ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣವನ್ನು ಸಿಬಿಐಗೆ (CBI) ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ (CID) ವಹಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. “ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು 7 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದರು. ಆದರೆ ಈಗ ಬಳ್ಳಾರಿ ಪ್ರಕರಣದಲ್ಲಿ ಯಾಕೆ ಹಿಂದೇಟು ಹಾಕುತ್ತಿದ್ದಾರೆ?” ಎಂದು ರೆಡ್ಡಿ ಕೇಳಿದರು. ಕೊಲೆ ಮತ್ತು ಕೊಲೆ ಯತ್ನದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.
ಶ್ರೀರಾಮುಲು ಪಾದಯಾತ್ರೆಗೆ ಬೆಂಬಲ:
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಕೈಗೊಳ್ಳಲು ಉದ್ದೇಶಿಸಿರುವ ಪಾದಯಾತ್ರೆಗೆ ಬಿಜೆಪಿ ವರಿಷ್ಠರು ಅನುಮತಿ ನೀಡುವ ವಿಶ್ವಾಸವಿದೆ ಎಂದು ರೆಡ್ಡಿ ಹೇಳಿದರು.
“ವಾಲ್ಮೀಕಿ ಸಮುದಾಯದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಈ ಪಾದಯಾತ್ರೆ ನಡೆಯಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಶಿವಮೊಗ್ಗದಲ್ಲಿ ಅಮಾಯಕನೊಬ್ಬ ಪ್ರಾಣ ಕಳೆದುಕೊಂಡ. ಈಗ ಬಳ್ಳಾರಿಯಲ್ಲಿ ರಾಜಕೀಯ ದ್ವೇಷಕ್ಕಾಗಿ ವಾಲ್ಮೀಕಿ ಬ್ಯಾನರ್ ದುರ್ಬಳಕೆ ಮಾಡಿಕೊಂಡು ಹಿಂಸಾಚಾರ ನಡೆಸಲಾಗುತ್ತಿದೆ. ವಾಲ್ಮೀಕಿ ಹೆಸರಿನಲ್ಲಿ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು ಎಂದು ಸಮುದಾಯದ ಪ್ರಮುಖ ನಾಯಕರಾಗಿ ಶ್ರೀರಾಮುಲು ಪ್ರಶ್ನಿಸುತ್ತಿದ್ದಾರೆ,” ಎಂದು ಜನಾರ್ದನ ರೆಡ್ಡಿ ವಿವರಿಸಿದರು.
