ಪಶುಗಳ ಸಾಗಣೆಯನ್ನು ತಡೆದ ಪಶ್ಚಿಮ ಬಂಗಾಳದ ನೂತನ ಬಿಜೆಪಿ ಶಾಸಕಿಯೊಬ್ಬರು, ಹಸುಗಳ ವಯಸ್ಸನ್ನು ದೃಢೀಕರಿಸಲು ಅವುಗಳ ‘ಜನನ ಪ್ರಮಾಣಪತ್ರ’ (ಬರ್ತ್ ಸರ್ಟಿಫಿಕೇಟ್) ತೋರಿಸಬೇಕು ಎಂದು ವಿಚಿತ್ರ ಬೇಡಿಕೆ ಇಟ್ಟಿರುವುದು ಈಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ.
ಶನಿವಾರದಂದು ಹಿಂಗಲ್‌ಗಂಜ್ ವಿಧಾನಸಭಾ ವ್ಯಾಪ್ತಿಯ ಲೆಬುಖಾಲಿ ಎಂಬ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಬಿಜೆಪಿ ಶಾಸಕಿ ರೇಖಾ ಪಾತ್ರಾ ಅವರು ತಮ್ಮ ಬೆಂಬಲಿಗರೊಂದಿಗೆ ತಡೆದಿದ್ದಾರೆ. ವಾಹನದಲ್ಲಿದ್ದ ಪಶುಗಳನ್ನು ಕೆಳಗೆ ಇಳಿಸಿ, ರಸ್ತೆ ಬದಿಯ ಮರಕ್ಕೆ ಕಟ್ಟಿ ಹಾಕಿ ಅವುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೇಖಾ ಪಾತ್ರಾ, ಅಕ್ರಮ ಪಶು ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ತಿಳಿಸಿದರು. ಅಲ್ಲದೆ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಶುಗಳನ್ನು ವಧೆ ಮಾಡಬಾರದು ಎಂದು ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಅವರು ಪ್ರತಿಪಾದಿಸಿದರು.
“ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಸುಗಳನ್ನು ಕೊಲ್ಲುವುದನ್ನು ಸರ್ಕಾರ ಕಡ್ಡಾಯವಾಗಿ ನಿಷೇಧಿಸಿದೆ. ಯಾರಾದರೂ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದರೆ ನಾವು ಅವರನ್ನು ತಡೆಯುತ್ತೇವೆ ಮತ್ತು ಹಸುಗಳ ಜನನ ಪ್ರಮಾಣಪತ್ರವನ್ನು ತೋರಿಸುವಂತೆ ಕೇಳುತ್ತೇವೆ. ಒಂದು ವೇಳೆ ಹಸುಗಳ ಬರ್ತ್ ಸರ್ಟಿಫಿಕೇಟ್ ತೋರಿಸಲು ವಿಫಲರಾದರೆ ಅವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಜರುಗಿಸುತ್ತೇವೆ” ಎಂದು ಶಾಸಕಿ ಎಚ್ಚರಿಸಿದ್ದಾರೆ.
ಬಿಜೆಪಿ ಶಾಸಕಿಯ ಈ ವಿಲಕ್ಷಣ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಕ್ಷಣವೇ ಕೌಂಟರ್ ನೀಡಿದೆ. ದೇಶದ ಯಾವುದೇ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಾದರೂ ಹಸುಗಳಿಗೆ ಜನನ ಪ್ರಮಾಣಪತ್ರ ನೀಡಿರುವ ಒಂದೇ ಒಂದು ಉದಾರಣೆ ಇದೆಯೇ ಎಂದು ಟಿಎಂಸಿ ಶಾಸಕ ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ. “ಡಬಲ್ ಇಂಜಿನ್ ಸರ್ಕಾರವಿರುವ ದೇಶದ ಯಾವುದೇ ರಾಜ್ಯದಿಂದಲಾದರೂ ಹಸುಗಳಿಗೆ ನೀಡಿರುವ ಒಂದು ಜನನ ಪ್ರಮಾಣಪತ್ರವನ್ನು ತಂದು ತೋರಿಸಬೇಕು ಎಂದು ನಾವು ಗೌರವಾನ್ವಿತ ಶಾಸಕರಲ್ಲಿ ವಿನಂತಿಸುತ್ತೇವೆ. ಅದು ನಮಗೆ ರೆಫರೆನ್ಸ್ ಆಗಿ ಉಪಯುಕ್ತವಾಗುತ್ತದೆ. ಒಂದು ವೇಳೆ ಬಿಜೆಪಿ ನಾಯಕರು ಹಸುವಿನ ಬರ್ತ್ ಸರ್ಟಿಫಿಕೇಟ್ ತಂದು ತೋರಿಸಿದರೆ, ಆ ಸರ್ಟಿಫಿಕೇಟ್‌ಗಳನ್ನು ಯಾರು ವಿತರಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ” ಎಂದು ಕುನಾಲ್ ಘೋಷ್ ವ್ಯಂಗ್ಯವಾಡಿದ್ದಾರೆ.
