Thursday, September 11, 2025

ಸತ್ಯ | ನ್ಯಾಯ |ಧರ್ಮ

ಭಾರತ ಐಕ್ಯತಾ ಯಾತ್ರೆ: ರಾಹುಲ್‌ ಹೇಳಿಕೆ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ದೇಶದಲ್ಲಿ ಅಭಿವೃದ್ಧಿ ಇಲ್ಲ, ಸೌಹಾರ್ದತೆ ಇಲ್ಲ, ಕೇವಲ 40% ಕಮಿಷನ್‌ ಭ್ರಷ್ಟಾಚಾರದಿಂದ ಕೂಡಿದೆ ಎಂಬ ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆ ಕುರಿತು ರಾಜ್ಯ ಬಿಜೆಪಿ ಘಟಕವು ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕವು, ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದ ನಕಲಿ ಗಾಂಧಿ ಕುಡಿ ರಾಹುಲ್‌ ಗಾಂಧಿ ಅವರೇ, ಮುಖ್ಯಮಂತ್ರಿ ಸ್ಥಾನಕ್ಕಾಗಿ ನಿಮ್ಮೆದುರು ಕೈಕಟ್ಟಿ “ಜೀ ಹುಜೂರ್” ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತು ಕೇಳಿ ಆರೋಪ ಮಾಡುವ ಬದಲು ರಾಜ್ಯದ ಜನರ ಬಾಯಿಂದ ಸತ್ಯ ತಿಳಿಯಿರಿ ಎಂದು ಆಕ್ರೋಶ ಹೊರಹಾಕಿದೆ.

ರಾಜ್ಯ ಬಿಜೆಪಿ ಸರ್ಕಾರ ರೈತರ ಮಕ್ಕಳು, ಕಾರ್ಮಿಕರು, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದು, 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ‌. ಗುಲಾಮಗಿರಿಯನ್ನೇ ನಂಬಿರುವ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷಕ್ಕೆ ರೈತರು, ಕಾರ್ಮಿಕರ ಮಕ್ಕಳು ಸುಶಿಕ್ಷಿತರಾಗುವುದು ಬೇಕಿಲ್ಲವೇ? ಎಂದು ಪ್ರಶ್ನಿಸಿದೆ.

ರಾಹುಲ್‌ ಗಾಂಧಿಯವರೇ, ಗರೀಬಿ ಹಠಾವೊ ಎಂದು ನಿಮ್ಮ ಅಜ್ಜಿ (ಇಂದಿರಾ ಗಾಂಧಿ) ಘೋಷಿಸಿ ಐದು ದಶಕ ಕಳೆದಿದೆ. ಇನ್ನೂ ಬಡವರ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ರಾಜ್ಯ ಬಿಜೆಪಿ ಘಟಕವು ಟೀಕಿಸಿದೆ.

ಮೋದಿ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದಲ್ಲಿ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದು ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೈತನಿಗೆ ಏನೂ ಮಾಡದೇ ಈಗ ರೈತರ ಹೆಸರಲ್ಲಿ ಬೀದಿ ನಾಟಕ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ವ್ಯಂಗ್ಯವಾಡಿದೆ.

ದೇಶದಲ್ಲಿ ಸೌಹಾರ್ದತೆ ಇಲ್ಲ ಎನ್ನುವ ರಾಹುಲ್‌ ಗಾಂಧಿ ಅವರೇ, ಪಿಎಫ್ಐನಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿದಾಗ ವಿರೋಧಿಸಿದ್ದೇಕೆ? ರಾಷ್ಟ್ರವಾದಿ ಮುಸಲ್ಮಾನರೇ ಉಗ್ರ ಸಂಘಟನೆಗಳ ನಿಷೇಧವನ್ನು ಸ್ವಾಗತಿಸಿರುವಾಗ ಸಿದ್ದರಾಮಯ್ಯ ಅವರಂತಹ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಮಾತ್ರ ಇದು ಬಿಸಿ ತುಪ್ಪವಾಗಿದೆಯೇ? ಎಂದು ಹರಿಹಾಯ್ದಿದೆ.

ಭ್ರಷ್ಟಾಚಾರವನ್ನೇ ನರನಾಡಿಗಳಲ್ಲಿ ತುಂಬಿಸಿಕೊಂಡಿರುವ ನಕಲಿಗಾಂಧಿ ಕುಟುಂಬ ಮತ್ತು ಕಾಂಗ್ರೆಸ್‌ ಪಕ್ಷ ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವುದು ಚೋದ್ಯ. ಬೇಲ್ ಮೇಲೆ ಜೀವನ ನಡೆಸುವವರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದ. ಆರೋಪಕ್ಕೆ ಸೂಕ್ತ ದಾಖಲೆ ಒದಗಿಸದೆ ಪಲಾಯನವಾದ ಅನುಸರಿಸುತ್ತಿರುವುದೇಕೆ? ಎಂದು ರಾಜ್ಯ ಬಿಜೆಪಿ ಘಟಕ ಕಟುವಾಗಿ ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಎಲ್ಲರ ಮನೆಗೂ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ 80 ಕೋಟಿ ಬಡವರಿಗೆ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಆಹಾರ ವಿತರಣೆ ಮಾಡಿದೆ. ರಾಹುಲ್‌ ಗಾಂಧಿಗೆ ಇವೆಲ್ಲ ಏಕೆ ಕಾಣಿಸುತ್ತಿಲ್ಲ? ಎಂದು ಕಿಡಿಕಾರಿದೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 34 ಕೋಟಿ ಪರಿಶಿಷ್ಟ ಸಮುದಾಯದ ಫಲಾನುಭವಿಗಳು ತಲಾ 10 ಲಕ್ಷ ಸಾಲ ಪಡೆಯುತ್ತಿದ್ದಾರೆ. ಶ್ರೀಮಂತರ ಪರವಾದ ಸರ್ಕಾರ ಎನ್ನುವ ನಿರುದ್ಯೋಗಿ ರಾಹುಲ್‌ ಗಾಂಧಿ ಅವರಿಗೆ ಇದೆಲ್ಲಾ ಏಕೆ ಕಾಣಿಸುತ್ತಿಲ್ಲ? ಅಂಬಾನಿ ಅದಾನಿಗಳೆಲ್ಲಾ ಮೋದಿ ಸರ್ಕಾರದ ಅವಧಿಯಲ್ಲಿ ಶ್ರೀಮಂತರಾಗಿದ್ದೇ? ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page