Friday, June 14, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ಯಾತ್ರೆ ಮುಗಿಸಿದ ಭಾರತ ಜೋಡೋ ; ರಾಹುಲ್ ರನ್ನು ಅದ್ಧೂರಿಯಾಗಿ ಬೀಳ್ಕೊಟ್ಟ ಕನ್ನಡಿಗರು

ನಿನ್ನೆ ರಾಯಚೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ ಕೊನೆಗೊಂಡಿತು. ಕರುನಾಡಿನ ನೆಲದಿಂದ ರಾಹುಲ್ ಗಾಂಧಿಯವರನ್ನು ಬೀಳ್ಕೊಡಲು ಲಕ್ಷಗಟ್ಟಲೆ ಜನ ಅಭಿಮಾನಿಗಳು, ಕಾರ್ಯಕರ್ತರು ಬಂದದ್ದು ವಿಶೇಷ.

ರಾಯಚೂರು ನಗರದಲ್ಲಿ ಶನಿವಾರ ನಡೆದ ಪಾದಯಾತ್ರೆ ಅದ್ಧೂರಿಯಾಗಿ ನೆರವೇರಿತು. ಮಂತ್ರಾಲಯ ಮಾರ್ಗದ ಬೃಂದಾವನ ಹೋಟೆಲ್ ನಿಂದ ಪ್ರಾರಂಭವಾದ ಪಾದಯಾತ್ರೆಯ ಜನಸಾಗರ 2 ಕಿಲೋಮೀಟರ್ ವರೆಗೂ ಹಬ್ಬಿತ್ತು. ವಾಲ್ಕಟ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 70,000 ಆಸನಗಳ ವ್ಯವಸ್ಥೆ ಮಾಡಿದ್ದರೂ ಅಷ್ಟೂ ಆಸನಗಳು ಭರ್ತಿಯಾಗಿ, ಸುತ್ತಲೂ ಸಾವಿರಾರು ಜನರು ಸಭೆಯನ್ನು ವೀಕ್ಷಿಸಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಕರ್ನಾಟಕದಲ್ಲಿ ನಡೆದ ಅಷ್ಟೂ ದಿನದ ಪಾದಯಾತ್ರೆ ನನಗೆ ಅತೀವ ಸಂತೋಷ ತಂದಿದೆ. ಸಹಕರಿಸಿದ ಕರ್ನಾಟಕದ ಜನತೆಗೆ ಅನಂತ ಧನ್ಯವಾದಗಳು. ನನ್ನ ಕುಟುಂಬಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ನನ್ನ ಅಜ್ಜಿ ಇಂದಿರಾಗಾಂಧಿಯವರನ್ನು ಚಿಕ್ಕಮಗಳೂರಿನಿಂದ, ನನ್ನ ತಾಯಿ ಸೋನಿಯಾಗಾಂಧಿಯವರನ್ನು ಬಳ್ಳಾರಿಯಿಂದ ಗೆಲ್ಲಿಸಿಕೊಟ್ಟದ್ದು ಕರ್ನಾಟಕದ ಜನತೆ. ಇದನ್ನು ಎಂದಿಗೂ ನಾವು ಮರೆಯುವುದಿಲ್ಲ” ಎಂದು ಹೇಳಿ ರಾಜ್ಯದ ಜನತೆಗೆ ದೀಪಾವಳಿ ಶುಭಾಶಯ ಕೋರಿದರು.

“ಕರ್ನಾಟಕದಲ್ಲಿ 500 ಕಿಲೋಮೀಟರ್ ಗೂ ಹೆಚ್ಚು ದೂರ ಹೆಜ್ಜೆ ಹಾಕಿದ್ದು ಒಂದು ಐತಿಹಾಸಿಕ ಪಾದಯಾತ್ರೆಯಾಗಿದೆ. ದಾರಿಯ ಉದ್ದಕ್ಕೂ ಕರ್ನಾಟಕದ ನಾನಾ ರೀತಿಯ ಜನರನ್ನು ನೋಡಿದೆ. ಅವರ ಕಷ್ಟ, ಸುಖಗಳನ್ನು ಆಲಿಸಿದೆ. ಇಲ್ಲಿಯವರೆಗೂ ನನ್ನನ್ನು ತಂದು ಬೀಳ್ಕೊಡಲು ಬಂದ ನಾಡಿನ ಜನತೆಗೆ ನಾನು ಸದಾ ಆಭಾರಿಯಾಗಿದ್ದೇನೆ. ಬಿಸಿಲು, ಚಳಿ, ಮಳೆ, ಬಿರುಗಾಳಿಗೂ ಲೆಕ್ಕಿಸದೆ ನಮ್ಮ ಯಾತ್ರೆ ಮುನ್ನಡೆದಿದೆ. ಎಂತಹ ಶಕ್ತಿಗೂ ನಮ್ಮನ್ನು ತಡೆಯಲಾಗದು. ನಾವು ಕಾಶ್ಮೀರದಲ್ಲೇ ನಮ್ಮ ಯಾತ್ರೆ ಮುಗಿಸಲಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದಾಗ ನೆರೆದಿದ್ದ ಲಕ್ಷಾಂತರ ಮಂದಿ ಒಮ್ಮೆಲೇ ಉದ್ಗಾರ, ಚಪ್ಪಾಳೆ ಮೂಲಕ ಜಯಘೋಷ ಮೆರೆದದ್ದು ವಿಶೇಷವಾಗಿತ್ತು.

ನಿನ್ನೆಯ ಪಾದಯಾತ್ರೆಯಲ್ಲಿ ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು ಭಾಗವಹಿಸಿ ಕರ್ನಾಟಕದಿಂದ ಬೀಳ್ಕೊಟ್ಟರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ‌.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕೃಷ್ಣ ಭೈರೇಗೌಡ ಸೇರಿದಂತೆ ನೂರಾರು ಮಂದಿ ರಾಜ್ಯ ನಾಯಕರು ರಾಹುಲ್ ಜೊತೆಗೆ ಹೆಜ್ಜೆ ಹಾಕಿದರು.

ಯಾತ್ರೆಯಲ್ಲಿ ಮಾಜಿ ಸಂಸದೆ ರಮ್ಯಾ ಭಾಗಿ, ಜಾಲತಾಣಗಳಲ್ಲಿ ಫೋಟೋಗಳು ವೈರಲ್
ಕರ್ನಾಟಕದಲ್ಲಿ ನಿನ್ನೆಗೆ ಕೊನೆಗೊಂಡ ಪಾದಯಾತ್ರೆಯಲ್ಲಿ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಭಾಗಿಯಾದದ್ದು ಕರ್ನಾಟಕದ ಪಾದಯಾತ್ರೆಯ ಹೈಲೈಟ್ ಗಳಲ್ಲಿ ಒಂದು. ಮಂತ್ರಾಲಯ ರಸ್ತೆಯಲ್ಲಿರುವ ಐಬಿ ಕಾಲೋನಿಯಿಂದ ಸಾರ್ವಜನಿಕ ಸಭೆ ನಡೆಯುವ ಸ್ಥಳವಾದ ವಾಲ್ಕಟ್ ಮೈದಾನದ ವರೆಗೂ ನಟಿ ರಮ್ಯಾ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ಜೊತೆಗೆ ಹೆಜ್ಜೆ ಹಾಕಿದರು. ಶನಿವಾರ ಸಂಜೆಯಿಂದಲೇ ರಮ್ಯಾ ಭಾಗಿಯಾದ ಫೋಟೋಗಳು ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗಳಲ್ಲಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹಂಚಿಕೊಂಡು ವೈರಲ್ ಆಗಿದ್ದವು.

ಇಷ್ಟು ದಿನಗಳ ವರೆಗೂ ರಮ್ಯಾ ಪಾದಯಾತ್ರೆಯಲ್ಲಿ ಭಾಗವಹಿಸದ ಬಗ್ಗೆ ಸಣ್ಣಪುಟ್ಟ ಮಾತುಗಳು ಕೇಳಿಬಂದಿತ್ತು. ಆದರೆ ಹಲವು ಅಭಿಮಾನಿಗಳ ನಿರೀಕ್ಷೆಯಂತೆ ರಮ್ಯಾ ಭಾಗಿಯಾದರು. ಜಾಲತಾಣಗಳಲ್ಲಿ ಅಸಂಖ್ಯ ಅಭಿಮಾನಿಗಳು ರಮ್ಯಾ ಭಾಗಿಯ ಬಗ್ಗೆ ಸಂತಸ ವ್ಯಕ್ತಪಡಿಸಿ, ಬಹು ನಿರೀಕ್ಷಿತ ಆಗಮನ ಇದು ಎಂದು ಬರೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು