ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡೂ ಪಕ್ಷಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಮತ್ತು ಹಣದ ರಾಜಕೀಯದಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
ದೀಪಾವಳಿಗೆ ನಾಲ್ಕು ದಿನಗಳ ವಿರಾಮದ ನಂತರ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದ ರಾಹುಲ್ ಗಾಂಧಿಯವರು, ಸಂಸತ್ತಿನಲ್ಲಿ ಅಂಗೀಕಾರಕ್ಕಾಗಿ ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಮಂಡಿಸಿದ ಮಸೂದೆಗಳನ್ನು ಟಿಆರ್‌ಎಸ್ ಬೆಂಬಲಿಸುತ್ತದೆ ಎಂದು ಹೇಳಿದರು.
ಗುರುವಾರ ಸಂಜೆ, ನಾರಾಯಣಪೇಟೆ ಜಿಲ್ಲೆಯ ಗುನ್‌ಮುಕ್ಲಾ, ಮರಿಕಲ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಮೂರು ರೈತ ವಿರೋಧಿ ಕಾನೂನುಗಳಿಗೆ ಟಿಆರ್‌ಎಸ್ ಸಂಪೂರ್ಣ ಬೆಂಬಲವನ್ನು ನೀಡಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಕಾನೂನು ವಿರುದ್ಧ ನಿರ್ಣಯವನ್ನು ತಂದಿತು ಆದರೆ, ಟಿಆರ್‌ಎಸ್ ಅದನ್ನು ಬೆಂಬಲಿಸಲಿಲ್ಲ ಎಂದು ಹೇಳಿದರು.
ʼನಮಗೆ ಬಿಜೆಪಿ ಮತ್ತು ಟಿಆರ್‌ಎಸ್ ಒಂದೇ ಎಂದು ನಾನು ಇಲ್ಲಿ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಅವು ಒಂದೇ ನಾಣ್ಯದ ಎರಡು ಭಾಗಗಳು. ಅವರು ಒಟ್ಟಿಗೆ ಕೆಲಸ ಮಾಡುತ್ತಾರೆ. ನೀವು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರು ಪರಸ್ಪರ ಬೆಂಬಲಿಸುತ್ತಾರೆ. ಟಿಆರ್‌ಎಸ್ ಬಿಜೆಪಿಯವರನ್ನು ದೆಹಲಿಯಲ್ಲಿ ಬೆಂಬಲಿಸುತ್ತದೆ. ಮತ್ತು ತೆಲಂಗಾಣದಲ್ಲಿ ಬಿಜೆಪಿ ಟಿಆರ್‌ಎಸ್ ಬೆಂಬಲಿಸುತ್ತದೆ ಎಂದು ಹೇಳಿದರು.
ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಣದ ರಾಜಕೀಯದಲ್ಲಿ ತೊಡಗಿವೆ, ಅಧಿಕಾರ ಹಿಡಿಯಲು ಮತ್ತು ಸರ್ಕಾರಗಳನ್ನು ಉರುಳಿಸಲು ಕುದುರೆ ವ್ಯಾಪಾರ ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಟಿಆರ್‌ಎಸ್ ಸರ್ಕಾರ ಬಹುಶಃ ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ₹ 15,000 ಕೋಟಿ ಆಪಾದಿತ ‘ಮಿಯಾಪುರ್ ಭೂ ಹಗರಣʼ ಮತ್ತು ತೆಲಂಗಾಣದ ಕಾಳೇಶ್ವರಂ ನೀರಾವರಿ ಯೋಜನೆಯನ್ನು ಉಲ್ಲೇಖಿಸಿದರು.
ಟಿಆರ್‌ಎಸ್ ಮತ್ತು ಬಿಜೆಪಿ ರಾಜಕೀಯ ಪಕ್ಷಗಳಲ್ಲ, ಆದರೆ ಜನರಿಗಾಗಿ ಕೆಲಸ ಮಾಡದೆ ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಉದ್ದೇಶ ಹೊಂದಿರುವ ವ್ಯಾಪಾರ ಸಂಸ್ಥೆಗಳು ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೋಟು ಅಮಾನ್ಯೀಕರಣವು ದೇಶದ ಆರ್ಥಿಕತೆಯ ಬೆನ್ನೆಲುಬನ್ನು ಮುರಿದಿದೆ. ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಉದ್ಯೋಗ ಸೃಷ್ಟಿಯಾಗಿದೆ. ಆದರೆ 2016 ರ ನೋಟು ನಿಷೇಧ ಮತ್ತು ಜಿಎಸ್‌ಟಿ ಆಡಳಿತವು ಲಕ್ಷಾಂತರ ವ್ಯವಹಾರಗಳನ್ನು ಮುಚ್ಚಿದೆ ಎಂದು ಹೇಳಿದರು.
ದೇಶ ಅಥವಾ ತೆಲಂಗಾಣದಲ್ಲಿ ಉದ್ಯೊಗ ನೀಡಲು ಬಯಸಿದರೂ ಅದು ಸಾಧ್ಯವಾಗದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದರು.
ಅಡುಗೆ ಅನಿಲದ ಬೆಲೆ ಏರಿಕೆ ಬಗ್ಗೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಯುಪಿಎ ಆಡಳಿತದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 400 ಇದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ದೂರು ನೀಡುತ್ತಿದ್ದರು, ಆದರೆ ಅವರು ಈಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ದೇಶದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳನ್ನು ಎತ್ತುವ ಉದ್ದೇಶದಿಂದ ಯಾತ್ರೆಯನ್ನು ಪ್ರಾರಂಭಿಸಲಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಯಾತ್ರೆಯ ಭಾಗವಾಗಿ 3,500 ಕಿ.ಮೀ ನಡೆಯುವುದು ಸುಲಭವಲ್ಲದಿದ್ದರೂ, ಜನರು ತೋರುವ ಪ್ರೀತಿ ಮತ್ತು ವಾತ್ಸಲ್ಯವು ಅದನ್ನು ಸಾಧ್ಯವಾಗಿಸಿತು ಎಂದು ಹೇಳಿದರು.