Wednesday, June 26, 2024

ಸತ್ಯ | ನ್ಯಾಯ |ಧರ್ಮ

ಬಿಹಾರ: ನಿತೀಶ್ ಮುಖ್ಯಮಂತ್ರಿ, ತೇಜಸ್ವಿ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ

‘ಮಹಾಘಟಬಂಧನ್’ ನ ಮಹಾ ಸೂಚನೆ ಕೊಟ್ಟ ಬಿಹಾರದಲ್ಲಿ ಇಂದು ನಿತೀಶ್ ಕುಮಾರ್ ಹೊಸ ಸರ್ಕಾರ ರಚನೆ ಮಾಡಲಿದ್ದಾರೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ, ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಪುಟ ರಚನೆ ವಿಚಾರದಲ್ಲಿ ಈಗಾಗಲೇ ಎಲ್ಲಾ ರೀತಿಯ ಮಾತುಕತೆ ನಡೆದಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂಬುದಾಗಿ ತೇಜಸ್ವಿ ಯಾದವ್ ತಿಳಿಸಿದ್ದಾರೆ. ಅದರಂತೆ ಬಿಹಾರದಲ್ಲಿ ಒಬ್ಬ ಪಕ್ಷೇತರ ಶಾಸಕರನ್ನೂ ಒಳಗೊಂಡಂತೆ ಒಟ್ಟು ಏಳು ಪಕ್ಷಗಳು ಸೇರಿದಂತಾ ಮಹಾಮೈತ್ರಿಕೂಟದ ಮಾದರಿ ಸರ್ಕಾರ ರಚನೆಯಾದಂತಾಗುತ್ತದೆ.

JDU ಮತ್ತು RJD ಎರಡೂ ಪಕ್ಷಗಳು ತಮ್ಮ ಮುಖಂಡರ ಸಮ್ಮುಖದಲ್ಲಿ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿವೆ. ಆ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು, ಹಿರಿಯ ನಾಯಕರು ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಮೈತ್ರಿಕೂಟದ ಅಡಿಯಲ್ಲಿ ಬರುವ ಎಲ್ಲಾ ಪಕ್ಷಗಳೂ ಬಿಜೆಪಿ ಪಕ್ಷವನ್ನು ಸಮಾನ ಅಂತರದಲ್ಲಿ ಇಡಲಿವೆ. ಬಿಜೆಪಿಯ ಯಾವುದೇ ಬೆದರಿಕೆಗೂ ನಾವು ಮಣಿಯುವುದಿಲ್ಲ ಎಂಬುದಾಗಿ ಮೈತ್ರಿಕೂಟಕ್ಕೆ ಬೆಂಬಲಿಸುವ ಪಕ್ಷಗಳು ಸ್ಪಷ್ಟಪಡಿಸಿವೆ.

ಬಿಜೆಪಿ ಪಕ್ಷ ತನ್ನ ಸಾರ್ವಭೌಮತೆ ಮೆರೆಯಲು ಇತರೆ ಎಲ್ಲಾ ಮಿತ್ರ ಪಕ್ಷಗಳಿಗೆ ದ್ರೋಹ ಎಸಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆದು ಸರ್ಕಾರ ಉರುಳಿಸಿದ ಮಾದರಿಯಲ್ಲೇ, ಎಲ್ಲೆಲ್ಲಿ ತಾನು ಮೈತ್ರಿ ಮಾಡಿಕೊಂಡಿದೆಯೋ ಅಲ್ಲೆಲ್ಲಾ ಮಿತ್ರ ಪಕ್ಷಕ್ಕೆ ದ್ರೋಹ ಎಸಗಿ, ಶಾಸಕರ ಮನವೊಲಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯ ಇಂತಹ ನಡೆ ಹೆಚ್ಚು ಕಾಲ ನಡೆಯುವುದಿಲ್ಲ ಎಂಬುದಾಗಿ ಎರಡೂ ಪಕ್ಷದ ಮುಖಂಡರು ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು