Monday, June 24, 2024

ಸತ್ಯ | ನ್ಯಾಯ |ಧರ್ಮ

ಮೇಲ್ಮನೆಯಲ್ಲಿ ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದ ಬಿಜೆಡಿ

ಭುವನೇಶ್ವರ: ಬಿಜು ಜನತಾ ದಳ (ಬಿಜೆಡಿ) ಅಧ್ಯಕ್ಷ ನವೀನ್ ಪಟ್ನಾಯಕ್ ಸೋಮವಾರ ತಮ್ಮ ಪಕ್ಷದ ಒಂಬತ್ತು ರಾಜ್ಯಸಭಾ ಸದಸ್ಯರೊಂದಿಗೆ ಸಭೆ ನಡೆಸಿದರು ಮತ್ತು ಜೂನ್ 27 ರಿಂದ ಪ್ರಾರಂಭವಾಗುವ ಸಂಸತ್ತಿನ ಮೇಲ್ಮನೆಯ ಅಧಿವೇಶನದಲ್ಲಿ ಪ್ರಬಲ ಪ್ರತಿಪಕ್ಷದ ಪಾತ್ರವನ್ನು ವಹಿಸುವಂತೆ ಕೇಳಿಕೊಂಡರು. .

ಸಭೆಯಲ್ಲಿ, ಪಟ್ನಾಯಕ್ ಅವರು ರಾಜ್ಯದ ಹಿತಾಸಕ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪ್ರಸ್ತಾಪಿಸುವಂತೆ ಸಂಸದರನ್ನು ಕೇಳಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ಪಕ್ಷದ ನಾಯಕ ಸಸ್ಮಿತ್ ಪಾತ್ರ, “ಈ ಬಾರಿ ಬಿಜೆಡಿ ಸಂಸದರು ಕೇವಲ ಸಮಸ್ಯೆಗಳ ಬಗ್ಗೆ ಮಾತನಾಡಲು ಸೀಮಿತವಾಗುವುದಿಲ್ಲ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಒಡಿಶಾದ ಹಿತಾಸಕ್ತಿಗಳನ್ನು ಕಡೆಗಣಿಸಿದರೆ ಅವರು ಪ್ರತಿಭಟನೆಯನ್ನೂ ಮಾಡುತ್ತಾರೆ. ಆಂದೋಲನ ಮಾಡಲು ನಿರ್ಧರಿಸಲಾಗಿದೆ.” ಎಂದು ಹೇಳಿದರು.

ಒಡಿಶಾಗೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಪ್ರಸ್ತಾಪಿಸುವುದಲ್ಲದೆ, ಬಿಜೆಡಿ ಸಂಸದರು ಕಳಪೆ ಮೊಬೈಲ್ ಸಂಪರ್ಕ ಮತ್ತು ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಬ್ಯಾಂಕ್ ಶಾಖೆಗಳ ಬಗ್ಗೆಯೂ ಪ್ರಸ್ತಾಪಿಸಲಿದ್ದಾರೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಿಂದ ಕಲ್ಲಿದ್ದಲು ರಾಯಧನದಲ್ಲಿ ತಿದ್ದುಪಡಿ ತರಬೇಕೆಂಬ ಒಡಿಶಾದ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ.ಇದರಿಂದ ರಾಜ್ಯದ ಜನತೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದ್ದು, ಬರಬೇಕಾದ ಪಾಲಿನಿಂದ ವಂಚಿತರಾಗಿದ್ದಾರೆ ಎಂದು ಪಾತ್ರಾ ಹೇಳಿದರು.

ಒಂಬತ್ತು ಸಂಸದರು ರಾಜ್ಯಸಭೆಯಲ್ಲಿ ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಮಸ್ಯೆ ಆಧಾರಿತ ಬೆಂಬಲ ನೀಡುವ ತನ್ನ ಹಿಂದಿನ ನಿಲುವಿಗೆ ಬಿಜೆಡಿ ಅಂಟಿಕೊಳ್ಳುತ್ತದೆಯೇ ಎಂದು ಪಾತ್ರಾ ಅವರನ್ನು ಕೇಳಿದಾಗ, “ಇನ್ನು ಬಿಜೆಪಿಗೆ ಯಾವುದೇ ರೀತಿಯ ಬೆಂಬಲವಿಲ್ಲ, ನಮ್ಮದೇನಿದ್ದರೂ ಪ್ರತಿಪಕ್ಷದ ಪಾತ್ರ, ಒಡಿಶಾದ ಹಿತಾಸಕ್ತಿಗಳನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗಬಲ್ಲೆವು” ಎಂದು ಹೇಳಿದರು.

ಮುಂದುವರೆದು “ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಒಡಿಶಾದ ನಿಜವಾದ ಬೇಡಿಕೆಗಳನ್ನು ಎನ್‌ಡಿಎ ಸರ್ಕಾರ ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ, ನಾವು ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುವಂತೆ ಬಿಜೆಡಿ ಅಧ್ಯಕ್ಷರು ನಮಗೆ ಹೇಳಿದರು.” ಎಂದು ಪಾತ್ರ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು