ನು ನಿಜಾರ್ಥದಲ್ಲಿ ಬೆದರಿಸಿದವು. ಒಂದು ಕಡೆ ರಾಜಕೀಯ ಅಧಿಕಾರವನ್ನು ಕಿತ್ತುಕೊಂಡ ಬ್ರಿಟಿಷರು. ಮತ್ತೊಂದು ಕಡೆ, ಸಾಮಾಜಿಕ ಅಧಿಕಾರವನ್ನು ನೆಲೆನಿಲ್ಲಿಸುವ ಮೂಲಭೂತ ಕಲ್ಪನೆಗಳ ಬುಡಕ್ಕೆ ಕೊಡಲಿಯೇಟು ನೀಡುತ್ತಿರುವ ಕೆಳಜಾತಿ ಚಳುವಳಿಗಳು. ಈ ಎರಡೆರಡು ಏಟಿನಿಂದಲೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಹುಟ್ಟಿಕೊಂಡಿದ್ದು ಎಂದು ನಾವೀಗಾಗಲೇ ಗಮನಿಸಿದೆವು. ತಮ್ಮ ಪ್ರಾಬಲ್ಯ ದೈವದತ್ತವೆಂದು ನಂಬಿಕೊಂಡಿದ್ದ, ಬ್ರಾಹ್ಮಣರೇ ಸೃಷ್ಠಿಸಿದ್ದ ಪುರಾಣಗಳನ್ನು ಚರಿತ್ರೆಗಳೆಂದು ನಂಬಿಕೊಂಡಿದ್ದ ಸಂಪ್ರದಾಯವಾದಿ ಬ್ರಾಹ್ಮಣರು ಸ್ಮೃತಿಗಳನ್ನು ತಬ್ಬಿಕೊಂಡರು. ಆದರೆ, ಕಾಲಕ್ಕೆ ತಕ್ಕುದಲ್ಲದ ಅಂತಹ ಆಲಿಂಗನವು ಬ್ರಾಹ್ಮಣ ಮೇಧಾವಿತ್ವವನ್ನು ಪತನಮುಖಿಯಾಗಿಸುವುದಲ್ಲದೆ ಬೇರೆ ಯಾವ ಉಪಯೋಗವೂ ಇಲ್ಲವೆಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದಲೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಹುಟ್ಟಿಕೊಳ್ಳುವುದು ಮತ್ತು ಬೆಳೆಯುವುದು.

ಹೀಗೆ ಹೊಸ ಸಾಮಾಜಿಕ ಪರಿಸ್ಥಿತಿಯಲ್ಲಿ ಬ್ರಾಹ್ಮಣಿಸಂ ನೆಲೆನಿಲ್ಲಬೇಕಾದರೆ ಅದರ ಅಲ್ಪಸಂಖ್ಯಾತ ಪದವಿಯನ್ನು ಮೀರಬೇಕಾಗಿತ್ತು. ಆದ್ದರಿಂದ ಚಿತ್ಪಾವನ ಬ್ರಾಹ್ಮಣರ ನೇತೃತ್ವದಲ್ಲಿ ರೂಪುಗೊಂಡ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಮೊದಲು ಪ್ರಯತ್ನಿಸುವುದು ಬ್ರಾಹ್ಮಣರ ನಡುವಿನ ಭಿನ್ನತೆಗಳನ್ನು ಮೀರಿ ಬ್ರಾಹ್ಮಣಿಸಮ್ಮಿಗೆ ಸ್ವತಂತ್ರವಾಗಿ ನಡೆದಾಡಲು ಒಂದು ಸಾಮಾನ್ಯ ಮೆಟ್ಟಿಲು ಕಟ್ಟಲು ಆಗಿತ್ತು. ಮರಾಠ ಪ್ರಾಂತ್ಯದ ಅತ್ಯಂತ ದೊಡ್ಡ ಬ್ರಾಹ್ಮಣ ಸಮುದಾಯವಾಗಿದ್ದ ದೇಶಸ್ಥ ಬ್ರಾಹ್ಮಣರೊಂದಿಗೆ ತಿಲಕ್‌ ಒಪ್ಪಂದಕ್ಕೆ ಹೋಗುವುದು ಈ ಸಂದರ್ಭದಲ್ಲೇ ಆಗಿತ್ತೆಂದು ನಾವು ಈಗಾಗಲೇ ಗಮನಿಸಿದೆವು. ಒಂದು ಕಾಲದಲ್ಲಿ ದೇಶಸ್ಥ ಬ್ರಾಹ್ಮಣರ ಸೇವಕರಾಗಿದ್ದ ಚಿತ್ಪಾವನರು ಶಿವಾಜಿಯ ಮರಾಠಾ ಸಾಮ್ರಾಜ್ಯದ ಅವಿಭಾಜ್ಯ ಘಟಕವಾಗಿ ಬದಲಾದ ನಂತರ ಅವರಿಗಿಂತಲೂ ಮೇಲಿನ ಪ್ರಾಬಲ್ಯ ಸಾಧಿಸಿದ್ದು ದೇಶಸ್ಥರನ್ನು ಕಂಗೆಡಿಸಿತ್ತು. ಹಾಗಾಗಿಯೇ ಚಿತ್ಪಾವನರೊಂದಿಗಿನ ಬಹುತೇಕ ಎಲ್ಲ ರೀತಿಯ ಸಾಮಾಜಿಕ ಸಂಬಂಧಗಳನ್ನು ದೇಶಸ್ಥರು ನಿಷೇಧಿಸಿಕೊಂಡಿದ್ದರು. ತಿಲಕ್ ಮಂದೆ ನಿಂತುಕೊಂಡು ಈ ನಿಷೇಧಗಳಿಗೆ ಕೊನೆ ಹಾಡಿದರು. ಕೆಳಜಾತಿ ಚಳುವಳಿಗಳು ಬ್ರಾಹ್ಮಣ ಪ್ರಾಬಲ್ಯವನ್ನು ಬುಡಮೇಲು ಮಾಡುತ್ತವೆಯೆಂಬ ಭೀತಿಯ ಹಿನ್ನೆಲೆಯಲ್ಲಿ ಈ ಒಪ್ಪಂದ ನಡೆದಿತ್ತು. ಒಟ್ಟಿಗೆ ಕುಳಿತು ಊಟ ಮಾಡುವುದು ಕೂಡ ನಿಷೇಧವಾಗಿದ್ದ ವಿಭಿನ್ನ ಬ್ರಾಹ್ಮಣ ಸಮುದಾಯಗಳನ್ನು ಒಟ್ಟಿಗೆ ಕೂರಿಸಿ ಪಂಕ್ತಿಭೋಜನ ನಡೆಸಲು ತಿಲಕರಿಗೆ ಸಾಧ್ಯವಾಗಿತ್ತು. ಇವುಗಳ ಜೊತೆಗೆ ವೈರುಧ್ಯಗಳ ಬದಲಿಗೆ ಒಪ್ಪಂದಗಳ ಮೂಲಕ ಮಾತ್ರವೇ ಬ್ರಾಹ್ಮಣ ಪ್ರಾಬಲ್ಯವನ್ನು ನೆಲೆನಿಲ್ಲಸಲು ಸಾಧ್ಯವೆಂದು ಕಂಡುಕೊಂಡು ಇತರ ಜನಸಮುದಾಯಗಳನ್ನು ಹಿಂದೂ ಎಂಬ ಒಂದೇ ಛತ್ರಿಯಡಿಗೆ ತರುವ ಪ್ರಯತ್ನಗಳು ಕೂಡ ಇದೇ ಸಮಯದಲ್ಲಿ ಆರಂಭವಾಗಿದ್ದವು. ಸಂಪ್ರದಾಯವಾದಿ ಬ್ರಾಹ್ಮಣ್ಯಕ್ಕೆ ಇದೆಲ್ಲವನ್ನು ಒಪ್ಪಿಕೊಳ್ಳುವ ಶಕ್ತಿಯಿರಲಿಲ್ಲ. ವೈಯಕ್ತಿಕವಾದ ಶುದ್ಧಾಶುದ್ಧಗಳ ಅಡಿಪಾಯದ ಮೇಲೆ ನೆಲೆ ಕಂಡುಕೊಂಡಿದ್ದ ಪ್ರಾಬಲ್ಯವಾಗಿತ್ತು ಅವರ ಪರಿಸರ. ಅದಕ್ಕೆ ಬಹುಜನರ ಸಮ್ಮತಿಯ ಅಗತ್ಯವಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಬಹುಜನರ ಸಮ್ಮತಿಯ ಕವಚವೊಂದು ಬ್ರಾಹ್ಮಣಿಸಮ್ಮಿನ ಪ್ರಾಬಲ್ಯವನ್ನು ಮುಂದುವರಿಸಲು ಅತ್ಯಂತ ಅಗತ್ಯವೆಂದು ನವ-ಸಂಪ್ರದಾಯವಾದಿ ಬ್ರಾಹ್ಮಣವಾದಿಗಳು ನಂಬಿದ್ದರು. ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳು ಅದನ್ನು ಒಂದು ಹಂತದವರೆಗೆ ಸಾಧಿಸಿದ್ದವು ಎಂಬುದನ್ನು ಕೂಡ ನಾವು ಈಗಾಗಲೆ ಗಮನಿಸಿದೆವು.

