ಪಟ್ನಾ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಗಳ ವೇಳೆ ಬಂಧಿಸಲಾಗಿದ್ದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವುದಾಗಿ ಬಿಹಾರ ಸರ್ಕಾರ ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಪಟ್ನಾದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಯುವಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ಎನ್‌ಎಸ್‌ಯುಐ (NSUI), ಎಐಎಸ್‌ಎಫ್ (AISF) ಮತ್ತು ಡಿವೈಎಫ್‌ಐ (DYFI) ಸೇರಿದಂತೆ ಹಲವು ಸಂಘಟನೆಗಳ ಬಾವುಟ ಹಿಡಿದು ಗಾಂಧಿ ಮೈದಾನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಸಿಎಂ ನಿವಾಸದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆದರು. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ವಾಟರ್ ಕ್ಯಾನನ್‌ಗಳನ್ನು ಬಳಸಿದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮತ್ತೊಂದು ನೀಟ್ ವಿವಾದ
ನೀಟ್ ಯುಜಿ ಪರೀಕ್ಷೆಯಲ್ಲಿ ತಾವು ಸಲ್ಲಿಸಿದ್ದ ಮೂಲ ಓಎಂಆರ್ (OMR) ಶೀಟ್‌ನಲ್ಲಿರುವ ಉತ್ತರಗಳಿಗೂ, ಎನ್‌ಟಿಎ (NTA) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಓಎಂಆರ್ ಶೀಟ್‌ನಲ್ಲಿರುವ ಉತ್ತರಗಳಿಗೂ ವ್ಯತ್ಯಾಸವಿದೆ ಎಂದು ಆರೋಪಿಸಿ ಆರು ಮಂದಿ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ಕುರಿತು ತಕ್ಷಣವೇ ವಿಚಾರಣೆ ನಡೆಸಬೇಕೆಂದು ವಿದ್ಯಾರ್ಥಿಗಳ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಈ ಕುರಿತು ಶೀಘ್ರವೇ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
