Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬೆಳಗಾವಿ ಬಿಜೆಪಿಯಲ್ಲಿ ಬಿನ್ನಮತ ಭುಗಿಲು ; ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದು, ಸ್ಥಳೀಯ ಬಿಜೆಪಿಗೆ ತೀವ್ರ ಇರಿಸುಮುರಿಸು ಉಂಟುಮಾಡಿದೆ. ಸ್ಥಳೀಯರು ಅಲ್ಲದ ಅಭ್ಯರ್ಥಿ ಎಂಬುದು ಒಂದುಕಡೆಯಾದರೆ, ಕಾಂಗ್ರೆಸ್ ನಿಂದ ವಲಸೆ ಬಂದವರು ಎಂಬುದು ಇನ್ನೊಂದು ಕಡೆ. ಇದರ ಜೊತೆಗೆ ಈಗಾಗಲೇ ಇದ್ದ ಆಕಾಂಕ್ಷಿಗಳ ಬೆಂಬಲಿಗರೂ ಸಹ ಶೆಟ್ಟರ್ ಆಯ್ಕೆಯನ್ನು ವಿರೋಧಿಸಿದ್ದಾರೆ.

ಜಗದೀಶ್ ಶೆಟ್ಟರ್ ಬದಲಿಗೆ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂದು ಬೆಳಗಾವಿ ಬಿಜೆಪಿ ನಾಯಕರು ಆಗ್ರಹಿಸಿದ್ದು ಈ ವಿಚಾರವಾಗಿ ರಾಜ್ಯ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಒಂದು ವೇಳೆ ರಾಜ್ಯ ನಾಯಕರ ಭೇಟಿ ಫಲ ಕೊಡದಿದ್ದರೆ, ದೆಹಲಿಗೆ ತೆರಳಿ ಹೈಕಮಾಂಡ್ ಅನ್ನು ಕೂಡ ಭೇಟಿಯಾಗುವ ಬಗ್ಗೆ ಸ್ಥಳೀಯ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಂಗಳೂರು ತಲುಪಿರುವ ಬೆಳಗಾವಿ ಬಿಜೆಪಿ ನಾಯಕರು ಅಭ್ಯರ್ಥಿಯ ಆಯ್ಕೆ ಬದಲಾವಣೆಗೆ ಪಟ್ಟು ಹಿಡಿದು ಇಂದು ಬೆಂಗಳೂರು ತಲುಪಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸರವಾಲ್, ಸಂಘಟನಾ ಕಾರ್ಯದರ್ಶಿ ರಾಜೇಶ್ ಭೇಟಿಗೆ ಸಮಯ ಕೋರಿದ್ದಾರೆ. ಈ ನಾಯಕರನ್ನು ಭೇಟಿಯಾಗಲಿರುವ ಬೆಳಗಾವಿ ಮುಖಂಡರು ಶೆಟ್ಟರ್ ಬದಲು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಲಿದ್ದಾರೆ. ರಾಜ್ಯ ನಾಯಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಅವರು ನಿರ್ಧರಿಸಿದ್ದಾರೆ.

ಒಂದು ವೇಳೆ ರಾಜ್ಯ ನಾಯಕರು ಇದನ್ನು ಒಪ್ಪದ ಸಂದರ್ಭದಲ್ಲಿ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ಭೇಟಿಯಾಗಿ ಒತ್ತಡ ಹೇರಲೂ ಸಹ ಸ್ಥಳೀಯ ಬಿಜೆಪಿ ನಾಯಕರು ಮುಂದಾಗುವರು ಎಂದು ತಿಳಿದು ಬಂದಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧಾರವಾಡ ಮತ್ತು ಹಾವೇರಿ ಕ್ಷೇತ್ರದ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದರು. ಆದರೆ, ಧಾರವಾಡದಿಂದ ಹಾಲಿ ಸಂಸದ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಹೈಕಮಾಂಡ್ ಕಣಕ್ಕಿಳಿಸಿದ್ದರೆ ಮತ್ತೊಂದೆಡೆ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಯವರಿಂದ ಬೇಡಿಕೆ ಇಲ್ಲದಿದ್ದರೂ ಅವರಿಗೆ ಅಭ್ಯರ್ಥಿ ಮಾಡಿದ್ದರ ಬಗ್ಗೆ ಶೆಟ್ಟರ್ ಅಸಮಾಧಾನಗೊಂಡಿದ್ದರು. ಅವರಿಗೆ ಖುದ್ದು ಕರೆ ಮಾಡಿದ್ದ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಬೆಳಗಾವಿಯಿಂದ ಸ್ಪರ್ಧಿಸುವಂತೆ ಸೂಚನೆ ನೀಡಿದ್ದರು.

ಇನ್ನು ಶೆಟ್ಟರ್ ಆಯ್ಕೆ ಬದಲಿಸುವ ಸ್ಥಳೀಯ ನಾಯಕರ ಬೇಡಿಕೆಗೆ ಬಿಜೆಪಿ ಒಪ್ಪದೇ ಇದ್ದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಪರ್ಯಾಯ ಮಾರ್ಗ ಕಂಡುಕೊಳ್ಳುವ ಸಾಧ್ಯತೆ ಕೂಡಾ ತಳ್ಳಿ ಹಾಕುವಂತಿಲ್ಲ. ಸ್ಥಳೀಯವಾಗಿ ರಮೇಶ್ ಜಾರಕಿಹೊಳಿ ಅಥವಾ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಬಿಜೆಪಿ ಮತ್ತು ಜಗದೀಶ್ ಶೆಟ್ಟರ್ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ತೋರುವ ಸಾಧ್ಯತೆ ಕೂಡಾ ಇದೆ.

ಒಟ್ಟಾರೆ ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲದಿಂದ ಚುನಾವಣೆ ಫಲಿತಾಂಶದಲ್ಲಿ ದೊಡ್ಡ ಬದಲಾವಣೆ ಅಂತೂ ನಿಶ್ಚಿತ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು