Monday, June 17, 2024

ಸತ್ಯ | ನ್ಯಾಯ |ಧರ್ಮ

ಆರೋಪ ಪ್ರತ್ಯಾರೋಪಗಳ ಬೃಹನ್ನಾಟಕ; ಜನಹಿತಕೆ ಮಾರಕ

ಯಾವ ಪಕ್ಷವೇ ಆಡಳಿತದಲ್ಲಿರಲಿ ಈ ನಿಗಮ ಮಂಡಳಿಗಳು ರಾಜಕೀಯ ನಾಯಕರ ನಿಯಂತ್ರಣದಲ್ಲಿ ಇರುವವರೆಗೂ ಉದ್ದಾರವಾಗುವುದಿಲ್ಲ. ಇದಕ್ಕೆ ಲಾಸ್ ಲ್ಲಿರುವ ಸಾರಿಗೆ ಸಂಸ್ಥೆ, ಬಿಡಿಎ ಹಾಗೂ ನಷ್ಟದಲ್ಲಿರುವ ಬಹುತೇಕ ಸರಕಾರಿ ಸಂಸ್ಥೆಗಳೇ ಸಾಕ್ಷಿಯಾಗಿವೆ. ನಿಗಮ ಮಂಡಳಿಗಳ ಅಧ್ಯಕ್ಷರುಗಳ ಬೇನಾಮಿ ಹಾಗೂ ಸ್ವನಾಮಿ ಆಸ್ತಿಗಳ ಹೆಚ್ಚಳವೇ ಪುರಾವೆಯಾಗಿದೆ – ಶಶಿಕಾಂತ ಯಡಹಳ್ಳಿ

ಕರ್ನಾಟಕದ ರಾಜಕೀಯ ಬೃಹನ್ನಾಟಕಕ್ಕೆ ಕೊನೆ ಮೊದಲಿಲ್ಲದಂತಾಗಿದೆ. ಜೆಸಿಬಿ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪರಸ್ಪರ ಕೆಸರೆರಚಾಟದಲಿ ಎಲ್ಲ ಇತಿ ಮಿತಿಗಳನ್ನು ಮೀರಿವೆ. ಬರೀ ಆರೋಪ, ಪ್ರತ್ಯಾರೋಪ, ಅಪಪ್ರಚಾರಗಳಲಿ ನಿರತ ಈ ಪಕ್ಷಗಳ ನಾಯಕರುಗಳು ಜನರ ಹಿತಾಸಕ್ತಿಯನ್ನು, ನಾಡು ನುಡಿಯ ಕಾಳಜಿಯನ್ನು, ನೆಲ ಜಲ ಕುರಿತ ಜವಾಬ್ದಾರಿಯನ್ನು ಮರೆತು ಮಾತಿನ ಸಮರದಲಿ ನಿರತವಾಗಿವೆ. 

ಬಂಡವಾಳಶಾಹಿ ಪ್ರಜಾಪ್ರಭುತ್ವದ ಚುನಾವಣಾ ಕೇಂದ್ರಿತ ವ್ಯವಸ್ಥೆಯಲ್ಲಿ  ರಾಜಕಾರಣ ಎನ್ನುವುದು ತನ್ನೆಲ್ಲಾ ಮೌಲ್ಯಗಳನ್ನು ಕಳೆದುಕೊಂಡು ಹೊಲಸೆದ್ದು ಹೋಗಿದೆ. ರಾಜಕೀಯ ಅಂದರೆ ಭ್ರಷ್ಟಾಚಾರದ ಉಗಮ ಸ್ಥಾನವೆಂಬುದು ಎಲ್ಲರಿಗೂ ಗೊತ್ತಿರುವ ಸೂರ್ಯ ಸತ್ಯ. 

ಬಿಜೆಪಿ ಪಕ್ಷದ ಸರಕಾರ ಅಸ್ತಿತ್ವದಲ್ಲಿದ್ದಾಗ ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನ ಶುರುಮಾಡಿ 40% ಕಮಿಷನ್ ಸರಕಾರ ಎಂದು ಪ್ರಚಾರ ಮಾಡಿತು. ಈಗ ಕಾಂಗ್ರೆಸ್ ಪಕ್ಷದ ಸರಕಾರ ಆಡಳಿತದಲ್ಲಿರುವಾಗ ಬಿಜೆಪಿಯು ಎಟಿಎಂ ಸರಕಾರ ಎಂದು ಪೋಸ್ಟರ್ ವಾರ್ ಶುರುಮಾಡಿತು.‌ ಈಗ ಲೇಟೆಸ್ಟ್ ಆಗಿ ನಿಗಮ ಮಂಡಳಿಗಳ ಅಧ್ಯಕ್ಷರಾಗುವ ಆಕಾಂಕ್ಷಿಗಳು ತೆರಬೇಕಾದ ಹಣದ ರೇಟ್ ಲಿಸ್ಟ್ ಪೋಸ್ಟರನ್ನು ಬಿಜೆಪಿ ಪಕ್ಷ ಬಿಡುಗಡೆ ಮಾಡಿ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದೆ. ಹಿಂದೆಂದೂ ಇಲ್ಲದ ಪೋಸ್ಟರ್ ಸಮರ ಇತ್ತೀಚಿನ ವರ್ಷದಲ್ಲಿ ಅತಿಯಾಗಿದೆ. ಇದನ್ನೇ ಸುದ್ದಿ ಮಾಧ್ಯಮಗಳು ಇನ್ನೂ ಹೆಚ್ಚು ರಣರೋಚಕವಾಗಿ ಬಿತ್ತರಿಸಿ ಬಾಯಿ ಬಡಿದುಕೊಳ್ಳುತ್ತಿವೆ.

ಸರಕಾರದ ವಿರುದ್ಧ ಬಿಜೆಪಿ ʼಕಲೆಕ್ಷನ್‌ʼ ಆರೋಪ

ಯಾವಾಗಲೂ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಈ ಆರೋಪ ಪ್ರತ್ಯಾರೋಪಗಳ ಕದನ ಇದ್ದಿದ್ದೇ. ಮಾಡಲಿ.. ಯಾರು ಬೇಕಾದರೂ ಎಷ್ಟಾದರೂ ಆರೋಪ ಮಾಡಲಿ. ಆದರೆ ಮಾಡಿದ ಪ್ರತಿ ಆರೋಪಕ್ಕೂ ಪೂರಕವಾದ ಸಾಕ್ಷಿ ಆಧಾರ ಪುರಾವೆಗಳಿರಲಿ. ಯಾವುದೇ ಪುರಾವೆಗಳಿಲ್ಲದೇ ಊಹೆಯ ಆಧಾರದಲ್ಲಿ ಆರೋಪಗಳನ್ನು ಮಾಡುವುದು ಅಕ್ಷಮ್ಯ. ಬೆಂಕಿ ಇದ್ದಾಗಲೇ ಹೊಗೆಯಾಡುವುದು ನಿಜ ಎನ್ನುವುದಾದರೆ ಬೆಂಕಿಯ ಅಸ್ತಿತ್ವವನ್ನು ಸಾಬೀತು ಪಡಿಸಬೇಕೆ ಹೊರತು ಬರೀ ಕೃತಕ ಹೊಗೆಯನ್ನು ಹುಟ್ಟುಹಾಕಿ ಬೆಂಕಿ ಇದೆ ಎಂದು ದೂರುವುದು ನೈತಿಕತೆಯಲ್ಲ. ಆಯ್ತು ಮಾಡಿದ ಆರೋಪಗಳಲ್ಲಿ ಸತ್ಯ ಇದೆ ಎನ್ನುವುದೇ ದಿಟವಾಗಿದ್ದಲ್ಲಿ ಸರಕಾರಿ ತನಿಖಾ ಸಂಸ್ಥೆಗಳಿವೆಯಲ್ಲಾ.. ಅಲ್ಲಿ ಹೋಗಿ ಪುರಾವೆಗಳ ಸಹಿತ ದೂರು ಸಲ್ಲಿಸಿ ಶೀಘ್ರ ವಿಚಾರಣೆಗೆ ಆಗ್ರಹಿಸಲಿ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೇ ಅಸ್ತಿತ್ವಕ್ಕೆ ಬಂದಿರುವ ಸ್ವಾಯತ್ತ ತನಿಖಾ ಸಂಸ್ಥೆಯಾದ ಲೋಕಾಯುಕ್ತಕ್ಕಾದರೂ ದೂರು ನೀಡಲಿ. ಕಾನೂನಾತ್ಮಕ ವಿಚಾರಣೆಗೆ ಒತ್ತಾಯಿಸಲಿ. ಇವೆಲ್ಲವನ್ನೂ ಬಿಟ್ಟು ಮಾಧ್ಯಮಗಳ ಮುಂದೆ ಬರೀ ಭ್ರಷ್ಟಾಚಾರದ ಬಗ್ಗೆ ಆರೋಪಗಳನ್ನು ಮಾಡುವ,  ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಹಾಗೂ ಹೇಳಿಕೆಗಳನ್ನು ಕೊಡುವುದರ ಹಿಂದೆ ಒಂದು ಪಕ್ಷ ಇನ್ನೊಂದು ಪಕ್ಷವನ್ನು ಜನರ ಕಣ್ಣಲ್ಲಿ ಅಪರಾಧಿಯನ್ನಾಗಿ ನಿಲ್ಲಿಸುವ ಪ್ರಯತ್ನವೇ ಅಡಗಿದೆ. ಈ ಹೈಡ್ರಾಮಾವನ್ನು ಸುದ್ದಿ ಮಾಧ್ಯಮಗಳಲ್ಲಿ ದಿನವೂ ನೋಡುವ ಜನರು ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ನಿರ್ಧರಿಸಲಾಗದೇ ಗೊಂದಲಕ್ಕೀಡಾಗುತ್ತಾರೆ. ಈ ಪಕ್ಷಗಳ ನಾಯಕರಿಗೂ ಅದೇ ಬೇಕಾಗಿದೆ.

ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನ

ಉದಾಹರಣೆಗೆ- ಈಗ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಸಂಕಷ್ಟದಲ್ಲಿದೆ. ವಿರೋಧ ಪಕ್ಷದ ನಾಯಕನನ್ನೂ ಆಯ್ಕೆ ಮಾಡದ, ಪಕ್ಷಕ್ಕೊಬ್ಬ ಅಧ್ಯಕ್ಷನನ್ನೂ ನೇಮಕ ಮಾಡಲಾಗದ ದುಸ್ಥಿತಿಯಲ್ಲಿದೆ. ಮೋದಿ ಶಾ ರವರ ಗಮನವನ್ನು ಸೆಳೆಯಲು, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸೀಟ್ ಗಿಟ್ಟಿಸಲು, ರಾಜ್ಯದಲ್ಲಿ ಪಕ್ಷದ ನಾಯಕತ್ವ ಪಡೆಯಲು ಕರ್ನಾಟಕದ ಅಳಿದುಳಿದ ಬಿಜೆಪಿ ನಾಯಕರು ಪೈಪೋಟಿಗೆ ಬಿದ್ದು ಆರೋಪ ಮಾಡುತ್ತಿದ್ದಾರೆ.  ತಮ್ಮ ಪಕ್ಷದ ದೌರ್ಬಲ್ಯಗಳನ್ನು ಮರೆಮಾಚಲು ಆಳುವ ಪಕ್ಷದ ಮೇಲೆ ನಿರಂತರವಾಗಿ ಕೆಸರೆರಚುವುದನ್ನೇ ಕಾಯಕ ಮಾಡಿಕೊಂಡು ಪಕ್ಷದ ಜೀವಂತಿಕೆಯನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಅತ್ತ ಆಳುವ ಕಾಂಗ್ರೆಸ್ ಪಕ್ಷದೊಳಗೇ ಅಧಿಕಾರಕ್ಕಾಗಿ ಒಳಬೇಗುದಿ ಆರಂಭವಾಗಿದೆ. ನಾಡಿನಾದ್ಯಂತ ಬರ ಉಲ್ಬಣಿಸಿದೆ, ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದೆ. ಗ್ಯಾರಂಟಿಗಳ ಅನುಷ್ಟಾನದಲ್ಲಿ ಸಮಸ್ಯೆಗಳಿವೆ, ಸ್ವಪಕ್ಷೀಯರ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಲೋಕಸಭಾ ಚುನಾವಣೆ ಮುಂದಿರುವುದರಿಂದ ಸರಕಾರದ ವರ್ಚಸ್ಸು ಕಾಯ್ದುಕೊಂಡು ಹೋಗಬೇಕಿದೆ. ಆದ್ದರಿಂದ ಜನರ ಗಮನವನ್ನು ಡೈವರ್ಟ್ ಮಾಡಲು ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತ್ಯಾರೋಪ ಮಾಡುತ್ತಾ ಅಸಲಿ ಸಮಸ್ಯೆಗಳನ್ನು ಮರೆಮಾಚಲು ಆಳುವ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ನಿತ್ಯ ನಿರತರಾಗಿದ್ದಾರೆ.

ಈಗ ಈ ನಿಗಮ ಮಂಡಳಿಗಳ ವಿಚಾರಕ್ಕೆ ಬಂದರೆ, ಇವುಗಳು ಇರುವುದೇ ಆಳುವ ಪಕ್ಷದ ಅತೃಪ್ತ ಆತ್ಮಗಳನ್ನು ತೃಪ್ತಪಡಿಸಲು. ಈ ಎಲ್ಲಾ ನಿಗಮ ಮಂಡಳಿಗಳು ಒಂದು ರೀತಿಯಲ್ಲಿ ಆಳುವ ಪಕ್ಷದಲ್ಲಿ ಅಧಿಕಾರ ವಂಚಿತ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಾಗಿವೆ. ಶಾಸಕರೆಲ್ಲರನ್ನೂ ಸಚಿವರನ್ನಾಗಿ ಮಾಡಲು ಅವಕಾಶ ಇಲ್ಲವಾದ್ದರಿಂದ ಅವಕಾಶ ವಂಚಿತ ಶಾಸಕರ ಹಾಗೂ ಇತರೇ  ಪ್ರಭಾವಿ ನಾಯಕರ ಅಸಮಾಧಾನವನ್ನು ಶಮನಗೊಳಿಸಲು ಈ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯನ್ನು ಕೊಡಲಾಗುತ್ತದೆ. ಸರಕಾರಕ್ಕಾಗಲೀ ಇಲ್ಲವೇ ಈ ನಿಗಮಗಳ ಅಧ್ಯಕ್ಷರಾಗಿ ಆಯ್ಕೆಯಾಗುವವರಿಗಾಗಲೀ ನಿಗಮ ಮಂಡಳಿಗಳ ಕ್ಷೇಮಾಭಿವೃದ್ಧಿಯ ಬಗ್ಗೆ ಕಾಳಜಿ ಇರುತ್ತದೆ ಎಂಬುದು ಸತ್ಯವಲ್ಲ. ಈ ಸರಕಾರಿ ನಿಯಂತ್ರಣದ ಸಂಸ್ಥೆಗಳಿಂದ ಎಷ್ಟು ಸಾಧ್ಯವೋ ಅಷ್ಟು ಹಣ ಬಾಚಿಕೊಳ್ಳುವ ಹಾಗೂ ಹಾಗೆ ಪಡೆದ ಹಣದಲ್ಲಿ ಪಕ್ಷಕ್ಕೂ ಕೊಟ್ಟು, ಮುಂಚೂಣಿ ನಾಯಕರಿಗೂ ಹಂಚಿ ಉಳಿದದ್ದನ್ನು ಅಧ್ಯಕ್ಷರಾದವರು ಬಳಸಿಕೊಳ್ಳುವುದೇ ಈ ಹುದ್ದೆಗಳ ಹಿಂದಿರುವ ಮರ್ಮ. ಅದಕ್ಕಾಗಿಯೇ ಈ ಹುದ್ದೆಗಳನ್ನು ಪಡೆಯಲು ಪೈಪೋಟಿ. ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಕೆಎಸ್ ಡಿಎಲ್ ನಿಗಮಕ್ಕೆ ಅಧ್ಯಕ್ಷರಾಗಿದ್ದ ಶಾಸಕ ವಿರುಪಾಕ್ಷಪ್ಪ ಮಾಡಾಳರವರ ಕಛೇರಿ ಹಾಗೂ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂಪಾಯಿಗಳೆ ಸಾಕ್ಷಿಯಾಗಿವೆ. ಇನ್ನೂ ಸಿಕ್ಕಿ ಬೀಳದೇ ನಿಗಮ ಮಂಡಳಿಗಳಿಂದ ಲೂಟಿ ಮಾಡಿದ ಮಿಕಗಳೇನೂ ಕಮ್ಮಿ ಇಲ್ಲ.  

ಹೀಗಾಗಿ ಯಾವ ಪಕ್ಷವೇ ಆಡಳಿತದಲ್ಲಿರಲಿ ಈ ನಿಗಮ ಮಂಡಳಿಗಳು ರಾಜಕೀಯ ನಾಯಕರ ನಿಯಂತ್ರಣದಲ್ಲಿ ಇರುವವರೆಗೂ ಉದ್ದಾರವಾಗುವುದಿಲ್ಲ. ಇದಕ್ಕೆ ಲಾಸ್ ಲ್ಲಿರುವ ಸಾರಿಗೆ ಸಂಸ್ಥೆ, ಬಿಡಿಎ ಹಾಗೂ ನಷ್ಟದಲ್ಲಿರುವ ಬಹುತೇಕ ಸರಕಾರಿ ಸಂಸ್ಥೆಗಳೇ ಸಾಕ್ಷಿಯಾಗಿವೆ. ನಿಗಮ ಮಂಡಳಿಗಳ ಅಧ್ಯಕ್ಷರುಗಳ ಬೇನಾಮಿ ಹಾಗೂ ಸ್ವನಾಮಿ ಆಸ್ತಿಗಳ ಹೆಚ್ಚಳವೇ ಪುರಾವೆಯಾಗಿದೆ. 

ಬಿಜೆಪಿ ಆಡಳಿತ ಪಕ್ಷವಾಗಿದ್ದಾಗ ಮುಖ್ಯಮಂತ್ರಿ ಹಾಗೂ ಮಂತ್ರಿಯಾಗಲು ಹೈಕಮಾಂಡಿಗೆ ಎಷ್ಟು ಕೋಟಿ ಹಣ ಕೊಡಬೇಕಾಗುತ್ತದೆ ಎಂಬುದನ್ನು ಅದೇ ಪಕ್ಷದ ಶಾಸಕರು ಆರೋಪಿಸಿದರು. 40% ಸರಕಾರ ಎಂದು ಕಾಂಗ್ರೆಸ್ ಪಕ್ಷ ಪ್ರಚಾರಾಂದೋಲನ ಮಾಡಿತು.  ಈಗ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವಾಗ ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಎಷ್ಟು ಕೋಟಿ ದರ ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ. ಯಾವುದೇ ಪಕ್ಷದ ಸರಕಾರ ಇದ್ದರೂ ಈ ವ್ಯವಸ್ಥೆಯಲ್ಲಿ  ಭ್ರಷ್ಟಾಚಾರ ತಪ್ಪಿದ್ದಲ್ಲ. ನೇರವಾಗಿ ಅಲ್ಲದಿದ್ದರೂ ಗುಪ್ತವಾಗಿ ಆರ್ಥಿಕ ಅವ್ಯವಹಾರ ನಡೆಯುತ್ತಲೇ ಇರುತ್ತದೆ. ಆರೋಪ ಮಾಡುವವರೂ ಶುದ್ಧ ಹಸ್ತರಲ್ಲ, ಆರೋಪಿತರೂ ಪ್ರಾಮಾಣಿಕರೇನಲ್ಲ. ಆದರೆ ಈ ಯಾವುದಕ್ಕೂ ಸಾಕ್ಷಿ ಪುರಾವೆಗಳು ಲಭ್ಯವಾಗುವುದಿಲ್ಲ. ಅಕಸ್ಮಾತ್ ಮಾಡಾಳ್ ರಂತೆ ಸಿಕ್ಕಿಬಿದ್ದರೂ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಮಾರ್ಗಗಳಂತೂ ಅವರಿಗೆ ನೂರಾರಿವೆ. ಅವಕಾಶ ಸಿಕ್ಕಾಗ ಬಾಚಿಕೊಳ್ಳುವ ಪಕ್ಷಗಳು, ನಾಯಕರುಗಳು ಇರುವಾಗ ಹಾಗೂ ಇಂತವರನ್ನೇ ಆರಿಸಿ ಕಳುಹಿಸುವ ಮತದಾರರು ಇರುವಾಗ ಈ ವ್ಯವಸ್ಥೆ ಹೀಗೆಯೇ ಮುಂದುವರೆಯುತ್ತದೆ. ಅಧಿಕಾರ ಹಾಗೂ ಸಂಪನ್ಮೂಲಗಳ ಹಂಚಿಕೆಗೆ ಆರೋಪ ಪ್ರತ್ಯಾರೋಪಗಳ ಸರಮಾಲೆ ಇದ್ದೇ ಇರುತ್ತದೆ. ಮತದಾರರು ಪ್ರಾಮಾಣಿಕರಾಗಿ ವಿವೇಚನೆಯನ್ನು ಬೆಳೆಸಿಕೊಳ್ಳುವವರೆಗೂ ಈ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ನಾಟಕಗಳು ನಿರಂತರವಾಗಿರುತ್ತವೆ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಅಕ್ರಮ ಆಸ್ತಿ ಗಳಿಕೆ ಆರೋಪ: ಕರ್ನಾಟಕದಾದ್ಯಂತ 17 ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

Related Articles

ಇತ್ತೀಚಿನ ಸುದ್ದಿಗಳು