ಶುದ್ಧಿಚಳುವಳಿಯ ಧರ್ಮದ ಕಲ್ಪನೆ ತಮ್ಮ ನವ-ಸಂಪ್ರದಾಯವಾದಿ ಬ್ರಾಹ್ಮಣ್ಯಕ್ಕೆ ಬೇರುಬಿಟ್ಟು ಬೆಳೆಯಲು ಬೇಕಾದ ಪರಿಸರವನ್ನು ಸೃಷ್ಠಿಸುತ್ತದೆ ಎಂದು ಸಾವರ್ಕರ್‌ ನಂಬಿದರು. ಅದರ ಜೊತೆಗೆ ಜಾತಿ ಅಸ್ಮಿತೆಯನ್ನು ಅರಗಿಸಿಕೊಂಡ ಒಂದು ಧಾರ್ಮಿಕ ಅಸ್ಮಿತೆಯನ್ನು ಕಟ್ಟಿಕೊಟ್ಟರೆ ಜಾತಿ ವಿಷಯದ ಮೇಲೆ ಒಂದು ಪರದೆಯನ್ನು ಹಾಕಿ ಮುಚ್ಚಿಬಿಡಬಹುದೆಂದು ಕೂಡ ಸಾವರ್ಕರ್‌ ಯೋಚಿಸಿರಬಹುದು. ಹಾಗೇನಾದರು ಸಾಧ್ಯವಾದರೆ ಕೆಳಜಾತಿ ಚಳುವಳಿಗಳಿಗೆ ದೊಡ್ಡ ಮುನ್ನಡೆ ಸಿಗದೆ ಹಿಂದೂ ಎಂಬ ಮೇಲ್ಪದರದಲ್ಲಿ ಅವೆಲ್ಲವು ಮುಳುಗಿ ಹೋಗುತ್ತವೆ.

ಅದರ ಜೊತೆಗೆ ಶುದ್ಧಿಚಳುವಳಿ ಎದುರಿಸುತ್ತಿದ್ದ ದೊಡ್ಡದೊಂದು ಪ್ರಶ್ನೆಯನ್ನು ಕೂಡ ಪರಿಹರಿಸಬೇಕಾಗಿತ್ತು. ಹಿಂದೂ ಧರ್ಮ ಜಾತಿ ಮತ್ತು ವರ್ಣಗಳ ಮೇಲೆ ಕಟ್ಟಲ್ಪಟ್ಟಿದ್ದ ಸಂಗತಿಯಾಗಿರುವುರಿಂದ ಮತಾಂತರಗೊಂಡು ಹಿಂದೂಗಳಾದವರ ಜಾತಿ ಯಾವುದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಹಾಗೆ ಮತಾಂತರಗೊಳ್ಳುವವರು ಬ್ರಾಹ್ಮಣರೋ, ಕ್ಷತ್ರಿಯರೋ, ವೈಶ್ಯರೋ, ಶೂದ್ರರೋ ಅಥವಾ ಪಂಚಮರೋ? ಆದ್ದರಿಂದ ಕೇವಲ ಹಿಂದೂ ಎಂಬ ಪರಿಕಲ್ಪನೆಯನ್ನು ವಿಕಾಸಗೊಳಿಸಬೇಕಾದ ತುರ್ತು ಸಾವರ್ಕರ್‌ ನೇತೃತ್ವದ  ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿಗೆ ಇತ್ತು. ಸಂಪ್ರದಾಯವಾದಿ ಬ್ರಾಹ್ಮಣರ ಹಾಗೆ ಸ್ಮೃತಿಗಳಲ್ಲಿ ಮುಳುಗಿ ನಿಂತರೆ ಅದು ಸಾಧ್ಯವಾಗುವುದಿಲ್ಲ ಎಂಬ ವಾಸ್ತವ ಶುದ್ಧಿಚಳುವಳಿಯ ಅನುಭವದಿಂದ ಸಾವರ್ಕರ್‌ಗೆ ಮನದಟ್ಟಾಗಿತ್ತು. ಆದ್ದರಿಂದ ಪುರಾಣಗಳ, ಕಟ್ಟುಕತೆಗಳ ಮತ್ತು ಆಚಾರಗಳ ಆಧಾರದಲ್ಲಿ ಕಟ್ಟಲ್ಪಟ್ಟಿದ್ದ ಹಿಂದೂ ಧರ್ಮವನ್ನು ಸೆಮೆಟಿಕ್‌ ಧರ್ಮಗಳಿಗೆ ಸಮಾನವಾದ ಚಾರಿತ್ರಿಕ ಹಿನ್ನೆಲೆ ಇರುವ ಧರ್ಮವಾಗಿ ಬದಲಾಯಿಸಲು ಇನ್ನಷ್ಟು ತೀವ್ರವಾದ ಪ್ರಯತ್ನಗಳನ್ನು ನಡೆಸಬೇಕಾದ ತುರ್ತಿನ ಬಗ್ಗೆ ಸಾವರ್ಕರ್‌ಗೆ ಮನದಟ್ಟಾಗಿತ್ತು. ತಿಲಕ್‌ ಮತ್ತು ಆ ಕಾಲದ ಕೆಲವು ಇತಿಹಾಸಕಾರರು ಸೇರಿಕೊಂಡು ಶಿವಾಜಿಯ ಸಾಮ್ರಾಜ್ಯವನ್ನು ಹಿಂದೂ ಸಾಮ್ರಾಜ್ಯವಾಗಿ ವ್ಯಾಖ್ಯಾನಿಸುವ ಮೂಲಕ ಆ ಕಾಲದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟ್‌ ಚಳುವಳಿಗೆ ದೊರೆತ ಮುನ್ನಡೆ, ಆ ಚರಿತ್ರೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಮೂಲಕ ಸಾಧಿಸಬಹುದು ಎಂದು ಕೂಡ ಸಾವರ್ಕರ್‌ ಯೋಚಿಸುತ್ತಾರೆ.

