Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಹಾ ಯೋಜನೆ ರಿಷಿಕೇಶ್-ಕರ್ಣಪ್ರಯಾಗ ರೈಲು ಮಾರ್ಗ

ಜೋಶಿಮಠ ಜಗತ್ತಿನಾದ್ಯಂತ ಸುದ್ದಿ ಮಾಡತೊಡಗಿದಂತೆ ಕರ್ಣಪ್ರಯಾಗದಲ್ಲಿ ನೆಲ ಬಿರುಕುಗಳು ಕಾಣಿಸಿ ಕೊಂಡಿವೆ. ಈ ಸಾಲಿಗೆ ಈಗ ರೇನಿ, ಔಲಿ, ಸೆಲಾಂಗ್, ತೆಹ್ರಿ ಮುಂತಾದ ಊರುಗಳೂ ಸೇರಿವೆ. ಮುಂಬರುವ ದಿನಗಳಲ್ಲಿ ಸೇರಲು ಮಾನಾ, ದರಾಸು, ಗೌಚಾರ್, ಹರ್ಶಿಲ್, ಪಿತೋರ್‍ಗರ್ ಮುಂತಾದವು ಸರದಿ ಕಾಯುತ್ತಿವೆ. ಖ್ಯಾತ ವಿಜ್ಞಾನ ಬರಹಗಾರ ಕೆ ಎಸ್‌ ರವಿಕುಮಾರ್ ಬರೆಯುತ್ತಿರುವ ʼಜರಿಯುತ್ತಿರುವ ಜೋಶಿಮಠʼ ಸರಣಿ ಬರಹದ ಈ ಐದನೆಯ ಭಾಗ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಒಕ್ಕೂಟ ಸರ್ಕಾರದ ಇನ್ನೊಂದು ಮಹಾಮುಚ್ಚಟೆಯ ಯೋಜನೆಯೆಂದರೆ ರಿಷಿಕೇಶ್-ಕರ್ಣಪ್ರಯಾಗ ರೈಲುಮಾರ್ಗ. 2011ರಲ್ಲೆ ಈ ಯೋಜನೆಗೆ ಅಡಿಗಲ್ಲು ಬಿದ್ದಿತ್ತು. 2013ರಲ್ಲಿ ಮಾರ್ಗಗಳನ್ನು ಆಖೈರುಗೊಳಿಸಲಾಯಿತು. ಆಮೇಲೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಯೋಜನೆ ಮೂಲೆ ಸೇರಿತ್ತು. 2015ರಲ್ಲಿ ಹೊಸ ಒಕ್ಕೂಟ ಸರ್ಕಾರ 16,200 ಕೋಟಿ ರೂಪಾಯಿಗಳ ಈ ಯೋಜನೆಗೆ ಹಿಂದಿನ ಸರ್ಕಾರಗಳಿಗಿಂತಲೂ ಗಂಭೀರ ಆದ್ಯತೆ ನೀಡಿದ್ದೇ ಅಲ್ಲದೆ ಗಡಿಯಲ್ಲಿ ನೆರೆದೇಶದ ಜೊತೆ ಕಾಳಗ ಜರುಗಿದರೆ ನಮ್ಮ ಸೇನಾಪಡೆಗಳು ಕಡಿಮೆ ಗಡುವಿನಲ್ಲಿ ಗಡಿ ಸೇರಲು ನೆರವಾಗುವುದೆಂದು ಈ ರೈಲು ಮಾರ್ಗದ ನಿರ್ಮಾಣವನ್ನು ಕೈಗೆತ್ತಿಕೊಂಡಿತು ಹಾಗೂ ತ್ವರಿತಗತಿಯಲ್ಲಿ ಮುಗಿದು  ಬಿಡಬೇಕೆಂಬ ತಾಕೀತನ್ನೂ ರೈಲ್ವೇ ಇಲಾಖೆಗೆ ರವಾನಿಸಿತು. ಇದೆಲ್ಲ ಸರಿಯೆ, ಆದರೆ ಹಿಮಾಲಯದ ಅಪಾಯಕಾರಿ ನವಿರುತನವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಲ್ಲ. ನಮ್ಮ ಬಳಿ ದುಡ್ಡಿದೆ, ಪರಿಣಿತರಿದ್ದಾರೆ, ಹೇರಳ ವರ್ಕ್‍ಫೋರ್ಸ್ ಇದೆ, ಯೋಜನೆಯ ಯಶಸ್ಸಿಗೆ ಪಟ್ಟು ಹಿಡಿದು ಸಾಧಿಸುವ ಹಟವಿದೆ. ಆದರೇನು ಮಾಡುವುದು, ಹಿಮಾಲಯವನ್ನು ನಮಗೆ ತಕ್ಕಂತೆ ಒಗ್ಗಿಸಿಕೊಳ್ಳುವ, ಬಗ್ಗಿಸಿಕೊಳ್ಳುವ ತಾಕತ್ತು ಮನುಷ್ಯರಾದ ನಮಗಿದೆಯೆ? ಈ ರೈಲು ಯೋಜನೆಯ ಉದ್ದ 125 ಕಿ.ಮೀ.ಗಳು. ಇದರಲ್ಲಿ 105 ಕಿ.ಮೀ.ಗಳಷ್ಟು ದೂರ ರೈಲುಗಳು ಸುರಂಗದಲ್ಲೆ ಸಂಚರಿಸಬೇಕು. ಯೋಜನೆಯ ಕುರಿತಾದ ಆತಂಕದ ಕೇಂದ್ರ ಬಿಂದು ಇರುವುದೇ ಇಲ್ಲಿ. ಬೆಡ್ಡಗುಡ್ಡಗಳನ್ನು ಸತತ ಕೊರೆದು ಸುರಂಗ ನಿರ್ಮಿಸುವುದು ಅನಾಹುತಕ್ಕೆ ಕರೆ ನೀಡಿದಂತೆಯೆ. 2013ರ ಅಪೂರ್ವ ನೈಸರ್ಗಿಕ ವಿಪತ್ತಿನ ನಂತರ ಉತ್ತರಾಖಂಡದ ಹಿಮಾಲಯ ಭದ್ರ ಭರವಸೆಯ ತಾಣವಾಗಿ ಉಳಿದಿಲ್ಲ. ಸುರಂಗಗಳಿಂದ ಸಡಿಲಗೊಂಡ ಬೆಟ್ಟಗುಡ್ಡಗಳು ಜರಿದರೆ ರೈಲುಮಾರ್ಗ ಮಣ್ಣುಪಾಲೇ. ಸುರಂಗಗಳಿಂದ ತೆಗೆದ ಮಣ್ಣುಕಲ್ಲುಗಳನ್ನು ಕೆಳಗಿನ ನದಿ ದಂಡೆಗಳಿಗೆ ತಂದು ಸುರಿಯಲಾಗುತ್ತಿದೆ. ಹೀಗೆ ಸುರಿಯುತ್ತಿರುವುದರಿಂದ ನದಿ ಪಾತ್ರಗಳು ಕುಗ್ಗುತ್ತಿವೆ. ಹೀಗಾದಾಗ ಒಂದು ಸಾಮಾನ್ಯ ಮಳೆ ತರಬಹುದಾದ ಸಾಮಾನ್ಯ ನೆರೆಗೂ ನೀರು ಉಕ್ಕಿ ಅಕ್ಕಪಕ್ಕದ ಊರುಗಳನ್ನು ಮುಳುಗಿಸುವ ಸಾಧ್ಯತೆ ಹೆಚ್ಚುತ್ತದೆ. ಸುರಂಗದ ಕಲ್ಲುಮಣ್ಣುಗಳನ್ನೇ ಅತಿಕ್ರಮಿಸಿ, ಅಷ್ಟಿಷ್ಟು ಮಟ್ಟಸ ಗೊಳಿಸಿ ಅಕ್ರಮ ಕಟ್ಟಡಗಳನ್ನು ಮುಂದಿನ ದಿನಗಳಲ್ಲಿ ಎಬ್ಬಿಸುವ ಹೊಲ್ಲಹಂಬಲ ಹೆಚ್ಚಲಿದೆ. ತಕ್ಕ ಅಡಿಪಾಯವಿಲ್ಲದ ಈ ಕಟ್ಟಡಗಳು ನೆರೆಗೆ ಕೊಚ್ಚಿಹೋಗಿ ಜೀವ ಮತ್ತು ಆಸ್ತಿ ಹಾನಿಗೆ ಕಾರಣವಾಗುತ್ತವೆ. 2013ರಲ್ಲಿ ಹೀಗೆ ಆಗಿಯೂ ಇದೆ. ಈ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಲಂಚಪಡೆದು ‘ಲೈಸೆನ್ಸ್’ ಕೊಟ್ಟವರು ಮಾತ್ರ ಎಲ್ಲೋ ಸುರಕ್ಷಿತ ಜಾಗದಲ್ಲಿ ಬಂಗಲೆ ಕಟ್ಟಿಕೊಂಡು ನೆಮ್ಮದಿಯಾಗಿರುತ್ತಾರೆ.

ರಿಷಿಕೇಶ್ ಕರ್ಣಪ್ರಯಾಗದ ಸುರಂಗ ಮಾರ್ಗ

ಒರತೆಯ ಒಡನಾಟ ತಪ್ಪಿಹೋದಾಗ

ಕರ್ಣಪ್ರಯಾಗದ ಬೆಟ್ಟವೊಂದರ ಮೇಲೆ 50 ಕುಟುಂಬಗಳ ಪನಾಯಿ ಪೊಕಾರಿ ಎಂಬ ಹಳ್ಳಿ ಇದೆ. ಈ ಹಳ್ಳಿಯ ಅಡಿಭಾಗದಲ್ಲಿ ರಿಷಿಕೇಶ್-ಕರ್ಣಪ್ರಯಾಗ ರೈಲುಮಾರ್ಗದ ಸುರಂಗ ಹಾದುಹೋಗುತ್ತದೆ. ಈ ಸುರಂಗವನ್ನು ಕೊರೆಯುವ ಮುಂಚೆ ಹಳ್ಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದ್ದದ್ದು ಒಂದೇ ಒಂದು ಬೆಟ್ಟದ ಒರತೆ. ವರುಷ ಪೂರ್ತಿ ಹರಿಯುತ್ತ ಹಳ್ಳಿಗರ ಅಗತ್ಯಗಳಿಗೆ ಅದು ಒದಗಿ ಬರುತ್ತಿತ್ತು. ಸುರಂಗ ಕೊರೆದ ಮೇಲೆ ಈ ಒರತೆ ಡೈನಾಮೈಟ್ ಸಿಡಿತ ಮತ್ತು ಕೊರೆತದಿಂದ ಭೂಮಿಯೊಳಗೆಲ್ಲೊ ಸೃಷ್ಟಿಯಾದ ಬಿರುಕುಗಳಲ್ಲಿ ಬಿದ್ದುಹೋಗಿರಬೇಕು. ಅಥವಾ ಕ್ರಮೇಣ ಬತ್ತಿಯೇ ಹೋಗಿರಬೇಕು. ಹೀಗಾಗಿ ಇವತ್ತು ಪನಾಯಿ ಪೊಕಾರಿ ನೀರಿನ ಕೊರತೆಯಿಂದ ಬಳಲುತ್ತಿದೆ. ಸರಿ, ಬದಲಿ ವ್ಯವಸ್ಥೆಯೊಂದು ರೂಪುಗೊಳ್ಳಲೇ ಬೇಕಲ್ಲವೆ. ದೂರದ ಪುಟ್ಟ ಹಳ್ಳದಿಂದ ಕೊಳವೆಯ ಮೂಲಕ ಹಳ್ಳಿಗೆ ನೀರು ಹರಿದು ಬರುತ್ತಿದೆ. ಈ ನೀರು ಮುಂಚೆ ಇದ್ದ ಒರತೆಯಷ್ಟು ಚೊಕ್ಕಟವಾಗಿಲ್ಲ. ಕುದಿಸಿ ಕುಡಿಯಬೇಕು. ಮಳೆಗಾಲದಲ್ಲಿ ಕಲ್ಲುಮಣ್ಣು ಕುಸಿದು ಕೊಳವೆ ಜಜ್ಜಿಹೋಗುತ್ತದೆ. ಮತ್ತೆ ಮತ್ತೆ ರಿಪೇರಿ ಮಾಡುತ್ತಿರಬೇಕು. ಈಗ ಹಳ್ಳಿಯವರಿಗೆ ಚೊಕ್ಕಟ ನೀರಿನದೇ ಒಂದು ಸಮಸ್ಯೆ ಕಾಡುತ್ತಿದೆ.
ಯಾವುದೇ ಕಾರಣಕ್ಕೆ ಬೆಟ್ಟ ಪ್ರದೇಶಗಳಲ್ಲಿ ನೆಲದೊಳಗೆ ಸುರಂಗಗಳನ್ನು ಕೊರೆದರೆ ಒರತೆಗಳ ಹೊರಬರುವ ಜಾಡು ಕಡಿದುಹೋಗಿ ಅವು ದಿಕ್ಕು ತಪ್ಪುತ್ತವೆ, ಕ್ರಮೇಣ ಬತ್ತಿ ಹೋಗುತ್ತವೆ. ಇದು ಒಂದು ಸಣ್ಣ ಉದಾಹರಣೆಯಷ್ಟೆ. ನೆನಪಿರಲಿ ರಾಷ್ಟ್ರದ ಹಿತಕ್ಕಾಗಿ ನಾವಿದನ್ನೆಲ್ಲ ಸಹಿಸಬೇಕು ಎಂಬ ಕಟ್ಟಪ್ಪಣೆ ಸಿದ್ಧವಾಗಿರುತ್ತದೆ. ಹಿಮಾಲಯಕ್ಕೆ ರಾಷ್ಟ್ರಹಿತ ಅರ್ಥವಾಗುವಂತಿದ್ದರೆ…!

ಇವತ್ತಿನವರೆಗೆ ರಿಷಿಕೇಶ್-ಕರ್ಣಪ್ರಯಾಗ ರೈಲು ಮಾರ್ಗದ ಕಾಮಗಾರಿ ಶೇಕಡಾ 33ರಷ್ಟು ಮುಗಿದಿದೆ. ಪೂರ್ತಿ ಮುಗಿದಮೇಲೆ ಭಾರತದ ಅತಿ ಉದ್ದದ ‘ಸುರಂಗ-ರೈಲು ಮಾರ್ಗ’ ಎಂಬ ಹೆಸರು ಈ ಯೋಜನೆಗೆ ತಗಲಿ ಕೊಳ್ಳುತ್ತದೆ. ಈ ಹೆಸರು ಏನೇ ಇರಲಿ, ಈ ಮಾರ್ಗ ತಲುಪುವ ಕರ್ಣಪ್ರಯಾಗ ಪಟ್ಟಣದಲ್ಲೂ ಮನೆಗಳು ಜೋಶಿಮಠದ ಹಾಗೆಯೆ ಬಿರುಕು ಬಿಡತೊಡಗಿವೆ (ಈಗಾಗಲೆ ಪ್ರಜಾವಾಣಿಯಲ್ಲಿ ವರದಿಗಾರ ಮಂಜುನಾಥ್ ಹೆಬ್ಬಾರ್ ಈ ಕುರಿತು ಸ್ಥಳಕ್ಕೇ ಹೋಗಿ ಕಣ್ಣಾರೆ ಕಂಡಿದ್ದನ್ನು ಬರೆದಿದ್ದಾರೆ, ನೋಡಿ ಪ್ರಜಾವಾಣಿ, ತಾರೀಕು 13.01.2023). ನೆಲ ಕುಸಿಯುತ್ತಿರುವ ಊರಿಗೆ ಬರುವ ರೈಲುಮಾರ್ಗ ಮತ್ತು ರೈಲುಗಳು ಸುರಕ್ಷಿತವಾಗಿರುತ್ತವೆಂದು ನಂಬುವುದಾದರೂ ಹೇಗೆ?

ಕರ್ಣಪ್ರಯಾಗದಲ್ಲಿ ಹಾನಿಗೊಂಡ ಮನೆ

ಹೊಸವರುಷದ ಮೊದಲವಾರ ಜೋಶಿಮಠದಲ್ಲಿ 600ಕ್ಕೂ ಹೆಚ್ಚು ಮನೆ, ಹೋಟೆಲ್, ಕಛೇರಿ, ಅಂಗಡಿ, ಶಂಕರಾಚಾರ್ಯ ದೇಗುಲಗಳ ನೆಲ ಮತ್ತು ಗೋಡೆಗಳಲ್ಲಿ ಬಿರುಕುಗಳು ಕಾಣಿಸಿದ್ದವು. ಎರಡನೇ ವಾರದ ಹೊತ್ತಿಗೆ ಈ ಸಂಖ್ಯೆ 700ನ್ನು ದಾಟಿತ್ತು. ರಸ್ತೆಗಳು ತಮ್ಮ ಮೇಲೆ ಬಿದ್ದ ಗುರುತ್ವದ ಬಲಕ್ಕೆ ಅನುಗುಣವಾಗಿ ಅಡ್ಡಡ್ಡ, ಉದ್ದುದ್ದ ಬಿರುಕುಗಳನ್ನು ಸೃಷ್ಟಿಸಿ ನೋಡುಗರನ್ನು ಕಂಗಾಲು ಮಾಡಿವೆ. ಜೋಶಿಮಠ ಜಗತ್ತಿನಾದ್ಯಂತ ಸುದ್ದಿ ಮಾಡತೊಡಗಿದಂತೆ ಕರ್ಣಪ್ರಯಾಗದಲ್ಲಿ ನೆಲ ಬಿರುಕುಗಳು ಕಾಣಿಸಿ ಕೊಂಡಿವೆ. ಈ ಸಾಲಿಗೆ ಈಗ ರೇನಿ, ಔಲಿ, ಸೆಲಾಂಗ್, ತೆಹ್ರಿ ಮುಂತಾದ ಊರುಗಳೂ ಸೇರಿವೆ. ಮುಂಬರುವ ದಿನಗಳಲ್ಲಿ ಸೇರಲು ಮಾನಾ, ದರಾಸು, ಗೌಚಾರ್, ಹರ್ಶಿಲ್, ಪಿತೋರ್‍ಗರ್ ಮುಂತಾದವು ಸರದಿ ಕಾಯುತ್ತಿವೆ. ಮಿಲಿಟರಿ ದೃಷ್ಟಿಯಿಂದಲೂ ಇವು ಬಹುಮುಖ್ಯ ತಾಣಗಳೂ ಹೌದು. ಈಗಾಗಲೆ ಜೋಶಿಮಠದ ಮಿಲಿಟರಿ ನೆಲೆಯ ಸೇನಾ ತುಕಡಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಮುಂದೆ ಇನ್ನೂ ಹಲವು ನೆಲೆಗಳನ್ನು ತೆರವು ಗೊಳಿಸಬೇಕಾಗುತ್ತದೆ. ತೆಹ್ರಿಯಿಂದ ಚೀನಾ ಗಡಿಯ ಸಮೀಪದ ಕಡೆಯ ಹಳ್ಳಿ ಮಾನಾ ತನಕ ಇರುವ ಇಡೀ ಉತ್ತರಾಖಂಡ್ ವಲಯ ಭವಿಷ್ಯದಲ್ಲಿ ಕುಸಿದು ಹೋಗಲಿದೆ ಎಂಬ ಅನುಮಾನ, ಆತಂಕಗಳು ಈಗ ಹಬ್ಬುತ್ತಿವೆ. ಹೀಗೆ ಕುಸಿದು ಹೋದ ಊರುಗಳ ಜನರನ್ನು ಎಲ್ಲಿ ನೆಲೆಗೊಳಿಸುವುದು? ಗೊತ್ತಿಲ್ಲ. ಹಿಮಾಲಯ ಮುಂದೆ ನಿರಾಶ್ರಿತರ ಬೀಡಾಗಲಿದೆಯೆ?

ಜೋಶಿಮಠದ ದುರಂತ ಈಗ ಇಡೀ ಜಗತ್ತಿನ ಚರ್ಚೆಯಾಗಿದೆ. ಆದರೆ ನಮ್ಮ National Disaster Management Authority ಗೆ ಈ ಕುರಿತು ಪಾರದರ್ಶಕ, ತೆರೆದ ಮನಸ್ಸಿನ ಚರ್ಚೆಯಾಗುವುದು ಬೇಕಿಲ್ಲ. ಜೋಶಿಮಠದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪ್ರತೀ ವಿಚಾರವೂ ಎಲ್ಲರಿಗೂ ತಿಳಿಯಬೇಕು. ಸರ್ಕಾರದ ಸಂಸ್ಥೆಗಳ ಅಧಿಕೃತ ಮಿಂದಾಣಗಳಿಂದ ಪಠ್ಯ ಮತ್ತು ಚಿತ್ರಗಳನ್ನು ತೆಗೆದು ಹಾಕಲು ಅದು ಸೂಚಿಸಿದೆ. ಮಾಹಿತಿಯನ್ನು ಮುಚ್ಚಿಡಬಹುದು, ಹಿಮಾಲಯವನ್ನು ಬೈತಿಡಬಹುದೆ? ಇಸ್ರೋ ಜೋಶಿಮಠದ ನೆಲ ಡಿಸೆಂಬರ್ 27ರಿಂದ ಜನವರಿ 8ರವರೆಗೆ 5.4 ಸೆ.ಮೀ.ನಷ್ಟು ಕುಸಿದ ಚಿತ್ರಗಳನ್ನು ತನ್ನ ಮಿಂದಾಣದಿಂದ ಹಿಂಪಡೆದಿದೆ. ದೊಡ್ಡ ಸಾಧನೆ! ನೈಸರ್ಗಿಕ ಆಪತ್ತು ಮತ್ತು ವಿಪತ್ತುಗಳೆರಗಿದಾಗ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ಮಾಡುವ ಕೆಲಸದ ಬಗ್ಗೆ ಸರಿಹೊತ್ತಿನ ಮಾಹಿತಿ ಸಿಗುವುದಿಲ್ಲವೆಂದಾದರೆ ಜನರಿಗೆ ಈ ಎಲ್ಲವುಗಳೂ ಸಮಸ್ಯೆಗೆ ತಕ್ಕ ಪರಿಹಾರ ಹುಡುಕುತ್ತವೆ ಎಂಬ ನಂಬಿಕೆ ಬರುವುದಾದರೂ ಹೇಗೆ? ನಾಸಾ ಭೂಮಿ ಹಾಗೂ ಭೂಪ್ರದೇಶಗಳಿಗೆ ಸಂಬಂಧಿಸಿದಂತೆ ತಾನು ಪಡೆಯುವ ಉಪಗ್ರಹ ಮಾಹಿತಿಗಳನ್ನು ಪಾರದರ್ಶಕವಾಗಿ ತನ್ನ ಸರ್ಕಾರ ಮತ್ತು ಜನರ ಜೊತೆ ಹಂಚಿಕೊಳ್ಳುತ್ತದೆ. ಅಮೆರಿಕಾ ಕೂಡಾ ನಾಸಾದ ಕೈಕಟ್ಟುವುದಿಲ್ಲ. ಇಸ್ರೋ ನಾಸಾದ ಹಾದಿ ಹಿಡಿಯುವುದು ಯಾವಾಗ?

(ಮುಂದಿನ ಸರಣಿಯಲ್ಲಿ ಹವಾಮಾನ ಬದಲಾವಣೆ ಮತ್ತು ಹಿಮಾಲಯ)

ಕೆ ಎಸ್‌ ರವಿಕುಮಾರ್‌

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

Related Articles

ಇತ್ತೀಚಿನ ಸುದ್ದಿಗಳು