Home ರಾಜ್ಯ ಉಡುಪಿ ಬೆಳ್ತಂಗಡಿ ಉದ್ಯಮಿ ಆತ್ಮಹತ್ಯೆ ಪ್ರಕರಣ: ಪತ್ನಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ ಕಾರ್ಕಳ ಪೊಲೀಸರು

ಬೆಳ್ತಂಗಡಿ ಉದ್ಯಮಿ ಆತ್ಮಹತ್ಯೆ ಪ್ರಕರಣ: ಪತ್ನಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ ಕಾರ್ಕಳ ಪೊಲೀಸರು

0

ಕಾರ್ಕಳ: ಬೆಳ್ತಂಗಡಿ ಮೂಲದ ನವವಿವಾಹಿತ ಉದ್ಯಮಿ ಸುದೀಪ್ ರೈ (36) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಲಭಿಸಿದ್ದು, ಮೃತರ ಪತ್ನಿ ಸೌಮ್ಯ ಶೆಟ್ಟಿ (28) ಅವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನೆಲ್ಯಾಡಿಯವರಾದ ಸುದೀಪ್ ರೈ ಮತ್ತು ಕಾರ್ಕಳ ಕಜೆ ನಿವಾಸಿ, ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯ ಉದ್ಯೋಗಿಯಾದ ಸೌಮ್ಯ ಶೆಟ್ಟಿ ಅವರು ಕಳೆದ ಫೆಬ್ರವರಿ 17 ರಂದು ಪ್ರೀತಿಸಿ ನೋಂದಾಯಿತ ವಿವಾಹವಾಗಿದ್ದರು. ಆದರೆ, ವೈವಾಹಿಕ ಜೀವನ ಆರಂಭವಾದ ಕೇವಲ ಒಂದು ತಿಂಗಳಲ್ಲೇ ಅಂದರೆ ಮಾರ್ಚ್ 17 ರಂದು ಸುದೀಪ್ ರೈ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 30 ರಂದು ಅವರು ಮೃತಪಟ್ಟಿದ್ದರು.

ಮಗನ ಸಾವಿನ ಹಿಂದೆ ಸಂಶಯವಿದೆಯೆಂದು ಸುದೀಪ್ ಅವರ ತಂದೆ ದಾಮೋದರ ರೈ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆಯಾದ ನಂತರ ದಂಪತಿಗಳ ನಡುವೆ ನಡೆದ ಗಂಭೀರ ಕಲಹ ಅಥವಾ ಪತ್ನಿಯಿಂದ ಆತ್ಮಹತ್ಯೆಗೆ ಪ್ರಚೋದನೆ ಸಿಕ್ಕಿರಬಹುದು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಲಭ್ಯವಿರುವ ಪ್ರಾಥಮಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೌಮ್ಯ ಶೆಟ್ಟಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು, ದಾಖಲಾಗಿರುವ ದೂರಿನನ್ವಯ ಪತ್ನಿ ಸೌಮ್ಯ ಶೆಟ್ಟಿ ಅವರನ್ನು ಬಂಧಿಸಲಾಗಿದ್ದು, ಪ್ರಕರಣದ ಹಿಂದಿನ ನಿಖರ ಕಾರಣಗಳ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಉದ್ಯಮಿಯ ಈ ನಿಗೂಢ ಆತ್ಮಹತ್ಯೆ ಪ್ರಕರಣವು ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.

You cannot copy content of this page

Exit mobile version