ಅದೇ ಹೊತ್ತು ತಾನು ನೀಡಿದ ನಾಲ್ಕು ಕ್ಷಮಾಪಣಾ ಪತ್ರಗಳನ್ನು ಸಾಮ್ರಾಜ್ಯಶಾಗಿ ಪ್ರಭುತ್ವ ತಳ್ಳಿ ಹಾಕಿದ ನಂತರ, ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆಸಿದ ಅದೇ ಪ್ರಭುತ್ವಕ್ಕೆ, ಆ ಕ್ರೌರ್ಯ ನಡೆದು ವರ್ಷ ತುಂಬುವ ಮೊದಲೇ, ೧೯೨೦ ಮಾರ್ಚ್‌ ೨೦ರಂದು ಸಾವರ್ಕರ್‌ ಮತ್ತೊಂದು ಕ್ಷಮಾಪಣಾ ಪತ್ರ ಬರೆಯುತ್ತಾರೆ.

ʼಭಾರತೀಯ ಸರಕಾರದ ಗೌರವಯುತರಾದ ಗೃಹ ಇಲಾಖೆಯ ಮೆಂಬರ್‌, ಯಾವ ವ್ಯಕ್ತಿಯದ್ದೇ ಆಗಿರಲಿ ಅರ್ಜಿಯೊಂದು ತಮ್ಮ ಮುಂದೆ ಬಂದಿತೆಂದರೆ ಅತ್ಯಂತ ಗೌರವಯುತವಾದ ಪರಿಗಣನೆಯನ್ನು ನೀಡುತ್ತಾರೆಂದೂ, ಒಬ್ಬ ವ್ಯಕ್ತಿಯ ಬಿಡುಗಡೆ ಸರಕಾರಕ್ಕೆ ಅಪಾಯಕಾರಿಯಲ್ಲವೆಂದು ಮನದಟ್ಟಾದರೆ ರಾಜಕೀಯ ಕ್ಷಮಾಪಣೆಯನ್ನು ಆತನಿಗೂ ನೀಡಲು ಸರಕಾರದ ತೀರ್ಮಾನ ವಿಸ್ತರಿಸುತ್ತದೆʼ ಎಂಬರ್ಥದಲ್ಲಿ ಈ ನಡುವೆ ನಡೆಸಿದ ಘೋಷಣೆಯ ಬೆಳಕಿನಲ್ಲಿ ಈ ಅರ್ಜಿದಾರ ಅತ್ಯಂತ ವಿನೀತನಾಗಿ ಅಪೇಕ್ಷಿಸುವುದು ಏನೆಂದರೆ, ತನ್ನ ಪ್ರಶ್ನೆ ಬಹಳ ತಡವಾಗುವ ಮೊದಲು ಕೊನೆಯ ಪ್ರಯತ್ನವೆಂಬಂತೆ ಸರಕಾರದ ಎದುರು ಸಮರ್ಪಿಸಲು ಸಮ್ಮತಿಸಬೇಕು ಎಂಬುದು. ಸರ್‌, ಯಾವ ರೀತಿಯಲ್ಲೂ ಈ ಪತ್ರವನ್ನು ವೈಸ್‌ರಾಯ್‌ ಅವರ ಮುಂದಿಡುವುದರಿಂದ ನನ್ನನ್ನು ತಡೆಯಬಾರದು ಎಂದು ಕೇಳಿಕೊಳ್ಳುತ್ತಿದ್ದೇನೆ. ಸರಕಾರದ ತೀರ್ಮಾನ ಅದೇನೇ ಆಗಿದ್ದರು ನನ್ನ ಅಹವಾಲು ಕೇಳಿಸಿಕೊಂಡಿತು ಎಂಬ ತೃಪ್ತಿ ಅದರಿಂದ ನನಗೆ ಲಭಿಸುತ್ತದೆ.

೧. ʼರಾಜಕೀಯ ಮುನ್ನಡೆಗಾಗಿ ಬಯಕೆʼ ಮುಂದಿಟ್ಟುಕೊಂಡು ಕಾನೂನು ಉಲ್ಲಂಘನೆ ನಡೆಸಿದ ಅಪರಾಧಿಗಳಿಗೆ ಕೂಡ ರಾಜಕೀಯ ಕ್ಷಮಾಪಣೆಯನ್ನು ವಿಸ್ತರಿಸುವುದರ ಕುರಿತು, ರಾಜಿಕೀಯ ಘೋಷಣೆ ಉದಾರತೆಯಿಂದ ಪ್ರತಿಪಾದಿಸುತ್ತಿದೆ. ನನ್ನ ಮತ್ತು ನನ್ನ ಸಹೋದರನ ಪ್ರಕರಣಗಳು ಖಂಡಿತವಾಗಿಯೂ ಈ ವಿಭಾಗದಲ್ಲಿ ಬರುವಂತವು. ನಾನಾಗಲೀ ನನ್ನ ಕುಟುಂಬವಾಗಲೀ ಸರಕಾರ ನಮ್ಮೊಂದಿಗೆ ಯಾವುದಾದರು ವೈಯಕ್ತಿಕ ಅಪರಾಧ ಎಸಗಿತ್ತೆಂದಾಗಲೀ ಏನಾದರು ವೈಯಕ್ತಿಕ ಸವಲತ್ತುಗಳನ್ನು ನಿಷೇಧಿಸಿತ್ತೆಂದಾಗಲೀ ಎಂದೂ ದೂರಿಕೊಂಡಿಲ್ಲ. ನನ್ನ ಮುಂದೆ ಉಜ್ವಲವಾದ ಉದ್ಯೋಗ ಸಾಧ್ಯತೆಗಳು ಇರುವಾಗಲೂ ನಾನು ಅಪಾಯಕಾರಿಯಾದ ಹಾದಿ ಆಯ್ದುಕೊಳ್ಳುವ ಮೂಲಕ ಏನೇನೂ ಸಾಧಿಸಿಲ್ಲವೆಂದು ಮಾತ್ರವಲ್ಲ ಇರುವುದೆಲ್ಲವನ್ನು ಕಳೆದುಕೊಂಡೂ ಬಿಟ್ಟಿರುವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ೧೯೧೩ರಲ್ಲಿ ಗೃಹ ಇಲಾಖೆಯ ಗೌರವಯುತರಾದ ಸದಸ್ಯರುಗಳಲ್ಲಿ ಒಬ್ಬರು ನನ್ನ ಬಳಿ ವೈಯಕ್ತಿಕವಾಗಿ ಹೀಗೆ ಹೇಳಿದ್ದರು, ʼ…ಇಷ್ಟೊಂದು ವಿದ್ಯೆ ಮತ್ತು ಇಷ್ಟೊಂದು ಓದು… ನೀವು ನಮ್ಮ ಸರಕಾರದಲ್ಲಿ ಉನ್ನತವಾದ ಉದ್ಯೋಗದಲ್ಲಿರಬೇಕಾದ ವ್ಯಕ್ತಿ.ʼ ಈ ಪ್ರಮಾಣಪತ್ರದಿಂದ ಆಚೆ, ನನ್ನ ಚಿಂತನೆಗಳು ಏನಾದರು ಅಡಗಿಕೊಂಡಿವೆಯೆಂದು ಯಾರಾದರು ಭಾವಿಸುವುದಾದರೆ ಅವರಿಗೆ ಹೇಳಿಲಿಕ್ಕಿರುವುದು ೧೯೦೯ರ ತನಕ ನನ್ನ ಕುಟುಂಬದ ಯಾರು ಕೂಡ ಪ್ರಾಸಿಕ್ಯೂಷನ್‌ ಎದುರಿಸಿಲ್ಲ ಎಂದು. ಪ್ರಾಸಿಕ್ಯೂಷನ್‌, ಜಡ್ಜುಗಳು ಮತ್ತು ರೌಲತ್‌  ರಿಪೋರ್ಟ್‌ ಎತ್ತಿ ತೋರಿಸುವ, ೧೮೯೯ ರಿಂದ ೧೯೦೯ರ ವರೆಗಿನ ವರ್ಷಗಳಲ್ಲಿ ಮಸ್ಸಿನಿಯ ಆತ್ಮಕತೆ ಬರೆದ ಕುರಿತು, ವಿವಿಧ ಸಂಘಟನೆಗಳನ್ನು ಬಹಳ ಚೆನ್ನಾಗಿ ಕಟ್ಟಿದ ಕುರಿತು, ಅದಕ್ಕೂ ಮಿಗಿಲಾಗಿ ನನ್ನ ಸಹೋದರರ ಅರೆಸ್ಟಿಗಿಂತ ಮೊದಲು ಆಯುಧಗಳ ಪಾರ್ಸೆಲ್‌ ಕಳುಹಿಸಿದ ಕುರಿತು ನನಗೆ ವೈಯಕ್ತಿಕವಾದ ದೂರುಗಳೇನೂ ಇಲ್ಲ. (ರೌಲತ್ ವರದಿ ಪುಟ ೬). ಆದರೆ ಯಾರಾದರೊಬ್ಬರು ನಮ್ಮ ಪ್ರಕರಣಗಳ ವಿಷಯದಲ್ಲಿ ಇಂತಹದ್ದೊಂದು ದೃಷ್ಟಿಕೋಣ ಇಟ್ಟುಕೊಂಡಿದ್ದರೇ? ಹೌದು. ೫೦೦೦ಕ್ಕಿಂತ ಕಡಿಮೆಯಿಲ್ಲದ ಸಹಿಗಳೊಂದಿಗೆ ಭಾರತೀಯ ಜನತೆ ತಮ್ಮ ಮುಂದಿಟ್ಟ ಬೃಹತ್ ಅರ್ಜಿಯಲ್ಲಿ ನನ್ನ ಹೆಸರನ್ನು ಕೂಡ ವಿಶೇಷವಾಗಿ ಹೇಳಲಾಗುತ್ತಿದೆ. ವಿಚಾರಣೆಯಲ್ಲಿ ನನಗಾಗಿ ವಾದಿಸಲು ಜ್ಯೂರಿ ನಿರಾಕರಿಸಲಾಯಿತು. ರಾಜಕೀಯ ಮುನ್ನಡೆಯ ಬಯಕೆಯೇ ನನ್ನ ಕೃತ್ಯಗಳ ಹಿಂದೇ ಇದ್ದದ್ದು ಮತ್ತು ಪಶ್ಚಾತಾಪ ಪಡುವ ರೀತಿಯಲ್ಲಿ ಕಾನೂನು ಉಲ್ಲಂಘನೆಗೆ ನನ್ನನ್ನು ನಡೆಸಿದ್ದು ಎಂದು ಈಗ ಎಲ್ಲ ದೇಶಗಳ ಜ್ಯೂರಿಗಳು ಅಭಿಪ್ರಾಯ ಪಡುತ್ತಿದ್ದಾರೆ.

೨. ಕೊಲೆಗೆ ಪ್ರೇರಣೆಯ ಹೆಸರಿನಲ್ಲಿ ದಾಖಲಾಗಿರುವ ಎರಡನೆಯ ಪ್ರಕರಣವೂ ರಾಜಕೀಯ ಕ್ಷಮಾಪಣೆಯ ಪರಿಧಿಗೆ ಬಾರದೆ ಇರುವುದಿಲ್ಲ. ಕಾರಣ:

a. ರಾಜಕೀಯ ಘೋಷಣೆಯು ಅಪರಾಧದ ಸ್ವಭಾವದ ಬಗ್ಗೆಯಾಗಲೀ, ಅಪರಾಧದ ಇಲಾಖೆಯ ಕುರಿತಾಗಲೀ, ಯಾವ ಕೋರ್ಟ್‌ ಶಿಕ್ಷೆ ವಿಧಿಸಿತು ಎಂಬುದರ ಬಗ್ಗೆಯಾಗಲೀ ಯಾವ ರೀತಿಯಲ್ಲೂ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ. ಬದಲಿಗೆ ಅದು ಪ್ರಾಶಸ್ತ್ಯ ನೀಡುವುದು ಅಪರಾಧದ ಪ್ರಚೋದನೆಯ ಕುರಿತು. ಪ್ರಚೋದನೆ ವೈಯಕ್ತಿಕವಲ್ಲದೆ ರಾಜಕೀಯವಾಗಿರಬೇಕು ಎಂಬುದಕ್ಕೆ ಮಾತ್ರ ಅದು ಪ್ರಾಶಸ್ತ್ಯ ನೀಡುವುದು.

b. ಎರಡನೆಯದಾಗಿ, ಸರಕಾರವೇ ಅದನ್ನು ವಿವರಿಸಿರುವುದು ಇದನ್ನು ಮುಂದಿಟ್ಟುಕೊಂಡೇ ಆಗಿದೆ. ಆ ಪ್ರಕಾರ ಬಾರ್‌ (ಬಾರಿನ್‌ ಘೋಷ್)‌ ಮತ್ತು ಹೇಮು (ಹೇಮ ಚಂದ್ರದಾಸ್)‌ ಸಹಿತ ಉಳಿದವರನ್ನು ಬಿಡುಗಡೆಯೂ ಮಾಡಲಾಗಿದೆ. ಅವರ ಗೂಢಾಲೋಚನೆಯ ಒಂದು ಗುರಿ ʼಉನ್ನತ ಅಧಿಕಾರಿಗಳ ಕೊಲೆʼ ಆಗಿತ್ತು ಎಂದು ಸ್ವತಃ ಅವರುಗಳೇ ತಮ್ಮ ತಪ್ಪೊಪ್ಪಿಗೆಯಲ್ಲಿ ಹೇಳಿಕೊಂಡಿದ್ದರು. ಮ್ಯಾಜಿಸ್ಟ್ರೇಟರ್‌ ಮತ್ತಿತರರನ್ನು ಕೊಲೆ ಮಾಡಲು ಮಕ್ಕಳನ್ನು ಕಳುಹಿಸಿದ ಬಗ್ಗೆಯೂ ಅವರು ತಪ್ಪೊಪ್ಪಿಗೆಯಲ್ಲಿ ದಾಖಲಿಸಿದ್ದಾರೆ. ಈ ಮ್ಯಾಜಿಸ್ಟ್ರೇಟ್‌ ಬಾರ್‌ನ ಸಹೋದರ ಅರಬಿಂದೋರನ್ನು ಮೊದಲ ಬಂದೇಮಾತರಂ ನ್ಯೂಸ್‌ ಪೇಪರ್‌ ಪ್ರಕರಣದಲ್ಲಿ ಶಿಕ್ಷಿಸಿದ ತಂಡದಲ್ಲಿ ಒಬ್ಬರಾಗಿದ್ದರು. ಆದರೂ ಕೂಡ ಸಂಶಯಾತೀತವಾಗಿ ಬಾರ್‌ನನ್ನು ರಾಜಕೀಯ ಖೈದಿಯಾಗಿ (ವೈಯಕ್ತಿಕ ದ್ವೇಷಕ್ಕೆ ಅಪರಾಧ ಎಸಗಿದವನಲ್ಲ) ಪರಿಗಣಿಸಲಾಯಿತು. ನನ್ನ ವಿಷಯದಲ್ಲಿ ತಡೆಯಾಗಿರುವುದು ಅದಕ್ಕಿಂತಲೂ ದುರ್ಬಲ ಕಾರಣವೆಂದು ನಾನು ನಂಬಿದ್ದೇನೆ. ಮಿಸ್ಟರ್‌ ಜಾಕ್ಸನ್‌ ಅವರನ್ನು ಕೊಲ್ಲುವ ಗೂಢಾಲೋಚನೆಯ ಬಗ್ಗೆ ಆ ಕಾಲದಲ್ಲಿ ಇಂಗ್ಲೆಂಡಿನಲ್ಲಿದ್ದ ನನಗೆ ಯಾವ ಮಾಹಿತಿಯೂ ಇರಲಿಲ್ಲವೆಂದೂ, ನನ್ನ ಸಹೋದರನ ಅರೆಸ್ಟಿಗಿಂತಲೂ ಮೊದಲೇ ನಾನು ಬಂದೂಕುಗಳನ್ನು ಕಳುಹಿಸಿದ್ದೆನೆಂದೂ, ಆದ್ದರಿಂದಲೇ ಯಾವುದಾದರು ನಿರ್ದಿಷ್ಟ ಅಧಿಕಾರಿಯ ವಿರುದ್ಧ ನನಗೆ ನಿರ್ದಿಷ್ಟ ಕಾರಣಕ್ಕೆ ಶತೃತ್ವ ಇರಲಿಲ್ಲವೆಂದೂ ಪ್ರಾಸಿಕ್ಯೂಷನ್‌ ಒಪ್ಪಿಕೊಂಡಿದೆ. ಅದೇ ಹೊತ್ತು, ಕೆನಡಿಗಳನ್ನು ಕೊಂದ ಬಾಂಬನ್ನು ಸ್ವತಃ ಹೇಮು ತಯಾರಿಸಿದ್ದ. ಅದರ ಬಳಕೆಯ ಫಲದ ಸಂಪೂರ್ಣ ಅರಿವಿನೊಂದಿಗೆ ಅದನ್ನು ಮಾಡಿರುವುದು (ರೌಲತ್ ವರದಿ ಪುಟ ೩೩). ಆದರೂ ಇವೆಲ್ಲದರ ಆಧಾರದಲ್ಲಿ ಹೇಮುವನ್ನು ರಾಜಕೀಯ ಕ್ಷಮಾಪಣೆಯಿಂದ ಹೊರಗೆ ನಿಲ್ಲಿಸಲಿಲ್ಲ. ಬಾರ್‌ ಮತ್ತಿತರಿಗೆ ವ್ಯತಿರಿಕ್ತವಾದ ಪ್ರೇರಣಾಪರಾಧಕ್ಕೆ ಬೇರೆ ಬೇರೆ ದೋಷಾರೋಪ ಹೊರಿಸದಿರಲು ಕಾರಣ ಗೂಢಾಲೋಚನೆ ಪ್ರಕರಣದಲ್ಲಿ ಅವರಿಗೆ ಈಗಾಗಲೇ ಗಲ್ಲುಶಿಕ್ಷೆ ವಿಧಿಸಲಾಗಿತ್ತು ಎಂಬುದು. ನನ್ನ ಮೇಲೆ ಬೇರೆಯದೇ ದೋಷಾರೋಪ ಹೊರಿಸಲು ಕಾರಣ ನಾನು ಹಾಗಲ್ಲದಿರುವುದರಿಂದ ಮತ್ತು ಫ್ರಾನ್ಸ್‌ಗೆ ನನ್ನನ್ನು ಮರಳಿಸುವುದಾದರೆ ನನಗೆ ಸಿಗಬಹುದಾಗಿದ್ದ ಅಂತರಾಷ್ಟ್ರೀಯ ಸೌಲಭ್ಯಗಳ ಕಾರಣದಿಂದ. ಆದ್ದರಿಂದ ಅಧಿಕಾರಿಗಳ ಕೊಲೆಯ ಗೂಢಾಲೋಚನೆಯಲ್ಲಿ ಪಾಲುಗೊಂಡ ಬಗ್ಗೆ ಇನ್ನಷ್ಟು ವಿಶಾಲವಾಗಿ ತಪ್ಪೊಪ್ಪಿಗೆ ಮಾಡಿಕೊಂಡ ಬಾರ್‌ ಮತ್ತು ಹೇಮು ಅವರಿಗೆ ನೀಡಿದ ಕ್ಷಮಾಪಣೆಯನ್ನು ನನ್ನ ತನಕವೂ ವಿಸ್ತರಿಸಬೇಕೆಂದು ನಾನು ವಿನಯಪೂರ್ವಕ ವಿನಂತಿಸಿಕೊಳ್ಳುತ್ತಿದ್ದೇನೆ. ಕಾನೂನಿನ ಒಂದು ಕಾಲಂ ಎಂಬುದು ಆ ಕಾಲಮ್ಮಿನಡಿಯಲ್ಲಿ ಬರುವ ಅಪರಾಧಕ್ಕಿಂತ ದೊಡ್ಡದಲ್ಲ. ನನ್ನ ಸಹೋದರನ ಪ್ರಕರಣದಲ್ಲಿ ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಯಾಕೆಂದರೆ, ಆ ಪ್ರಕರಣ ಯಾವ ಕೊಲೆಯ ಬಗ್ಗೆಯೂ ಇರುವುದಲ್ಲ.

೩. ಆದ್ದರಿಂದ, ಬಾರ್‌ ಮತ್ತು ಹೇಮು ಅವರುಗಳ ಪ್ರಕರಣದಲ್ಲಿ ಸರಕಾರ ಈಗ ಮಾಡಿರುವ ಪ್ರಕಾರ (ರಾಜಕೀಯ) ಘೋಷಣೆಯನ್ನು ವ್ಯಾಖ್ಯಾನಿಸುವುದಾದರೆ ನಾನು ಮತ್ತು ನನ್ನ ಸಹೋದರ ʼಪೂರ್ಣಾರ್ಥದಲ್ಲಿʼ ರಾಜಕೀಯ ಕ್ಷಮಾಪಣೆಗೆ ಅರ್ಹರಿದ್ದೇವೆ. ಆದರೆ, ಅದು ಸಾರ್ವಜನಿಕ ಸುರಕ್ಷತೆಯೊಂದಿಗೆ ಹೊಂದಿಕೊಳ್ಳುತ್ತದೆಯೇ? ಹೊಂದಿಕೊಳ್ಳುತ್ತದೆಯೆಂದು ನಾನು ಸಂಪೂರ್ಣವಾಗಿ ನಂಬಿಕೊಂಡಿದ್ದೇನೆ. ಕಾರಣ:

a. ಗೃಹ ಕಾರ್ಯದರ್ಶಿಗಳು ಹೇಳಿದ ಹಾಗೆ ನಾವು ʼಅರಾಜಕತೆಯ ಕ್ರಿಮಿಗಳʼ ಸಾಲಿಗೆ ಸೇರುವವರಲ್ಲ ಎಂದು ಗಟ್ಟಿಯಾಗಿ ಘೋಷಿಸುತ್ತಿದ್ದೇವೆ. ಇಲ್ಲಿಯ ತನಕದ ತೀವ್ರವಾದಿ ಶಾಲೆಗಳಾದ ಕುರೋಪಾಟ್ಕಿನ್ ಅಥವಾ ಟಾಲ್‌ಸ್ಟಾಯ್‌ ಅವರುಗಳ ಶಾಂತಿ ಮತ್ತು ತತ್ವಚಿಂತಾ ಪರವಾದ ಅರಾಜಕತಾವಾದಕ್ಕೆ ಕೂಡ ನಾನೇನೂ ಕೊಡುಗೆ ನೀಡಿಲ್ಲ. ನನ್ನ ಭೂತಕಾಲದ ಕ್ರಾಂತಿಕಾರಿ ನಾಯಕತ್ವದ ಕುರಿತು ಹೇಳುವುದಾದರೆ, ೧೯೧೮ರ ಮತ್ತು ೧೯೧೪ರ ನನ್ನ ನಿವೇದನೆಗಳಲ್ಲಿ ಸಂವಿಧಾನವನ್ನು ಗೌರವಿಸುವ ನನ್ನ ದೃಢನಿಶ್ಚಯವನ್ನು ಮತ್ತು ಮಿಸ್ಟರ್‌ ಮೊಂಟಾಗು ರೂಪುರೇಷೆ ನೀಡಿದ ಕಾರ್ಯಕರ್ಮ ನಡೆಯುವುದೇ ಆದರೆ, ಅದರಂತೆ ನಡೆದುಕೊಳ್ಳಲು ನಾನು ತಯಾರಾಗಿರುವುದನ್ನೂ ಹೇಳಿಕೊಂಡಿದ್ದೇನೆ. ಸುಧಾರಣೆಗಳು ಮತ್ತು ಅದರ ಬೆನ್ನಿಗೆ ಬಂದ ಘೋಷಣೆಯು ನನ್ನ ನಿಲುವಿಗೆ ಕಟಿಬದ್ಧನಾಗಿರಲು ನನ್ನನ್ನು ಪ್ರೇರೇಪಿಸುತ್ತಿವೆ. ಈ ನಡುವೆ ಕ್ರಮಬದ್ಧವೂ ಸಂವಿಧಾನತ್ಮಕವೂ ಆದ ಅಭಿವೃದ್ಧಿಯ ಪಕ್ಷ ಸೇರುವುದರ ಬಗ್ಗೆ ನನಗಿರುವ ನಂಬಿಕೆ ಮತ್ತು ಸಮ್ಮತಿಯನ್ನು ನಾನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದೇನೆ. ಭೂತಕಾಲದಲ್ಲಿ ಶತ್ರುಗಳಾಗಿದ್ದ, ಭವಿಷ್ಯತ್ತಿನಲ್ಲೂ ಶತ್ರುಗಳಾಗಬಹುದಾದ, ಉತ್ತರದ ತೀವ್ರವಾದಿಗಳಾದ ಏಷ್ಯನ್‌ ದೇಶಗಳಿಂದ ನಮ್ಮ ದೇಶ ಎದುರಿಸುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಭಾರತವನ್ನು ಆತ್ಯಂತಿಕವಾಗಿ ಪ್ರೀತಿಸುವ ಪ್ರತಿಯೊಬ್ಬರೂ ದೇಶದ ಹಿತಕ್ಕಾಗಿ ಹೃದಯಪೂರ್ವಕವಾಗಿ, ವಿನೀತರಾಗಿ ಬ್ರಿಟಿಷರೊಂದಿಗೆ ಕೈ ಜೋಡಿಸಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದಲೇ ೧೯೧೪ರಲ್ಲಿ ಯುದ್ಧ ಶುರುವಾದಾಗ ಭಾರತದ ವಿರುದ್ಧ ಆಗಬಹುದಾಗಿದ್ದ ಜರ್ಮನ್-ಟರ್ಕಿ-ಅಫ್ಘಾನ್‌ ದಾಳಿಯ ವಿರುದ್ಧ ಸ್ವಯಂ ಸೇವಕನಾಗಿ ನನ್ನನ್ನು ನಾನೇ ವಾಗ್ದಾನ ಮಾಡಿಕೊಂಡಿದ್ದೆ. ತಾವು ನಂಬಿದರೂ ಬಿಟ್ಟರೂ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲು ಮತ್ತು ಪರಸ್ಪರ ಸಹಕಾರದ ಸ್ನೇಹ ಮತ್ತು ಗೌರವವನ್ನು ಬ್ರಿಟಿಷ್‌ ಡೊಮಿನಿಯನ್ನಲ್ಲಿ ತರಲು ನಾನು ನನ್ನ ಕೈ ಮೀರಿ ಪ್ರಯತ್ನ ಪಡುತ್ತೇನೆಂದು ಆತ್ಮಾರ್ಥವಾಗಿ ದಾಖಲಿಸುತ್ತಿದ್ದೇನೆ. ಅಂತಹದ್ದೊಂದು ಸಾಮ್ರಾಜ್ಯ ಘೋಷಣೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅದು ಹೃದಯವನ್ನು ತಾಕಿದೆ. ಖಂಡಿತವಾಗಿಯೂ ಭಾರತೀಯರಲ್ಲ ಎಂಬ ಕಾರಣಕ್ಕೆ ನಾನು ಯಾವ ವರ್ಗದವರನ್ನೂ ಗೋತ್ರದವರನ್ನೂ ಜನರನ್ನೂ ದ್ವೇಷಿಸಲಾರೆ.

b. ನನ್ನ ಕಡೆಯಿಂದ ಇನ್ನಷ್ಟು ಭದ್ರತೆಯನ್ನು ಸರಕಾರ ನಿರೀಕ್ಷಿಸುತ್ತದೆಯಾದರೆ, ಸರಕಾರ ಸೂಚಿಸುವ ನಿರ್ದಿಷ್ಟ ಮತ್ತು ಯುಕ್ತವೂ ಆದ ಸಮಯದ ತನಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಲು ನನಗೆ ಮತ್ತು ನನ್ನ  ಸಹೋದರನಿಗೆ ಸಂಪೂರ್ಣ ಒಪ್ಪಿಗೆಯಿದೆ. ಅಂತಹದ್ದೊಂದು ಪ್ರತಿಜ್ಞೆ ಸ್ವೀಕರಿಸದಿದ್ದರೂ ಕೂಡ ನನ್ನ ಕೆಡುತ್ತಿರುವ ಆರೋಗ್ಯ, ನನಗೆ ನಾನೇ ನಿಷೇಧಿಸಿಕೊಂಡಿರುವ ಮನೆಯ ಮಧುರಾನುಗ್ರಹಗಳು ಮತ್ತು ಶಾಂತವೂ ಮೌನವೂ ಆದ ಬದುಕು ನಡೆಸಲು ನನ್ನಲ್ಲಿರುವ ಬಯಕೆಯ ಕಾರಣದಿಂದ ರಾಜಕಾರಣದಲ್ಲಿ ಸಕ್ರಿಯನಾಗುವುದಕ್ಕೆ ನನ್ನನ್ನು ಪ್ರಚೋದಿಸಲಾರವು.

