Friday, September 20, 2024

ಸತ್ಯ | ನ್ಯಾಯ |ಧರ್ಮ

ಫಿಲ್ಟರ್‌ ಗಳಾಚೆ…

“ಅವಳು ಬಿಡಿ, ಫಿಲ್ಟರ್‌ ಹಾಕ್ಕೊಂಡೇ ಫೋಟೋ ಹಾಕೋದು, ಇರೋ ಮುಖ ನೋಡಿದ್ರೆ ಹೆದ್ರಿಕೋತಾರೆ ಯಾರಾದ್ರೂ, ಅದಕ್ಕೇ ಫಿಲ್ಟರ್‌ ಬಳಸ್ತಾಳೆ.. “


ಇದು ಮಹಿಳೆಯರನ್ನ ಹೀಯಾಳಿಸುವ ಇನ್ನೊಂದು ಹೊಸ ವಿಧಾನಗಳಲ್ಲೊಂದು. ಹೆಣ್ಣುಮಕ್ಕಳಿಗೆ ಅಂದ ಚೆಂದದ ಮಾನದಂಡವನ್ನು ಪುರುಷ ಪ್ರಧಾನ ಸಮಾಜ ವ್ಯಾಖ್ಯಾನಿಸುವುದೇ ವಿಚಿತ್ರ. ಆಕೆ ಚೆನ್ನಾಗಿರಬೇಕು, ಬಣ್ಣ, ಎತ್ತರ, ಚಹರೆ ಎಲ್ಲವೂ ಆಕರ್ಷಕವಾಗಿಯೇ ಇರಬೇಕು. ಮೇಕಪ್‌ ಮಾಡಬೇಕು. ಆದರೆ ನ್ಯಾಚುರಲ್‌ ಕಾಣಿಸಬೇಕು. ಕೂದಲು ಬಿಳಿಯಾಗಬಾರದು, ಆದರೆ ಬಣ್ಣ ಹಾಕಿದ್ದು ಢಾಳಾಗಬಾರದು, ಡಬಲ್‌ ಚಿನ್‌ ಬರಬಾರದು, ಆದರೆ ಆಕೆ ಮನೆಯಲ್ಲಿ ಎಲ್ಲರೂ ತಿನ್ನುವುದನ್ನೇ ತಿನ್ನಬೇಕು. ಸೂಪರ್‌ ಫಿಟ್‌ ಇರಬೇಕು.


ಮೊದಲೆಲ್ಲ ಬರೀ ದಪ್ಪವಾಗಿದೀಯ, ಕಪ್ಪಾಗಿದ್ದೀಯ ಎಂದು ಮಾತನಾಡುತ್ತಿದ್ದವರಿಗೆ, ಈಗ ಅಪ್‌ ಡೇಟ್‌ ಆಗಿ ವ್ಯಾಕ್ಸಿಂಗ್‌ ಮಾಡಿಸಿಲ್ವಾ, ಬ್ಲಾಕ್‌ ಹೆಡ್‌ ರಿಮೂವ್‌ ಮಾಡಿಸು ಅನ್ನೋದು ಸರಾಗ. ಒಟ್ಟಿನಲ್ಲಿ ಸೌಂದರ್ಯದ ಮಾನದಂಡ ಎನ್ನುವುದು ಪುರುಷ ಪ್ರಧಾನ ವ್ಯವಸ್ಥೆಯ ನಿರ್ಧಾರ.


ಹೆಣ್ಣುಮಕ್ಕಳ ವಯಸ್ಸು, ಪರಿಸ್ಥಿತಿ, ಮನಸ್ಥಿತಿಗೆ ತಕ್ಕ ಹಾಗೆ ಹಾರ್ಮೋನಲ್‌ ಬದಲಾವಣೆಗಳಾಗುತ್ತಿರುತ್ತವೆ. ಹದಿಹರೆಯದಲ್ಲಿ ಮೊಡವೆಗಳ ಸಮಸ್ಯೆ, ಗರ್ಭಿಣಿಯಾದಾಗ ಸ್ಟ್ರೆಚ್‌ ಮಾರ್ಕ್‌ ಗಳು, ಒತ್ತಡ, ವಯಸ್ಸಿನ ಜೊತೆ ಜೊತೆಗೆ ಹಾಗೆ ಮೂಡುವ ಬಿಳಿಕೂದಲುಗಳು, ಮೊದಲಿನ ಫಿಟ್‌ ನೆಸ್‌ ಕಳೆದುಕೊಳ್ಳುವ ದೇಹ. ನೋಡು ನೋಡುತ್ತಾ ಆಗುವ ಈ ಬದಲಾವಣೆಗಳನ್ನು ಒಪ್ಪಿಕೊಳ್ಳಲು, ಒಗ್ಗಿಕೊಳ್ಳಲು ಬಹಳಷ್ಟು ಸ್ಥೈರ್ಯ ಬೇಕು. ಇದರ ಜೊತೆ ಜೊತೆಗೇ ಅದಕ್ಕೆ ಬರುವ ಒಂದಿಷ್ಟು ಸಲಹೆ ಸೂಚನೆಗಳು, ಕಡಲೆ ಹಿಟ್ಟು ಅರಿಶಿನದಿಂದ ಶುರುವಾಗುವ ಚಿಕಿತ್ಸೆಗಳು ಕೊನೆ ಕೊನೆಗೆ ಪದೇ ಪದೇ ಬ್ಲೀಚ್‌ ಮಾಡಿಸಿ ಮುಖವೇ ಹಾಳಾಗುವ ಮಟ್ಟಿಗೆ ಅಪಾಯಕಾರಿ


ಮುಖದ ಆಕಾರ, ಸಣ್ಣ ಮತ್ತು V ಆಕಾರದ ಮುಖ, ಪೋರ್ಸಿಲಿನ್‌ ಅಥವಾ ಬಿಳಿ ಚರ್ಮ, ನೀಳ ಮೂಗು, ದೊಡ್ಡ ಕಣ್ಣುಗಳು, ನೇರ ಹುಬ್ಬುಗಳು, ತುಂಬಿಕೊಂಡಿರುವ ತುಟಿಗಳು ಜೋಡಿಸಿಟ್ಟಂತಾ ಹಲ್ಲುಗಳು ಮುಂತಾದುವುಗಳು ಕೊರಿಯಾದ ಸೌಂದರ್ಯದ ಮಾನದಂಡಗಳು. ಕಣ್ಣಿನ ರೆಪ್ಪೆಗಳನ್ನು ಸಹ ಈ ಮಾನದಂಡಕ್ಕೆ ಸೇರಿಸುವ ಸಲುವಾಗಿ double eye lid ಸರ್ಜರಿಗಳು ಸಹ ನಡೆಯುತ್ತವೆ. ಈ ಮಾನದಂಡಗಳಿಗೆ ಸರಿಹೊಂದದಿದ್ದರೆ ಅದು ಸೌಂದರ್ಯವೇ ಅಲ್ಲ ಎನ್ನುವ ಮಟ್ಟಿಗಿನ ಒತ್ತಡಗಳು ಎಷ್ಟೋ ಸಾವುಗಳಿಗೂ ಕಾರಣವಾಗಿದೆ.


ಆಂತರಿಕ ಸೌಂದರ್ಯ ಮುಖ್ಯ ಎನ್ನುವದು ಮಾತುಗಳಲ್ಲೋ, ಪುಸ್ತಕಗಳಲ್ಲೋ ಉಳಿದುಹೋಗಿ ಪ್ರತಿಯೊಬ್ಬರೂ ಸೌಂದರ್ಯ ಕುರೂಪ ಎನ್ನುವುದನ್ನು ತಮಗೆ ಕಂಡ ರೀತಿಯಲ್ಲಿ ವ್ಯಾಖ್ಯಾನಿಸಿ ಒತ್ತಡ ಹಾಕುವ ಸಂಸ್ಕೃತಿ ಎಂದಿನಿಂದಲೂ ಇದೆ.


ಈ ಎಲ್ಲಾ ಒತ್ತಡಗಳನ್ನ ದೂರವಿರಿಸಿ ತನಗೆ ಬೇಕಾದ ಹಾಗೆ ಬದುಕುವ, ಬೇರೆಯವರ ಕಣ್ಣಿಗೆ ಕಾಣುವ ಎಲ್ಲ ಹಕ್ಕುಗಳೂ ಮಹಿಳೆಗಿದೆ. ಫಿಲ್ಟರ್‌ ಅನ್ನುವುದು ಒಂದು ಮಾಧ್ಯಮ ಅಷ್ಟೇ. ಆ ಕ್ಷಣದಲ್ಲಿ ಹಾಗೆ ಕಾಣುವುದು ಆಕೆಗೆ ಇಷ್ಟವಾದಲ್ಲಿ, ಮತ್ತು ಅದನ್ನು ಬೇರೆಯವರ ಮೇಲೆ ಹೇರದಿದ್ದಲ್ಲಿ ಅದು ಸಮಸ್ಯಾತ್ಮಕವೂ ಅಲ್ಲ, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದೂ ಇಲ್ಲ.


ಇಷ್ಟಕ್ಕೂ ಹೆಣ್ಣಿನ ಕುರಿತು ಇಷ್ಟು ಕೀಳಾಗಿ ಮಾತನಾಡುವವರ ಸಮಸ್ಯೆಯೇನು? ಒಬ್ಬ ಗಂಡು ಮೈಯೆಲ್ಲಾ ಸಾಲ ಮಾಡ್ಕೊಂಡು, ತಾಯಿ ಹೆಂಡತಿಯ ಒಡವೆಗಳನ್ನು ಅಡ ಇಟ್ಟು ಮಕ್ಕಳನ್ನು ಶಾಲೆಗೆ ಸೇರಿಸಲೂ ಒದ್ದಾಡುವಷ್ಟು ಕಷ್ಟವಿದ್ದಾಗಲೂ ಇತರರ ಮುಂದೆ ಎಲ್ಲಾ ಸರಿ ಇದೆ ಅನ್ನೋ ಹಾಗೆ ಬೈಕ್‌ ಸೈಡಿಗೆ ಹಾಕಿ ಸಿಗರೇಟು ಹಚ್ಚುವಷ್ಟೇ ಸಲೀಸಾಗಿ, ಮನೆಯ ನೂರೆಂಟು ಸಮಸ್ಯೆಗಳ ನಡುವೆಯೂ ಸರೀಕರೆದುರು ಎಲ್ಲ ಸರಿ ಇದೆ ಎಂದು ತೋರಿಸುವ ಕುಟುಂಬಗಳಷ್ಟೇ ಸರಾಗವಾಗಿ ಒಂದು ಹೆಣ್ಣು ಕೂಡ ಅವಳಿಗಿರುವ ಹಲವಾರು ದೈಹಿಕ, ಮಾನಸಿಕ ಒತ್ತಡ, ಆರೋಗ್ಯ, ಕೌಟುಂಬಿಕ ಸಮಸ್ಯೆಗಳ ನಡುವೆಯೂ ಒಂದು ಚಂದದ ಫೋಟೋ ಹಾಕಿ ಹಗುರಾಗುತ್ತಾಳೆ.


ಆದರೆ ಪುರುಷ ಪ್ರಧಾನ ಸಮಾಜ ಅದಕ್ಕೆ ಒದ್ದಾಡುತ್ತದೆ. ಹೆಣ್ಣು ತನ್ನ ಅಧೀನಳಾಗಿ ತನಗಾಗಿ ಮಾತ್ರ ಇರಬೇಕಾಗಿದುದ್ದನ್ನು ಇಡೀ ಜಗತ್ತಿನ ಮುಂದೆ ಧೈರ್ಯವಾಗಿ ನಿಲ್ಲುವುದನ್ನು ಸಹಿಸುವ ಶಕ್ತಿ ಅದಕ್ಕಿಲ್ಲ. ತಿರಸ್ಕಾರಕ್ಕೊಳಗಾದವರಿಗೆ ದ್ವೇಷ ಮೂಡುವ ಹಾಗೆ ಒಂದಿಷ್ಟು ಅಭದ್ರತೆಯ ಗುಂಗಲ್ಲಿರುತ್ತಾರೆ. ತಮ್ಮ ಅಭದ್ರತೆ, ಅಹಂಕಾರಗಳಿಗೆ ಸಂಸ್ಕೃತಿ, ಸನಾತನದ ಮುಖವಾಡ ಹಾಕಿ ಮಾತಾಡುವವರು ಒಂದಿಷ್ಟಾದರೆ, ಅದರದೇ ಮುಂದುವರೆದ ವರ್ಷನ್‌ ನಲ್ಲಿ ಈ ಹುಡುಗಿ ಇಷ್ಟು ಚೆನ್ನಾಗಿಲ್ಲ, ಧೈರ್ಯವಿದ್ದರೆ ಫಿಲ್ಟರ್‌ ತೆಗೆದು ತನ್ನ ಮುಖ ತೋರಿಸಲಿ ಎಂದು ಅವಳ ಇಡೀ ವ್ಯಕ್ತಿತ್ವವನ್ನು ಅವಳ ಒಂದೇ ಪೋಟೋದಲ್ಲಿ ಹಾಕಿ ಅಳೆದುಬಿಡುವ ಧಾರ್ಷ್ಟ್ಯ ಇನ್ನಿಷ್ಟು ಜನರದು.


ಹೆಣ್ಣುಮಕ್ಕಳ ಅಂದ ಚಂದದ ಕುರಿತು ಮಾತನಾಡುವವರು ಯಾವತ್ತೂ ಮೇಕಪ್‌ ಅಥವಾ ಹೇರ್‌ ಡೈ ಮುಂತಾದುದರಲ್ಲಿ ಬಳಸುವ ಫಾರ್ಮಾಲ್ಡಿಹೈಡ್‌, ಅಥವಾ ಕಾರ್ಸಿನೋಜೆನಿಕ್‌ ಗಳಿಂದ ಕ್ಯಾನ್ಸರ್‌ ಬರುವ ಕುರಿತು ಮಾತಾಡಿರೋದಿಲ್ಲ. ಬ್ರಾ ಹಾಕದೇ ಇದ್ದ ಒಂದು ಸಂದರ್ಭದಲ್ಲಿ ನಟಿ ಮಲೈಕಾ ಅರೋರಾ ಅವರ ಕುರಿತು ಹೀನಾಯವಾಗಿ ಮಾತನಾಡುವ ಯಾರೂ ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವುದಿಲ್ಲ. ಅದು ಬೇಕಾಗಿಯೂ ಇರುವುದಿಲ್ಲ. ಆಕೆಯ ಬಗ್ಗೆ, ಆಕೆ ತನ್ನ ಪಾಡಿಗೆ ತಾನಿರುವ ಬಗ್ಗೆ ಇರುವ ಅಸಹನೆ ನಾನಾ ರೀತಿಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಬಹಳಷ್ಟು ಜನಕ್ಕೆ ಕೈಗೆಟುಕದ ದ್ರಾಕ್ಷಿ ಹುಳಿ ಅನ್ನುವಂತೆ, ತಾನು ಆ ಮಹಿಳೆಯನ್ನು ಅದೇ ದೃಷ್ಟಿಯಿಂದ ನೋಡಬೇಕು, ತನಗೆ ಪ್ರತಿಕ್ರಿಯಿಸಿದರೆ ಆಕೆ ತನ್ನ ಅಧೀನೆ. ಇಲ್ಲವಾದಲ್ಲಿ ಆಕೆ ಸರಿ ಇಲ್ಲದವಳು ಎಂದು ವಿಮರ್ಶಿಸುವುದು ಎಲ್ಲಕ್ಕಿಂತ ಸುಲಭ.


ಎಲ್ಲಕ್ಕಿಂತ ವಿಷಾದನೀಯವೆಂದರೆ, ಹೆಣ್ಣು ಹಾಕುವ ಫೋಟೋಗಳು, ಅವಳ ಇರುವಿಕೆ ಪ್ರತಿಯೊಂದೂ ತನಗೋಸ್ಕರವೇ ಇರುವುದು ಎನ್ನುವ ಮನೋಭಾವ. ಆಕೆಗೆ ಅವಳದೇ ಆದ ಹಲವಾರು ಅಭಿಪ್ರಾಯ ಅನಿಸಿಕೆಗಳಿರುತ್ತವೆ. ಅವಳ ದೇಹ, ಅವಳ ಬದುಕು ಅವಳ ಹಕ್ಕು ಅನ್ನುವುದನ್ನು ಸಂಪೂರ್ಣವಾಗಿ ಮರೆತು ಆಕೆ ಇರುವುದೇ ತನಗಾಗಿ, ಹಾಗಾಗಿ ಆಕೆ ತನಗೆ ಪ್ರತಿಕ್ರಿಯಿಸಲೇಬೇಕು, ಮತ್ತು ತಾನು ಹೇಗೆ ಬೇಕಾದರೂ ಮಾತಾನಾಡಬಹುದು ಎನ್ನುವ ಭ್ರಮೆಗೊಳಗಾಗಿರುವ ಪುರುಷ ಪ್ರಧಾನ ಸಮಾಜಕ್ಕೆ ಹೆಣ್ಣು ಬದುಕುತ್ತಿರುವುದು ತನಗೋಸ್ಕರ ಎನ್ನುವುದನ್ನು ಪದೇ ಪದೇ ಕೂಗಿ ಹೇಳಬೇಕಿದೆ.


ಬಿಳಿಕೂದಲಿಗೆ ಹೆದರದೇ, ಅದನ್ನು ಮುಚ್ಚಿಡದೇ Go Gray ಅಭಿಯಾನ ಆರಂಭಿಸಿರುವ ಹೆಣ್ಣುಮಕ್ಕಳಿಗೆ ಇರುವಷ್ಟೇ ಅದಿಕಾರ ತಮ್ಮ ಮುಖವನ್ನು ತಮ್ಮಿಷ್ಟ ಬಂದ ಫಿಲ್ಟರ್‌ ಹಾಕಿ ತೋರಿಸೋದು. ಈ ಹಕ್ಕು ಗಂಡುಮಕ್ಕಳದೂ ಕೂಡ.


ಎಷ್ಟೋ ಬಾರಿ ಸಾಮಾಜಿಕ ಮಾಧ್ಯಮ ಬಳಕೆದಾರರು Ai tool ಬಳಸಿ ತಮ್ಮ ಫೋಟೋಗಳಿಗೆ ಸೃಜನಶೀಲತೆ ಹೆಚ್ಚಿಸುತ್ತಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಒಬ್ಬ ಯುವಕ ಇದ್ದಕ್ಕಿದ್ದಂತೆ ಸಿಕ್ಸ್‌ ಪ್ಯಾಕ್‌ ಇರುವ ಯಾವುದೋ ಹೀರೋನಂತೆ ಬದಲಾಗುತ್ತಾನೆ. ತಲೆಯಲ್ಲಿ ಕೂದಲಿರದ ಮತ್ಯಾರೋ ಪೈರೈಟ್ಸ್‌ ಆಫ್‌ ದ ಕೆರಿಬಿಯನ್‌ ನ ಉದ್ದ ಕೂದಲುಗಳನ್ನು ಹೊಂದಿದ ಪಾತ್ರವಾಗಿಬಿಡುತ್ತಾನೆ. ಇದಕ್ಕೆ ದೊರೆಯುವ ಪ್ರತಿಕ್ರಿಯೆಗಳು ಸಾಧಾರಣವಾಗಿ ತಮಾಷೆಯ ಅಥವಾ ಹೊಗಳಿಕೆಯವೇ ಆಗಿರುವುದರ ಜೊತೆಗೆ ಸುಪ್ತ ಮನಸ್ಸಿನಲ್ಲಿ ಅರೆ, ನಾವೂ ನಮ್ಮಿಷ್ಟದ ಪಾತ್ರವಾಗಿಯೋ, ಇನ್ನಷ್ಟು ಸಣ್ಣವರಾಗಿಯೋ, ಇನ್ಯಾವುದೊ ರೀತಿ ಕಾಣಬಹುದಲ್ಲ ಎನ್ನಿಸುತ್ತದೆ. ಆದರೆ ಗಂಡುಮಕ್ಕಳು Ai ಬಳಸೋದರ ಬಗ್ಗೆ ಯಾರೂ ಕೆಟ್ಟದಾಗಿ, ಹೀಯಾಳಿಸಿ ಮಾತನಾಡೋದಿಲ್ಲ. ಜಡ್ಜ್‌ ಮೆಂಟಲ್‌ ಆಗೋದಿಲ್ಲ. ಅದನ್ನ ಒಂದು ಸೃಜನಶೀಲ ಬದಲಾವಣೆಯಾಗಿಯೇ ನೋಡ್ತಾರೆ.


ಹೆಣ್ಣುಮಕ್ಕಳು ಅವರ ಚರ್ಮಕ್ಕೆ ಹಾನಿಯಾಗುವ, ಹೆಚ್ಚಿನ ಖರ್ಚಾಗುವ ಯಾವ ಮೇಕಪ್‌ ಬಳಸದೇ, ಕೇವಲ ಒಂದು ಫ್ರೀ / ಡಿಫಾಲ್ಟ್‌ ಆಪ್‌ ಮೂಲಕ ತಮ್ಮಿಷ್ಟದ ಸಣ್ಣ ಬದಲಾವಣೆಗಳನ್ನು ಮಾಡೋದನ್ನ ಆಕೆ ಹೆಣ್ಣು ಎಂಬ ಒಂದೇ ಕಾರಣಕ್ಕೆ ಮಾಡೋದು ಸಾಧ್ಯವಾಗೋದಿಲ್ಲ. ಆಕೆ attention seeker ಹಾಗಾಗಿ ಫಿಲ್ಟರ್‌ ಬಳಸ್ತಾಳೆ ಎನ್ನುವ ಹಣೆಪಟ್ಟಿ ಅಂಟಿಸಿಬಿಡುತ್ತವೆ. ಆಕೆಯ ಆಯ್ಕೆಯನ್ನು ಒಪ್ಪಿಕೊಂಡು ಬೆಂಬಲಿಸೋ ಅಗತ್ಯವಿಲ್ಲ. ಆದರೆ ಅದರ ಬಗ್ಗೆ ದ್ವೇಷ ಕಾರುವ ಅಗತ್ಯವೂ ಇಲ್ಲ. ಸಮಾಜದ ಸಾವಿರಾರು ಸಮಸ್ಯೆಗಳ ನಡುವೆ ಫಿಲ್ಟರ್‌ ಯಾರಿಗೂ ಒಂದು ಮಾತಿನ ಸರಕಾಗುವ ಅಗತ್ಯವಿಲ್ಲ.


ಮದುವೆ, ಸಾಂಗತ್ಯದಂತಹ ವಿಷಯ ಬರುವವರೆಗೂ ಯಾರು ಹೇಗೆ ಕಾಣ್ತಾರೆ ಅನ್ನೋದರ ಬಗ್ಗೆ ಯಾರೂ ತೀರ್ಮಾನಿಸೋ ಅಗತ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಿಂದಾಚೆಗಿನ ಬದುಕಿನಲ್ಲಿ ಮಾತ್ರ ಕಾಳಜಿ, ಸೌಂದರ್ಯ, ಆರೋಗ್ಯ, ಹಣಕಾಸಿನ, ಭಾವನೆಗಳ ಪಾರದರ್ಶಕತೆಯ ಅಗತ್ಯ ಇರೋದು.


ಹೆಣ್ಣಾಗಲೀ ಗಂಡಾಗಲೀ, ಒಬ್ಬ ವ್ಯಕ್ತಿ ಇರುವ ಹಾಗೆ ಆಕೆಯನ್ನು / ಆತನನ್ನು ಒಪ್ಪಿಕೊಳ್ಳುವುದಕ್ಕೆ ಬಹಳಷ್ಟು ಪ್ರಬುದ್ಧತೆ ಬೇಕು. ಒಪ್ಪಿಕೊಳ್ಲಲು ಸಾಧ್ಯವಾಗದ ಸಂದರ್ಭದಲ್ಲಿ ತಮ್ಮ ದೌರ್ಬಲ್ಯವನ್ನು ಕೋಪ, ಅಥವಾ ಹೀಯಾಳಿಕೆಯ ಮೂಲ ಹೊರಹಾಕದೇ ಇರೋದಕ್ಕೆ ಕೂಡ ಒಂದಿಷ್ಟು ಪ್ರಬುದ್ಧತೆ ಬೇಕು.

ಸಮುದ್ಯತಾ ಕಂಜರ್ಪಣೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page