ಬೆಂಗಳೂರು: ಮನೆ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ನಡೆದ ಜಗಳ ತಾರಕಕ್ಕೇರಿ, ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಡಿಗೆದಾರರು ತಮ್ಮ ಮನೆ ಮಾಲೀಕರಾಗಿದ್ದ ವಕೀಲರೊಬ್ಬರನ್ನು ತಲೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಹಾಗೂ ವೃತ್ತಿಯಲ್ಲಿ ವಕೀಲರಾಗಿದ್ದ ಮಂಜುನಾಥ್ (42) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರ ತಡರಾತ್ರಿ 11:30 ರಿಂದ ಮಧ್ಯರಾತ್ರಿಯ ಸುಮಾರಿಗೆ ಈ ದುಷ್ಕೃತ್ಯ ನಡೆದಿದೆ. ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗಿದ್ದ ಇಬ್ಬರು ಯುವಕರು ಡೆಲಿವರಿ ಬಾಯ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊಲೆ ನಡೆಯುವುದಕ್ಕೂ ಸುಮಾರು ಒಂದು ಗಂಟೆ ಮುನ್ನ ಬಾಕಿ ಉಳಿಸಿಕೊಂಡಿದ್ದ ಬಾಡಿಗೆ ಹಣದ ವಿಚಾರವಾಗಿ ಮಂಜುನಾಥ್ ಹಾಗೂ ಇಬ್ಬರು ಬಾಡಿಗೆದಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.
ಮಧ್ಯರಾತ್ರಿಯ ವೇಳೆಗೆ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಆರೋಪಿಗಳಲ್ಲಿ ಒಬ್ಬಾತ ತನ್ನ ಬಳಿಯಿದ್ದ ಗನ್ ತೆಗೆದು ಮಂಜುನಾಥ್ ಅವರ ತಲೆಗೆ ನೇರವಾಗಿ ಗುಂಡು ಹಾರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗುಂಡು ಹಾರಿಸಿದ ತಕ್ಷಣವೇ ಇಬ್ಬರೂ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ವಿಷಯ ತಿಳಿದ ತಕ್ಷಣವೇ ವೈಟ್‌ಫೀಲ್ಡ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವೈಟ್‌ಫೀಲ್ಡ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
