Monday, June 17, 2024

ಸತ್ಯ | ನ್ಯಾಯ |ಧರ್ಮ

ಭಾರತ ಜೋಡೋದಲ್ಲಿ ಅಸುನೀಗಿದ ಕಾಂಗ್ರೆಸ್‌ ಕಾರ್ಯಕರ್ತನ ಕುಟುಂಬಕ್ಕೆ ರೂ.10ಲಕ್ಷದ ಚೆಕ್‌ ನೀಡಿ ಸಾಂತ್ವನ ಹೇಳಿದ ಡಿಕಿಶಿ

ಸಾಗರ: ಇಲ್ಲಿಗೆ ಸಮೀಪದ ಹುತ್ತದಿಂಬ ಗ್ರಾಮದಲ್ಲಿನ ರಮೇಶ್ ಅವರ ನಿವಾಸಕ್ಕೆ ಶುಕ್ರವಾರ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ ಕಾರ್ಯಕರ್ತನ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

‘ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾಗ ಅಪಘಾತದಲ್ಲಿ ಮೃತಪಟ್ಟ ರಮೇಶ್ ಅವರ ಸಾವು ಸಾಮಾನ್ಯವಲ್ಲ. ಅದು ದೇಶಕ್ಕಾಗಿ ಆದ ಪ್ರಾಣತ್ಯಾಗ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.

ʼಬಹಳ ದುಃಖದ ವಿಚಾರವಾಗಿ ನಾವೆಲ್ಲ ಇಂದು ಇಲ್ಲಿ ಸೇರಿದ್ದೇವೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಪಂಚಾಯ್ತಿ ವ್ಯಾಪ್ತಿಯ ಬೂತ್ ನ ಅಧ್ಯಕ್ಷರಾಗಿ ರಮೇಶ್ ಅವರು ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಸೇವೆ ಮಾಡಿ ದ್ದಾರೆʼ ಎಂದು ಮೆಚ್ಚುಗೆ ಸೂಚಿಸಿದರು.

ಈ ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮಾಡುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ಸಮಾಜದಲ್ಲಿ ಸಾಮರಸ್ಯ ಸ್ಥಾಪನೆ ಪರ ಹಾಗೂ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ರಮೇಶ್ ಅವರು ಮುಂದಾಗಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಆ ಮೂಲಕ ರಮೇಶ್ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಇದು ಬರೀ ಸಾವಲ್ಲ, ದೇಶಕ್ಕಾಗಿ ಮಾಡಿದ ಪ್ರಾಣತ್ಯಾಗ. ದೇಶಕ್ಕಾಗಿ ಮಾಡಿರುವ ಸೇವೆ. ಹೀಗಾಗಿ ಅವರಿಗೆ ನಮನ ಸಲ್ಲಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲು ಪಕ್ಷದ ನಾಯಕರು, ಕಾರ್ಯಕರ್ತರೊಡನೆ ಇಂದು ಇಲ್ಲಿಗೆ ಆಗಮಸಿದ್ದೇವೆ. ನಾವು ಕೂಡ ರಮೇಶ್ ಅವರ ಕುಟುಂಬದವರೇ. ಅವರ ಜತೆ ನಾವಿದ್ದೇವೆ.

ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳಿದ್ದಾರೆ. ನೀನು ನಿನ್ನನ್ನು ನಿಯಂತ್ರಿಸಿಕೊಳ್ಳಬೇಕಾದರೆ ನಿನ್ನ ಮೆದುಳನ್ನು ಬಳಸು, ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿನ್ನ ಹೃದಯವನ್ನು ಬಳಸು ಎಂದು. ಅದೇ ರೀತಿ ರಾಹುಲ್ ಗಾಂಧಿ ಅವರು ದೇಶದುದ್ದಗಲಕ್ಕೂ ಜನರ ಹೃದಯ ಗೆಲ್ಲಲು ಮುಂದಾಗಿದ್ದಾರೆ. ನಿಮ್ಮ ಸಹಕಾರ ಸದಾ ಹೀಗೇ ಇರಲಿ ಎಂದು ವಿನಂತಿಸಿದರು.

ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿಯ ಟೀಕೆ ಕುರಿತು ಕೇಳಿದ ಪ್ರಶ್ನೆಗೆ, ‘ಅಸೂಯೆಗೆ ಮದ್ದಿಲ್ಲ. ಅವರು ಇಂತಹ ಸಾಹಸಕ್ಕೆ ಎಂದಾದರೂ ಮುಂದಾಗಿದ್ದಾರಾ? ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರಾ? ಸ್ವಾತಂತ್ರ್ಯ, ಸಂವಿಧಾನ ತಂದಿದ್ದಾರಾ? ಬಡವರಿಗೆ ಜಮೀನು, ಸೈಟು ಕೊಟ್ಟಿದ್ದಾರಾ? ನಾವು ಕೊಟ್ಟಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಟೀಕೆ ಮಾಡುವ ಅಧಿಕಾರ ಸಿಕ್ಕಿದೆ. ಅವರು ಟೀಕೆ ಮಾಡುತ್ತಿರಲಿ, ನಾವು ಬಡವರ ಪರವಾಗಿ ಕೆಲಸ ಮಾಡುತ್ತಿರುತ್ತೇವೆ’ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಧುರೀಣ, ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು