Wednesday, December 4, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಮತ್ತು RSS ಸೇರಿಕೊಂಡು ಸಂವಿಧಾನವನ್ನು ತುಂಡು ತುಂಡು ಮಾಡುತ್ತಿವೆ: ಮಲ್ಲಿಕಾರ್ಜುನ ಖರ್ಗೆ

ಲಕ್ನೋ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸೇರಿಕೊಂಡು ನಮ್ಮ ದೇಶದ ಸಂವಿಧಾನವನ್ನು ತುಂಡು ತುಂಡು ಮಾಡುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಸಂತ್ರಸ್ತರನ್ನು ಭೇಟಿಯಾಗಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಅವಕಾಶ ನೀಡದೇ ಇರುವುದಕ್ಕೆ ಎಕ್ಸ್‌ ಖಾತೆಯಲ್ಲಿ ಅವರು ಪೋಸ್ಟ್‌ ಪ್ರಕಟಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಸಂಭಾಲ್‌ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವನ್ನು ಘಾಜಿಪುರ ಗಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ತಡೆದಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಂಗಿದ್ದು ನಂತರ ದೆಹಲಿಗೆ ಮರಳಿದ್ದಾರೆ.

“ಬಿಜೆಪಿ-ಆರ್‌ಎಸ್‌ಎಸ್ ತನ್ನ ವಿಭಜಕ ಕಾರ್ಯಸೂಚಿಯೊಂದಿಗೆ ಸಂವಿಧಾನವನ್ನು ಹರಿದು ಹಾಕುವಲ್ಲಿ ನಿರತವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಭಾಲ್‌ನಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡದಂತೆ ತಡೆಯುವುದು ಇದನ್ನೇ ಸಾಬೀತುಪಡಿಸುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವುದು ಬಿಜೆಪಿ-ಆರ್‌ಎಸ್‌ಎಸ್‌ನ ಏಕೈಕ ಸಿದ್ಧಾಂತವಾಗಿದೆ. ಇದಕ್ಕಾಗಿ ಅವರು ಸಂವಿಧಾನವು ಅಂಗೀಕರಿಸಿದ ಪೂಜಾ ಸ್ಥಳಗಳ ಕಾಯಿದೆಯನ್ನು ಹರಿದು ಹಾಕಿದ್ದಲ್ಲದೆ, ಈಗ ಎಲ್ಲೆಡೆ ದ್ವೇಷಕ್ಕಾಗಿ ತಮ್ಮ ಮಾರುಕಟ್ಟೆಯ ಶಾಖೆಗಳನ್ನು ತೆರೆಯುತ್ತಿದ್ದಾರೆ”ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page