Tuesday, June 25, 2024

ಸತ್ಯ | ನ್ಯಾಯ |ಧರ್ಮ

ಭಾರತಕ್ಕೆ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ

ನೆಟ್ ಪ್ರಾಕ್ಟೀಸ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲು

ಭಾರತ ಕ್ರಿಕೆಟ್ ತಂಡ ಮೂರು ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ ಸೋತು, ಏಷ್ಯಾ ಕಪ್ ನಿಂದ ಹೊರಹೋಗುವ ಭೀತಿಯಲ್ಲಿದ್ದಾಗ, ಇನ್ನೇನಿದ್ದರೂ ಪವಾಡ ನಡೆದರೆ ಮಾತ್ರ ಭಾರತ ಫೈನಲ್ ಗೆ ಹೋಗಬಹುದು ಎಂದು ಭಾರತೀಯ ಅಭಿಮಾನಿಗಳು ನಿರಾಸೆ ಇದ್ದರೂ ಕಾದು ಕುಳಿತಿದ್ದರು. ಆದರೆ ಕಳೆದ ಎರಡು ದಿನಗಳ ಬೆಳವಣಿಗೆಗಳನ್ನು ನೋಡಿದರೆ ಆ ಪವಾಡ ಬಹುತೇಕ ನಡೆದು ಹೋಗಿತ್ತು.

ಭಾನುವಾರ ಪೈನಲ್ ಆಡಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಿನ್ನೆ ನಡೆದ ಕೊನೆಯ ಪಂದ್ಯ, ಪೈನಲ್ ಗೆ ಮುಂಚಿನ ನೆಟ್ ಪ್ರಾಕ್ಟೀಸ್ ರೀತಿಯಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ಸಂಪೂರ್ಣ ಮೇಲುಗೈ ಸಾಧಿಸಿ ಗೆದ್ದಿದೆ. ಟಾಸ್ ಗೆದ್ದು ಪಾಕ್ ಗೆ ಬ್ಯಾಟಿಂಗ್ ನೀಡಿ ಅವರನ್ನು ಕೇವಲ 121 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಶ್ರೀಲಂಕಾ ನಂತರ ಆ ಗುರಿಯನ್ನು ಸುಲಭವಾಗಿ ತಲುಪಿತು. 3 ವಿಕೆಟ್ ಕಿತ್ತ ಹಸರಂಗ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಆದರೆ, ಈ ಫಲಿತಾಂಶ ನೋಡಿ , ಕೈ ಬಂದಿದ್ದು ಬಾಯಿಗೆ ಬರಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಿದ್ದು ಮಾತ್ರ ಭಾರತೀಯ ಅಭಿಮಾನಿಗಳು ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ ಪಾಕ್ ಅನ್ನು ಮಣಿಸಿದಾಗ ಎಲ್ಲರೂ ನೆನಪಿಸಿಕೊಂಡಿದ್ದು ಪಾಕಿಸ್ತಾನ ಮತ್ತು ಆಫ್ಗಾನಿಸ್ತಾನದ ನಡುವಿನ ಪಂದ್ಯವನ್ನು. ಆ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು, ಕೊನೆಯ ಓವರ್ ನಲ್ಲಿ ಗೆಲ್ಲಲು 11 ರನ್ ಗಳಿಸಬೇಕಿದ್ದಾಗ, ಆಫ್ಗನ್ ಬೋಲರ್ ಫಾರೂಖಿ ಎರಡು ಸತತ ಫುಲ್ ಟಾಸ್ ಹಾಕಿ ನಸೀಮ್ ಶಾ ಅವರಂಥ ನಂಬರ್ 11 ಬ್ಯಾಟ್ಸ್ ಮನ್ ಕೈಯಲ್ಲಿ ಎರಡು ಸತತ ಸಿಕ್ಸರ್ ಹೊಡೆಸಿಕೊಳ್ಳದೇ ಇದ್ದಿದ್ದರೆ ಭಾನುವಾರದ ಫೈನಲ್ ನಲ್ಲಿ ಭಾರತಕ್ಕೆ ಆಡುವ ಅವಕಾಶ ಸಿಗುತ್ತಿತ್ತು ಎಂದು ಅಭಿಮಾನಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಭಾರತೀಯ ತಂಡಕ್ಕೆ ಫೈನಲ್ ಪ್ರವೇಶಿಸಲು ಏನೇನು ಬೇಕಿತ್ತೋ ಅದೆಲ್ಲ ಹೆಚ್ಚು ಕಡಿಮೆ ಆಗಿ ಹೋಗಿತ್ತು. ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಮತ್ತು ಭುವನೇಶ್ವರ್ ಅವರ ಮಾರಕ ಬೋಲಿಂಗ್ ನಿಂದ ಭಾರೀ ಅಂತರದಿಂದ ಗೆದ್ದು ಎಲ್ಲಾ ತಂಡಗಳಿಗಿಂತ ಹೆಚ್ಚು ರನ್ ರೇಟ್ ಅನ್ನು ಗಳಿಸಿತ್ತು. ನಿನ್ನೆ ಶ್ರೀಲಂಕಾ ಕೂಡಾ ಪಾಕಿಸ್ತಾನವನ್ನು ಸೋಲಿಸಿತು. ಹಾಗಾಗಿ, ಅಂದಿನ ಆಫ್ಘಾನಿಸ್ತಾನ, ಪಾಕಿಸ್ತಾನದ ಪಂದ್ಯದಲ್ಲಿ ಫಾರೂಖಿ ಕೊನೆಯ ಓವರ್ ನಲ್ಲಿ ಕೊಂಚ ಸಂಯಮ ತೋರಿ ಗೆದ್ದಿದ್ದರೆ, ಭಾರತಕ್ಕೆ ಅದೃಷ್ಠ ಲಕ್ಷ್ಮಿ ಒಲಿಯುತ್ತಿತ್ತು ಅನ್ನೋದು ಭಾರತೀಯ ಅಭಿಮಾನಿಗಳ ಬೇಸರ.

Related Articles

ಇತ್ತೀಚಿನ ಸುದ್ದಿಗಳು