ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಮೇಲೆ ದರ್ಪ, ಹಲ್ಲೆ: ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜುನಾಥ್ ಬಂಧನ

ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ ಆರೋಪದಡಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅಲಿಯಾಸ್ ಗೊಟ್ಟಿಗೆರೆ ಮಂಜು ಎಂಬಾತನನ್ನು ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗೊಟ್ಟಿಗೆರೆ ಬಳಿ ಹುಳಿಮಾವು ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಅರುಣ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಎದುರುಗಡೆಯಿಂದ ಬರುತ್ತಿದ್ದ ವಾಹನಗಳ ಸುಗಮ ಸಂಚಾರಕ್ಕಾಗಿ ಮಂಜು ಅವರ ವಾಹನವನ್ನು ನಿಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ಮಂಜು, “ನನ್ನ ವಾಹನವನ್ನೇ ನಿಲ್ಲಿಸುತ್ತೀಯಾ?” ಎಂದು ಪ್ರಶ್ನಿಸಿ ವಾಗ್ವಾದಕ್ಕಿಳಿದು ಕಾನ್‌ಸ್ಟೇಬಲ್ ಅವರ ಕಾಲರ್ ಹಿಡಿದು ಎಳೆದಾಡಿ, ಕಾಲಿನಿಂದ ಒದೆಯಲು ಯತ್ನಿಸಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯನ್ನು ಗಮನಿಸಿದ ಸಾರ್ವಜನಿಕರು ಹಾಗೂ ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೊಲೀಸರು, ಆರೋಪಿ ಗೊಟ್ಟಿಗೆರೆ ಮಂಜುನಾಥ್‌ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು