Wednesday, December 24, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳ ಮೂಲಕ ವಿರೋಧಿಗಳ ಮೇಲೆ ದಾಳಿ ಮಾಡುತ್ತಿದೆ: ಬರ್ಲಿನ್‌ನಲ್ಲಿ ರಾಹುಲ್

ಬಿಜೆಪಿಯು ದೇಶದ ವಿವಿಧ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಜರ್ಮನಿಯ ಬೆರ್ಲಿನ್‌ನಲ್ಲಿರುವ ಹಾರ್ಟಿ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳದಂತಹ (CBI) ಸಂಸ್ಥೆಗಳನ್ನು ಬಿಜೆಪಿಯು ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಮತ್ತು ಅದರ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ವಿರುದ್ಧ ಇಂತಹ ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಆದರೆ ವಿರೋಧ ಪಕ್ಷಗಳ ಮೇಲೆ ಮಾತ್ರ ನಿರಂತರವಾಗಿ ಕೇಸುಗಳನ್ನು ದಾಖಲಿಸಲಾಗುತ್ತಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದ್ದು, ಇದು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಯಾಗಿದೆ ಎಂದು ಅವರು ಬಣ್ಣಿಸಿದರು. ಕಾಂಗ್ರೆಸ್‌ಗೆ ಬೆಂಬಲ ನೀಡುವ ಉದ್ಯಮಿಗಳನ್ನೂ ಸಹ ಈ ಸಂಸ್ಥೆಗಳ ಮೂಲಕ ಬೆದರಿಸಲಾಗುತ್ತಿದೆ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಗಂಭೀರವಾದ ದಾಳಿ ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಭಾಷಣದಲ್ಲಿ ಅವರು ಚುನಾವಣಾ ಅಕ್ರಮಗಳ ಕುರಿತೂ ಪ್ರಸ್ತಾಪಿಸಿದ್ದು, ಕಳೆದ ವರ್ಷ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ರಿಗ್ಗಿಂಗ್ ಮಾಡಲಾಗಿದೆ ಎಂದು ಆರೋಪಿಸಿದರು.

ಇದೇ ರೀತಿ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಗಳೂ ಸಹ ನಿಷ್ಪಕ್ಷಪಾತವಾಗಿ ನಡೆದಿಲ್ಲ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು. ಚುನಾವಣಾ ಆಯೋಗ ಮತ್ತು ತನಿಖಾ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ತಮ್ಮ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page