Friday, June 28, 2024

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳ ಬಿಡುಗಡೆ: ಸಾರ್ವಜನಿಕರ ತೀವ್ರ ಆಕ್ಷೇಪ

2002ರ ಗೋದ್ರಾ ಗಲಭೆ ವೇಳೆ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅಪರಾಧಿಗಳು ಗುಜರಾತ್ ಸರಕಾರದ ಕ್ಷಮಾದಾನ ನೀತಿಯಡಿ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಶಿಕ್ಷೆ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಸರಕಾರದಿಂದ ರಚನೆಯಾದ ಸಮಿತಿಯು ಪ್ರಕರಣದ ಎಲ್ಲಾ 11 ಆರೋಪಿಗಳನ್ನು ಬಿಡುಗಡೆ ಮಾಡುವ ಪರವಾಗಿ ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದ್ದು ಅದನ್ನು ಸರಕಾರವು ಸ್ವೀಕರಿಸಿದೆ.
ಅಲ್ಪ ಸಂಖ್ಯಾತ ಸಮುದಾಯದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬಸ್ಥರನ್ನು ಕೊಂದ 11 ಅಪರಾಧಿಗಳಿಗೆ 2008ರ ಜನವರಿ 21 ರಂದು ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಏನಿದು ಬಿಲ್ಕಿಸ್ ಬಾನು ಪ್ರಕರಣ?
2002 ರಲ್ಲಿ ಗೋದ್ರಾದಲ್ಲಿ ರೈಲು ಭೋಗಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕರಸೇವಕರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರು‌. ಈ ಘಟನೆಯನ್ನು ನೆಪವಾಗಿಸಿಕೊಂಡು ಮೊದಲೇ ತಯಾರಿ ನಡೆಸಿದ್ದ ಗುಜರಾತಿನ ಸಂಘಪರಿವಾರದ ಸಂಘಟನೆಗಳು ವ್ಯಾಪಕ ಹಿಂಸಾಚಾರ, ಜನಾಂಗೀಯ ನರಮೇಧ ನಡೆಸಿದ್ದವು. ಈ ನರಮೇಧದಲ್ಲಿ 2000 ಕ್ಕೂ ಹೆಚ್ಚು ಜನರ ಕಗ್ಗೊಲೆ ನಡೆದಿತ್ತು.
2002ರ ಮಾರ್ಚ್ 3ರಂದು ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲೂಕಿನಲ್ಲಿ ಗುಂಪೊಂದು ಬಿಲ್ಕಿಸ್ ಬಾನು ಅವರ ಕುಟುಂಬದ ಮೇಲೆ ದಾಳಿ ನಡೆಸಿತ್ತು.ದಾಳಿ ನಡೆಸಿದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಹೀಗಿದ್ದರೂ ದಾಳಿ ನಡೆಸಿದ ಮತಾಂಧರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು, ಅಷ್ಟೇ ಅಲ್ಲದೇ ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದಿದ್ದರು. ಹತ್ಯೆಗೀಡಾದವರಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಾ ಕೂಡಾ ಇದ್ದಳು.

ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋದಳು. ಆಗ ಸಿಬಿಐ ತನಿಖೆಗೆ ಸುಪ್ರಿಂಕೋರ್ಟ್ ಆದೇಶಿಸಿತ್ತು. ಈ ನಡುವೆ ಆಕೆಗೆ ಜೀವ ಬೆದರಿಕೆ ಬಂದ ಕಾರಣ 2004 ಆಗಸ್ಟ್ ತಿಂಗಳಲ್ಲಿ ಸುಪ್ರಿಂ ಕೋರ್ಟ್ ಪ್ರಕರಣವನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿತು. 2008 ಜನವರಿ 21 ರಂದು ಸಿಬಿಐ ವಿಶೇಷ ನ್ಯಾಯಾಲಯವು 13 ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆಯನ್ನು ಬಾಬೇ ಹೈ ಕೋರ್ಟ್ ಎತ್ತಿ ಹಿಡಿದಿತ್ತು. 2019 ರಲ್ಲಿ ಸುಪ್ರಿಂಕೋರ್ಟ್ ಬಿಲ್ಕಿಸ್ ಅವರಿಗೆ ರೂ 50 ಲಕ್ಷ ಪರಿಹಾರ ನೀಡಿತ್ತು.

ಇವರೇ ಆ ಹನ್ನೊಂದು ಮಂದಿ ಅಪರಾಧಿಗಳು
ಜಸ್ವಂತ್ ನೇಯ್, ಗೋವಿಂದ್ ನೇಯ್, ಶೈಲೇಶ್ ಭಟ್, ರಾಧೇ ಶ್ಯಾಮ್ ಶಾ, ಬಿಪಿನ್ ಚಂದ್ರ ಜೋಷಿ, ಕೇಸರ್ ಬಾಯ್ ವಹೋನಿಯ, ಪ್ರದೀಪ್ ಮೋರ್ದಿಯಾ, ಬಕಾಬಾಯಿ ವಹೋನಿಯಾ, ರಾಜುಬಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನ.
ಕ್ಷಮಾದಾನ ನೀತಿ ಹೀಗಿದೆ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಜೈಲಿಂದ ಕೈದಿಗಳನ್ನು ಬಿಡುಗಡೆಗೊಳಿಸುವಾಗ ರಾಜ್ಯಗಳು ಯಾವ ನೀತಿಯನ್ನು ಅನುಸರಿಸಬೇಕು ಎಂಬ ಬಗ್ಗೆ ಈ ವರ್ಷ ಜೂನ್ ನಲ್ಲಿ ಕೇಂದ್ರ ಸರಕಾರವು ಒಂದು ಮಾರ್ಗ ದರ್ಶಿ ಸೂತ್ರವನ್ನು ಹೊರಡಿಸಿತ್ತು. ಅದರಲ್ಲಿ ಅತ್ಯಾಚಾರದ ಅಪರಾಧಿಗಳನ್ನು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರನ್ನು ಬಿಡುಗಡೆಗೊಳಿಸಲೇ ಬಾರದು ಎಂದಿದೆ. ಹೀಗಿದ್ದೂ ಅಪರಾಧಿಗಳ ಬಿಡುಗಡೆಯಾಗಿದೆ.

ಸಾರ್ವಜನಿಕರ ಆಕ್ಷೇಪ
ಪ್ರಧಾನಿಯವರು ‘ಬೇಟಿ ಬಚಾವೊ ಬೇಟಿ ಪಡಾವೋ’ ಎಂದು ಹೆಣ್ಣು ಮಕ್ಕಳ ಪರವಾಗಿ ಈ ಹಿಂದೆ ಕರೆಕೊಟ್ಟಿದ್ದರು. ನಿನ್ನೆ ಸ್ವಾತಂತ್ರ್ಯೋತ್ಸವದ ಭಾಗವಾಗಿ ಮಾಡಿದ ಭಾಷಣದಲ್ಲಿ ಮಹಿಳೆಯನ್ನು ಗೌರವಿಸಬೇಕು, ನಾರೀ ಶಕ್ತಿಯನ್ನು ಬೆಂಬಲಿಸಬೇಕು ಎಂದು ಕೆಂಪುಕೋಟೆಯ ಮೇಲಿಂದನೇ ಕರೆ ಕೊಟ್ಟಿದ್ದಾರೆ. ಪ್ರಧಾನಿಗಳು ಹೀಗೆ ಕರೆಕೊಡುತ್ತಿರುವಾಗಲೇ ಆ ಕಡೆಯಿಂದ ಗುಜರಾತ್ ಸರಕಾರವು ಜೀವಾವಧಿ ಶಿಕ್ಷೆಗೊಳಗಾದ ಅತ್ಯಾಚಾರಿ ಮತ್ತು ಕೊಲೆಗಡುಕರನ್ನು ವಿಶೇಷ ಸಂದರ್ಭದ ನೆಲೆಯಲ್ಲಿ ಬಿಡುಗಡೆ ಮಾಡಿದೆ! ಜೈಲಿಂದ ಹೊರಗಡೆ ಅಪರಾಧಿಗಳಿಗೆ ಸಿಹಿಹಂಚಿ ಅವರನ್ನು ಗೌರವಿಸಲಾಗಿದೆ! ಪ್ರಧಾನಿಗಳ ಪಕ್ಷದ ಈ ನಡೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಸಿಪಿಐ ಎಮ್ ಎಲ್, ಐಪ್ವಾ ದ ನಾಯಕಿ ಕವಿತಾ ಕೃಷ್ಣನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ-ಪ್ರಧಾನಿಗಳಾದ ನರೆಂದ್ರ ಮೋದಿಯವರೇ, ಬಿಲ್ಕಿಸ್ ಬಾನು ಮುಸ್ಲಿಂ ಆಗಿರುವುದರಿಂದ ಆಕೆಯೂ ಈ ನಾರೀ ಶಕ್ತಿಯ ಭಾಗವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಗುಜರಾತಿನಲ್ಲಿ ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಸ್ವಾತಂತ್ರ್ಯೋತ್ಸವ ದಿನದಂದು ಜೈಲಿಂದ ಬಿಡುಗಡೆಗೊಳಿಸಲಾಯಿತು . ಮೋದಿ ಮತ್ತುಬಿಜೆಪಿಯವರ ಆಡಳಿತದಲ್ಲಿ ಇದು ಸ್ವಾತಂತ್ರ್ಯದ ಆಮೃತ ಮಹೋತ್ಸವ ಎಂದು ಮನೋಹರ ಇಳಾವರ್ತಿ ಟ್ವೀಟ್ ಮಾಡಿದ್ದಾರೆ.
ನ್ಯಾಯಕ್ಕಾಗಿ ಹೋರಾಡಿದ ಮಹಿಳೆ ಜೈಲಿನಲ್ಲಿದ್ದಾರೆ. ಅಪರಾಧಿಗಳು ಹೊರಗಿದ್ದಾರೆ. ಈ ಕ್ರೌರ್ಯವನ್ನು ನಿಲ್ಲಿಸಲು ಅಸಮರ್ಥನಾಗಿರುವ ವ್ಯಕ್ತಿ ಸಿಂಹಾಸನದಲ್ಲಿ ಇದ್ದಾರೆ ಎಂದು ಆಕಾರ್ ಪಟೇಲ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು