1956 ರ ರಾಜ್ಯ ಪುನರ್ ವಿಂಗಡನಾ ಕಾಯ್ದೆಯನ್ನು ಪ್ರಶ್ನಿಸಿ 2004 ರಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಉನ್ನತ ಮಟ್ಟದ ಸಮಿತಿ ಸೇರಿದಂತೆ ಸರ್ವ ಪಕ್ಷಗಳನ್ನು ಒಳಗೊಂಡಂತೆ ಮೇಲಿಂದ ಮೇಲೆ ಸಭೆಗಳನ್ನೂ ಸಹ ಮಾಡಿದೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಾತ್ರ ಅದರ ಬಗೆಗಿನ ಸಿದ್ಧತೆ ಬಗ್ಗೆ ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ.
2004 ರಲ್ಲಿ ಸಲ್ಲಿಕೆಯಾದ ಅರ್ಜಿಯ ಬಗ್ಗೆ ಬರೋಬ್ಬರಿ 18 ವರ್ಷಗಳ ನಂತರ ಸುಪ್ರೀಂಕೋರ್ಟ್ ವಿಚಾರಣೆಗೆ ಸಿದ್ದವಾಗಿದ್ದು, ಗಡಿ ವಿವಾದವನ್ನು ಸುಪ್ರೀಂಕೋರ್ಟ್ ತಗೆದುಕೊಳ್ಳಬೇಕೇ, ಬೇಡವೇ ಎಂಬ ನಿರ್ಧಾರವನ್ನು ಪ್ರಕಟಿಸಲಿದೆ. ಸರ್ಕಾರ ಈ ವರೆಗೂ ತಜ್ಞರ ಅಭಿಪ್ರಾಯವನ್ನು ಒಳಗೊಂಡ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಜೊತೆಗೆ 2018 ರ ನಂತರ ಸರ್ಕಾರದ ಕಡೆಯಿಂದ ಇಲ್ಲಿಯವರೆಗೆ ಗಡಿ ಉಸ್ತುವಾರಿ ಸಚಿವರನ್ನೂ ನೇಮಿಸದಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಂತಿದೆ.
ಇನ್ನು ಗಡಿ ವಿವಾದದಲ್ಲಿ ಸುಪ್ರೀಂಕೋರ್ಟ್ ಅಷ್ಟು ಸುಲಭವಾಗಿ ಕೇವಲ ಒಂದು ರಾಜ್ಯದ ಪರ ನಿಲ್ಲುವಂತಿಲ್ಲ. ಗಡಿ ವಿವಾದ ಎಂದರೆ ಅದು ಸಂಪೂರ್ಣ ಒಕ್ಕೂಟ ವ್ಯವಸ್ಥೆಯ ಅಸ್ತಿತ್ವಕ್ಕೇ ಕೈ ಇಟ್ಟಂತೆ. ಈ ಸಂದರ್ಭಕ್ಕೆ ಭಾಷಾವಾರು ಪ್ರಾಂತ್ಯದ ವಿಂಗಡಣೆ ಎಂದರೆ ಕೇವಲ ಮಹಾರಾಷ್ಟ್ರಕ್ಕೆ ಹೋಗುವ ಭೂಪ್ರದೇಶ ಮಾತ್ರವಲ್ಲ ಕರ್ನಾಟಕಕ್ಕೆ ಸೇರಬೇಕಾದ ಭೂ ಪ್ರದೇಶಕ್ಕೂ ದಾರಿ ಮಾಡಿಕೊಟ್ಟಂತಾಗಲಿದೆ. ಕನ್ನಡವನ್ನೇ ಹೆಚ್ಚಾಗಿ ಮಾತನಾಡುವ ನೆರೆ ರಾಜ್ಯಗಳ ಗಡಿರೇಖೆಯ ಒಳಗಿರುವ ಕಾಸರಗೋಡು, ಸೊಲ್ಲಾಪುರ, ದಕ್ಷಿಣ ಕೊಲ್ಲಾಪುರ, ಅಕ್ಕಲಕೋಟೆ, ಮಂತ್ರಾಲಯ ಸೇರಿದಂತೆ ಸುತ್ತಲಿನ ಐದು ರಾಜ್ಯಗಳಿಂದ ಬರುವ ಮತ್ತು ಆ ರಾಜ್ಯಗಳಿಗೆ ಸೇರುವ ಅಸಂಖ್ಯಾತ ಊರುಗಳ ವಿವಾದವನ್ನು ಹೊಸದಾಗಿ ಸುಪ್ರೀಂಕೋರ್ಟೇ ಹುಟ್ಟು ಹಾಕಿದಂತಾಗಲಿದೆ. ಹಾಗೊಂದು ವೇಳೆ ಸುಪ್ರೀಂಕೋರ್ಟ್ ವಿಚಾರಣೆಗೆ ತೀರ್ಪು ಕೊಟ್ಟಂತೆ ಜೇನುಗೂಡಿಗೆ ಕಲ್ಲು ಹೊಡೆದಂತಾಗಲಿದೆ.
ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ಸುಪ್ರೀಂಕೋರ್ಟ್ ಎರಡು ರಾಜ್ಯಗಳ ಗಡಿ ವಿವಾದದ ನಡುವೆ ಮೂಗು ತೂರಿಸುವುದು ಅಷ್ಟು ಸೂಕ್ತವಲ್ಲ, ಹಾಗೂ ಸುಲಭವೂ ಅಲ್ಲ. ಹಾಗೊಂದು ವೇಳೆ ಮಹಾರಾಷ್ಟ್ರದ ಪಟ್ಟಿಗೆ ಕಟ್ಟು ಬಿದ್ದು ವಿಚಾರಣೆಗೆ ತೀರ್ಪು ಪ್ರಕಟಿಸಿದ್ದೇ ಆದರೆ ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ಅದಕ್ಕೆ ಬೇಕಾದಂತಹ ಆಯೋಗವನ್ನು ರಚಿಸಿ ಆಯೋಗ ಕೊಟ್ಟ ವರದಿ ಆಧಾರದಲ್ಲಿ ನಿರ್ಧಾರ ಪ್ರಕಟಿಸಬೇಕು. ಆದರೆ ಈ ಹಿಂದೆ ಗಡಿ ಭಾಗಕ್ಕೆ ಸಂಬಂಧಿಸಿದ ಮೆಹರ್ ಚಂದ್ ಮಹಾಜನ್ ಆಯೋಗ ಈಗಾಗಲೇ ಕೊಟ್ಟ ವರದಿಯಂತೆ ಖಾನಾಪುರ ನಿಪ್ಪಾಣಿ ಅಷ್ಟೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಆಗಲಿದೆ. ಆದರೆ ಮಹಾರಾಷ್ಟ್ರದ ಮುಖ್ಯವಾದ ವಾದ ಎಂದರೆ ನೇರ ಬೆಳಗಾವಿಯೇ ತಮಗೆ ಸೇರಬೇಕೆಂಬುದು.
ಮಹಾರಾಷ್ಟ್ರದ ವಿಚಾರಕ್ಕೆ ಹೇಳುವುದಾದರೆ ಬೆಳಗಾವಿ ಎಂಬುದು ಅಲ್ಲಿನ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಮಹಾರಾಷ್ಟ್ರದ ಶಿವಸೇನೆ, NCP ನಾ ಮುಂದು ತಾ ಮುಂದು ಎಂಬಂತೆ ಗಡಿ ವಿವಾದವನ್ನು ಜೀವಂತವಾಗಿ ಇರಿಸಿಕೊಂಡು ಬಂದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಕೂಡಾ ಅಲ್ಲಿನ ದೊಡ್ಡ ಪಕ್ಷಗಳ ಜೊತೆಗೆ ಹಿನ್ನೆಲೆಯಲ್ಲಿ ನಿಂತು ಪೋಷಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಈಗ ಭಾರತ ಪಾಕಿಸ್ತಾನ ಹೇಗೆ ಶತ್ರುರಾಷ್ಟ್ರಗಳು ಎಂಬುದನ್ನು ಜೀವಂತವಾಗಿ ಇಟ್ಟಿವೆಯೋ ಹಾಗೆ. ಇದು ಆ ಭಾಗದಲ್ಲಿ ಮತ ಗಿಟ್ಟಿಸುವ ಒಂದು ಮಾರ್ಗ ಎಂಬುದು ತೆರೆದಿಟ್ಟ ಗುಟ್ಟು. ಇಂದಿನ ವಿಚಾರಣೆ ಕೂಡಾ ಮಹಾರಾಷ್ಟ್ರ ಸರ್ಕಾರದ ತಂತ್ರಗಾರಿಕೆಯ ಮುಂದುವರಿದ ಭಾಗ.
ಇನ್ನು ರಚನೆಯಾಗಿ ವರದಿ ಬಂದಿದ್ದ ಮಹಾಜನ್ ವರದಿ ಜಾರಿಯಾದರೆ ಕರ್ನಾಟಕಕ್ಕೆ ಒಂದು ರೀತಿಯಲ್ಲಿ ಲಾಭವೇ ಆಗಲಿದೆ. ಕರ್ನಾಟಕದಿಂದ ಹೋಗುವ ಕೆಲವು ಸಣ್ಣಪುಟ್ಟ ಊರುಗಳಿದ್ದರೂ ದೊಡ್ಡ ಊರುಗಳೇ ರಾಜ್ಯಕ್ಕೆ ಸೇರ್ಪಡೆ ಆಗಲಿವೆ. ಆದರೆ ಇದಕ್ಕೆ ಮಹಾರಾಷ್ಟ್ರದ ವಿರೋಧವಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಈಗಾಗಲೇ ಸರ್ವ ಪಕ್ಷಗಳನ್ನು ಒಳಗೊಂಡಂತೆ ವಾರದಿಂದಲೂ ಸಭೆ ನಡೆಸಿ ತಜ್ಞರ ಸಮಿತಿಯನ್ನು ನೇಮಿಸಿದೆ. ಆದರೆ ಕರ್ನಾಟಕದ ಪರ ವಾದ ಮಂಡಿಸುವ ವಕೀಲರ ಪರ ನಿಲ್ಲಲು ಈ ವರೆಗೂ ಯಾವುದೇ ತಜ್ಞರು, ಸರ್ಕಾರದ ಪ್ರತಿನಿಧಿಯಾಗಿ ಯಾವುದೇ ಸಚಿವರು ಈ ವರೆಗೂ ನಿಂತಿಲ್ಲದಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದಂತಾಗಿದೆ.