Home ದೆಹಲಿ ಮಕ್ಕಳಿಗೆ ಭಗವದ್ಗೀತೆ ಕಲಿಸಿದರೆ ತಪ್ಪೇನೆ ಸಮಸ್ಯೇನು ಹೇಳಿ ? – ಹೆಚ್ ಡಿ ಕುಮಾರಸ್ವಾಮಿ

ಮಕ್ಕಳಿಗೆ ಭಗವದ್ಗೀತೆ ಕಲಿಸಿದರೆ ತಪ್ಪೇನೆ ಸಮಸ್ಯೇನು ಹೇಳಿ ? – ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮಾದಕ ವಸ್ತುಗಳ ನಶೆಗೆ ಸಿಕ್ಕಿ ಯುವಜನರು ಹಾಳಾಗುತ್ತಿದ್ದಾರೆ. ರಾತ್ರಿಯಿಂದ ಬೆಳಗ್ಗೆವರೆಗೂ ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಅನ್ನು ನಿರಂತರವಾಗಿ ಪೂರೈಕೆ ಮಾಡುತ್ತಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯಿಂದ ಯುವಕರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದಿಸೆಯಿಂದಲೇ ಭಗವದ್ಗೀತೆ ಬೋಧಿಸಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಭಗವದ್ಗೀತೆ ಕಲಿಸಬೇಕು ಎಂಬುದು ನನ್ನ ಅಭಿಪ್ರಾಯ. ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಇಂಥ ಮನಃಸ್ಥಿತಿಯೇ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.

ಈ ಬಗ್ಗೆ ತಮ್ಮನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್.ಸಿ. ಮಹಾದೇವಪ್ಪ ಅವರಿಗೆ ತಿರುಗೇಟು ಕೊಟ್ಟ ಸಚಿವರು; ಒಳ್ಳೆಯದು, ಸದ್ವಿಚಾರಗಳನ್ನು ಚರ್ಚೆ ಮಾಡುವುದು, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಬೋಧನೆ ಮಾಡುವುದು ಮನುವಾದ ಆಗುತ್ತದೆಯೇ? ಭಗವದ್ಗೀತೆಯನ್ನು ಕಲಿಸಿ ಎಂದು ಕೇಂದ್ರದ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದು ಕೂಡ ಮಹಾನ್‌ ಅಪರಾಧವೇ? ಎಂದು ಖಾರವಾಗಿ ಪ್ರಶ್ನಿಸಿದರು.

ನಾನೆಂದೂ ಭಗವದ್ಗೀತೆಗೆ ಅಪಮಾನ ಮಾಡಿಲ್ಲ, ಮಾಡುವುದೂ ಇಲ್ಲ. ಹಿಂದೊಮ್ಮೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ನಾನು ಭಗವದ್ಗೀತೆ ಬಗ್ಗೆ ಹೇಳಿದ್ದೆ. ಯಾವುದೋ ಒಂದು ವರ್ಗದ ಮಕ್ಕಳಿಗೆ ಕಲಿಸಬೇಕು, ಬೋಧಿಸಬೇಕು ಎಂದು ನಾನು ಹೇಳಿಲ್ಲ. ಎಲ್ಲಾ ಮಕ್ಕಳಿಗೂ ಭಗವದ್ಗೀತೆ ಕಲಿಸಬೇಕು ಎಂದು ಒತ್ತಿ ಹೇಳಿದ್ದೇನೆ. ಇದನ್ನು ಸಚಿವ ಮಹಾದೇವಪ್ಪ ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ನನ್ನ ಮೇಲೆ ದಾಳಿ ಮಾಡಿದರೆ ಉಪಯೋಗವೇನು? ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.

ನನಗೆ ಸಾಧ್ಯವಾದಷ್ಟು ಮಟ್ಟಿಗೆ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತವನ್ನು ಓದಿಕೊಂಡಿದ್ದೇನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರೇ ಭಗವದ್ಗೀತೆ ಪ್ರಭಾವಕ್ಕೆ ಒಳಗಾಗಿದ್ದರು. ಅದು ನನ್ನ ಮಾತೃಗ್ರಂಥ, ತಾಯಿ ಸಮಾನ ಎಂದು ಸ್ವತಃ ಬಾಪೂಜಿ ಅವರೇ ಹೇಳಿದ್ದಾರೆ . ಭಗವದ್ಗೀತೆ ಅಮೂಲ್ಯ ಗ್ರಂಥವೆಂದು ನನಗೆ ತೋರಿದೆ. ಸತ್ಯ ಮಾರ್ಗಕ್ಕೆ, ಜ್ಙಾನ ಸಂಪಾದನೆಗೆ ಈ ಗ್ರಂಥ ಸರ್ವೋತ್ಕೃಷ್ಟವಾದುದು ಎಂದು ನಾನು ಭಾವಿಸುತ್ತೇನೆ. ನನ್ನ ನಿರಾಶೆಯ ಸಂದರ್ಭದಲ್ಲಿ ಈ ಗ್ರಂಥ ನನಗೆ ಅಮೂಲ್ಯವಾದ ಸಹಾಯವನ್ನು ಮಾಡಿದೆ ಎಂದು ಗಾಂಧೀಜಿ ಅವರು ಹೇಳಿದ್ದರು ಎಂದ ಸಚಿವರು ಮಾಧ್ಯಗೋಷ್ಠಿಯಲ್ಲಿ ಗೀತೆಯ ೬೩ನೇ ಶ್ಲೋಕವನ್ನು ಓದಿದರು.

You cannot copy content of this page

Exit mobile version