C. ಇದಲ್ಲದಿದ್ದರೆ ಇನ್ನೊಂದು ಪ್ರತಿಜ್ಞೆ, ಉದಾಹರಣೆಗೆ ಯಾವುದಾದರು ಒಂದು ಪ್ರಾಂತ್ಯದಲ್ಲಿ ನಿಂತುಕೊಂಡು, ಬಿಡುಗಡೆಯ ನಂತರ ಒಂದು ನಿರ್ದಿಷ್ಟ ಸಮಯದ ತನಕ ನಮ್ಮ ಚಲನವಲನಗಳನ್ನು ಪೊಲೀಸರಿಗೆ ತಿಳಿಸುತ್ತಾ, ಮೊದಲಾಗಿ ಪ್ರಭುತ್ವದ ಸುರಕ್ಷೆ ಖಚಿತಗೊಳಿಸುವ ರೀತಿಯಲ್ಲಿ ಇತರ ಯಾವುದೇ ನಿಬಂಧನೆಗಳನ್ನು ನಾನು ಮತ್ತು ನನ್ನ ಸಹೋದರ ಸಂತೋಷಪೂರ್ವಕವಾಗಿ ಸ್ವೀಕರಿಸುತ್ತೇವೆ. ಕೊನೆಯದಾಗಿ ನಾನು ಕೇಳಿಕೊಳ್ಳುತ್ತಿರುವುದೇನೆಂದರೆ, ಪ್ರಭುತ್ವದ ನಿಜವಾದ ಸೃಷ್ಠಿಕರ್ತರಾದ ಜನರಲ್ಲಿ ಬಹುಪಾಲು ಜನರು, ಗೌರವಯುತರಾದ ಹಿರಿಯ ನಾಯಕರೂ ಮಿತವಾದಿಗಳೂ ಆದ ಸುರೇಂದ್ರನಾಥ್‌ ಅವರಿಂದ ಹಿಡಿದು ಬೀದಿಯ ಸಾಧಾರಣ ಮನುಷ್ಯರ ತನಕ, ಪತ್ರಿಕೆಗಳು ಮತ್ತು ಮಾಧ್ಯಮಗಳು, ಪಂಜಾಬಿನಿಂದ ಮದ್ರಾಸ್‌ ತನಕದ ಹಿಂದೂಗಳು ಮತ್ತು ಮುಹಮ್ಮದೀಯರು, ಎಲ್ಲರೂ ನಮ್ಮ ತಕ್ಷಣದ, ಸಂಪೂರ್ಣ ಬಿಡುಗಡೆಗಾಗಿ ಆಗ್ರಹಿಸುತ್ತಿದ್ದಾರೆ ಮತ್ತು ಅದು ಅವರ ಸುರಕ್ಷೆಯೊಂದಿಗೆ ಬೆರೆಯುವ ಸಂಗತಿಯಾಗಿದೆಯೆಂದು ಅವರು ಸ್ಪಷ್ಟಪಡಿಸಿದ್ದಾರೆ. (ರಾಜಕೀಯ) ಘೋಷಣೆ ಗುರಿಯಿಟ್ಟಿರುವ ಜನರ ನಡುವಿನ ʼಕಹಿ ಭಾವನೆʼಗಳನ್ನು ತೊಡೆದು ಹಾಕುವುದು ಎಂಬ ಗುರಿಯನ್ನು ಮುಟ್ಟಲು ಸಹಕಾರಿಯಾಗುವ ಸಂಗತಿ ಅದಾಗಿರುತ್ತದೆಯೆಂದು ಜನರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆದ್ದರಿಂದ ಉದಾರವಾದ ಕ್ಷಮಾಪಣೆಯ ಪಾಲು ಇದುವರೆಗೆ ಲಭಿಸದಿರುವ ನಾವಿಬ್ಬರು ಮತ್ತು ನಮ್ಮಂತಹ ಇತರರ ಬಿಡುಗಡೆ ಖಚಿತವಾಗದ ಹೊರತು ಘೋಷಣೆಯ ನಿಜವಾದ ಗುರಿಯಾದ ಕಹಿ ಭಾವನೆಗಳನ್ನು ತೊಡೆದು ಹಾಕುವುದು ಅಸಾಧ್ಯವೆಂದು ನಾನು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ.

೪. ಅಷ್ಟೇ ಅಲ್ಲದೆ, ಒಂದು ಶಿಕ್ಷೆಯನ್ನು ಪೂರ್ಣವಾಗಿ ನಾವು ಅನುಭವಿಸಿದ್ದೇವೆ. ಕಾರಣ:

a. ನಾವು ಹತ್ತು ಹನ್ನೊಂದು ವರ್ಷಗಳಿಂದ ಜೈಲಿನಲ್ಲಿ ಕಳೆಯುತ್ತಿದ್ದೇವೆ. ಅದೇ ಹೊತ್ತು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸನ್ಯಾಲ್‌ (ಸಚೀಂದ್ರನಾಥ್‌ ಸನ್ಯಾಲ್)‌ ನಾಲ್ಕು ವರ್ಷ ಪೂರ್ಣವಾಗುವಷ್ಟರಲ್ಲಿ ಬಿಡುಗಡೆಗೊಂಡರು. ಗಲಭೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು ಒಂದು ವರ್ಷದ ಒಳಗಡೆ ಬಿಡುಗಡೆಗೊಂಡರು.

b. ನಾವು ಮಿಲ್ ಮತ್ತು ಎಣ್ಣೆಗಾಣಗಳಲ್ಲಿ ಕಠಿಣವಾದ ಕೆಲಸ ಮಾಡಿಕೊಂಡು, ಭಾರತದಲ್ಲಿ ಮತ್ತು ಇಲ್ಲಿ ಜೈಲು ವಾಸದ ಭಾಗವಾಗಿ ನೀಡಿರುವ ಇತರ ಕೆಲಸಗಳನ್ನು ಮಾಡುತ್ತಿದ್ದೇವೆ.

c. ಜೈಲಿನಲ್ಲಿ ನಮ್ಮ ಸ್ವಭಾವ ಈಗ ಬಿಡುಗಡೆಗೊಂಡವರ ಸ್ವಭಾವಕ್ಕಿಂತ ಚೂರೂ ಕಡಿಮೆಯಿರಲಿಲ್ಲ. ಅವರೆಲ್ಲ, ಪೋರ್ಟ್‌ ಬ್ಲೇರಿನಲ್ಲಿ ಕೂಡ ಹೊಸತೊಂದು ಗುಢಾಲೋಚನೆ ಪ್ರಕರಣದಲ್ಲಿ ಸಂಶಯಾಸ್ಪದರಾಗಿ ಪುನಹ ಜೈಲು ಸೇರಿದ್ದಾರೆ. ಆದರೆ ನಾವಿಬ್ಬರು ಇದಕ್ಕೆ ವ್ಯತಿರಿಕ್ತವಾಗಿ ಈ ದಿನದ ತನಕ ಸಾಮಾನ್ಯಕ್ಕಿಂತ ಹೆಚ್ಚೇ ಶಿಸ್ತು ಮತ್ತು ಗಂಭೀರತೆಯನ್ನು ಪಾಲಿಸಿಕೊಂಡು ಬಂದಿದ್ದೇವೆ ಮತ್ತು ಕಳೆದ ಆರು ವರ್ಷಗಳಲ್ಲಿ ಒಂದು ಶಿಸ್ತು ಕ್ರಮವೂ ನಮ್ಮ ಮೇಲೆ ಬಾರದ ಹಾಗೆ ನಡೆದುಕೊಂಡಿದ್ದೇವೆ.

೫. ಕೊನೆಯದಾಗಿ, ಅಂಡಮಾನಿಂದ ಬಿಡುಗಡೆಗೊಂಡವರು ಸಹಿತ ನೂರಾರು ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿದರ ಬಗ್ಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ನನಗೆ ಅವಕಾಶ ನೀಡಬೇಕು. ಆ ಮೂಲಕ ೧೯೧೪ರ ಮತ್ತು ೧೯೧೮ರ ನನ್ನ ನಿವೇದನೆಗಳನ್ನು ಭಾಗಶಃ ನೆರವೇರಿಸಿದಕ್ಕೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಆದ್ದರಿಂದಲೇ ನಾನು ಮತ್ತು ನನ್ನ ಸಹೋದರ ಸಹಿತ ಅದೇ ಅಪರಾಧ ಎಸಗಿದ ಉಳಿದ ಖೈದಿಗಳನ್ನು ಗೌರವಯುತರಾದ ಮಹಾಪ್ರಭುಗಳು ತಕ್ಷಣವೇ ಬಿಡುಗಡೆಗೊಳಿಸುತ್ತಾರೆ ಎಂದು ನಿರೀಕ್ಷಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಮಹರಾಷ್ಟ್ರದ ರಾಜಕೀಯ ವಾತಾವರಣ ಕಳೆದ ಕೆಲ ಕಾಲದಿಂದ ಯಾವ ರೀತಿಯ ಅಸ್ವಸ್ಥತೆಗಳನ್ನೂ ಅನುಭವಿಸದಿರುವಾಗ. ಆದರೂ ನಾನಿಲ್ಲಿ ಅರುಹುತ್ತಿರುವುದೇನೆಂದರೆ, ನಮ್ಮ ಬಿಡುಗಡೆಯ ನಿಬಂಧನೆಗಳು ಈಗ ಬಿಡುಗಡೆಗೊಂಡವರದ್ದೋ ಅಥವಾ ಬೇರೆ ಯಾರದ್ದೋ ಸ್ವಭಾವದ ಆಧಾರದಲ್ಲಿ ಆಗಿರಬಾರದು. ಯಾಕೆಂದರೆ ನಮ್ಮ ಬಿಡುಗಡೆಯನ್ನು ನಿರಾಕರಿಸುವುದು ಮತ್ತು ಇತರರ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವುದು ಅಸಂಬದ್ಧವಾಗಿರುತ್ತದೆ.

೬. ಈ ಸಂಗತಿಗಳ ಹಿನ್ನೆಲೆಯಲ್ಲಿ, ವಿವೇಕಪೂರ್ಣವಾದ ಯಾವ ಪ್ರತಿಜ್ಞೆಯನ್ನು ಬೇಕಾದರು ಸ್ವೀಕರಿಸಲು ನನ್ನ ಸ್ವಯಂ ಸನ್ನದ್ದತೆ, ಕಾರ್ಯಗತಗೊಳಿಸಿದ ಮತ್ತು ವಾಗ್ದಾನ ನೀಡಿದ ಸುಧಾರಣೆಗಳು, ಉತ್ತರದ ಟರ್ಕಿ-ಅಫ್ಘಾನ್‌ ಭಯೋತ್ಪಾದಕರ ದಾಳಿಯ ಆತಂಕ ಎಲ್ಲವೂ ಸೇರಿ ನನ್ನನ್ನು ನಮ್ಮ ಎರಡು ರಾಷ್ಟ್ರಗಳ ನಡುವಿನ ಸಮಾನ ಆಸಕ್ತಿಗಳ ನಂಬಿಕೆಯ ಸಹಕಾರದ ವಕ್ತಾರನನ್ನಾಗಿ ಬದಲಾಯಿಸಿದೆ. ಅದನ್ನು ಮುಂದಿಟ್ಟುಕೊಂಡು ಸರಕಾರ ನನ್ನನ್ನು ಬಿಡುಗಡೆಗೊಳಿಸುತ್ತದೆಯೆಂದೂ ನನ್ನ ವೈಯಕ್ತಿತ ಕೃತಜ್ಞತೆಗಳನ್ನು ಸ್ವೀಕರಿಸುತ್ತದೆಯೆಂದೂ ಭಾವಿಸಿದ್ದೇನೆ. ನನ್ನ ಆರಂಭ ಕಾಲದ ಬದುಕಿನ ಉಜ್ವಲ ಬಯಕೆಗಳು ದಿಢೀರನೆ ನಂದಿ ಹೋದವು. ಅದು ನೋವುಭರಿತವಾಗಿತ್ತು. ಬಿಡುಗಡೆ ನನಗೆ ಹೊಸ ಹುಟ್ಟು ನೀಡುತ್ತದೆಯೆಂದೂ, ಅದು ನನ್ನ ಹೃದಯವನ್ನು ಸ್ಪರ್ಶಿಸುತ್ತದೆಯೆಂಬ ಭಾವನಾತ್ಮಕತೆಯೂ, ಆ ಕ್ಷಮಾಪಣೆಗೆ ಶರಣಾಗಿರುವ ನನ್ನ ಪಶ್ಚಾತಾಪದ ಮೂಲ ರಾಜಕೀಯವಾಗಿ ನನ್ನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಧೈರ್ಯ ಸೋಲುವಲ್ಲಿ ಉದಾರತೆ ಗೆಲ್ಲುತ್ತದೆ.

ತಮ್ಮ ಔದ್ಯೋಗಿಕ ಕಾಲಘಟ್ಟದಲ್ಲಿ ನಾನು ಯಾವತ್ತೂ ತೋರಿಸಿಕೊಂಡಿದ್ದ ವೈಯಕ್ತಿಕವಾದ ಗೌರವ ಮತ್ತು ಆ ಕಾಲದಲ್ಲಿ ನಾನು ಆಗಾಗ ಅನುಭವಿಸಿದ್ದ ಅತ್ಯಂತ ನಿರಾಸೆಗಳನ್ನೂ ಮುಂದಿಟ್ಟುಕೊಂಡು ಚೀಫ್‌ ಕಮಿಷನರ್‌ ನನ್ನ ನಿರಾಸೆಯ ನಿರ್ದೋಷವಾದ ಈ ಬಹಿರ್ಗಮನವನ್ನು ನಿಷೇಧಿಸಲಾರರೆಂದೂ, ಈ ನಿವೇದನೆಯನ್ನು ಮೇಲೆ ಕಳುಹಿಸಿ ತಮ್ಮ ಶಿಫಾರಸ್ಸಿನೊಂದಿಗೆ ವೈಸ್‌ರಾಯ್‌ ಅವರಿಗೆ ಸಮರ್ಪಿಸಿ ನನ್ನೊಂದಿಗೆ ಕೊನೆಯದಾಗಿ ಮಾಡಬಹುದಾದ ಉಪಕಾರವನ್ನು ಮಾಡುತ್ತಾರೆಂದೂ ನಿರೀಕ್ಷಿಸುತ್ತಿದ್ದೇನೆ.

ಇತೀ ತಮ್ಮ ಅತ್ಯಂತ ನಂಬಿಕಸ್ತ ಸೇವಕ,

ವಿ.ಡಿ. ಸಾವರ್ಕರ್‌

ಖೈದಿ ಸಂಖ್ಯೆ 32778

Exit mobile version