ಶಿಡ್ಲಘಟ್ಟ: ‘ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ, ಶಿಡ್ಲಘಟ್ಟಕ್ಕೆ ರವಿಕುಮಾರ್’ ಎಂಬ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯ ಹೇಳಿಕೆಗೆ ಮಿತ್ರಪಕ್ಷ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿದೆ.
ಈ ಹೇಳಿಕೆ ಜೆಡಿಎಸ್‌ನ ಅಭಿಪ್ರಾಯವಾಗಿದ್ದರೂ, ಬಿಜೆಪಿ-ಜೆಡಿಎಸ್ ಮೈತ್ರಿಯ ನಾಯಕರ ಒಮ್ಮತದ ತೀರ್ಮಾನವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸೋಮವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. “ವಿಧಾನಸಭೆ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ನಾಯಕರು ಒಟ್ಟಿಗೆ ನಿರ್ಧರಿಸುತ್ತಾರೆ,” ಎಂದು ಅವರು ಸ್ಪಷ್ಟಪಡಿಸಿದರು.
“ಪಕ್ಷ ಸಂಘಟನೆಗಾಗಿ ಜೆಡಿಎಸ್ ಕುಮಾರಸ್ವಾಮಿಯನ್ನೋ ಅಥವಾ ಬೇರೆ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡರೆ ನಮಗೆ ಯಾವುದೇ ತಕರಾರಿಲ್ಲ,” ಎಂದು ರಾಮಚಂದ್ರಗೌಡ ಹೇಳಿದರು.
“ಮಾಜಿ ಶಾಸಕ ಎಂ. ರಾಜಣ್ಣ ಅವರೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ನಡುವೆ ಯಾವುದೇ ಮುನಿಸೂ ಇಲ್ಲ. ಕೆಲವೊಮ್ಮೆ ಪಕ್ಷದ ಪದಾಧಿಕಾರಿಗಳ ನೇಮಕ ಅಥವಾ ಇತರ ವಿಷಯಗಳ ಬಗ್ಗೆ ನಮ್ಮ ಬೆಂಬಲಿಗರು ಮತ್ತು ಅವರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ, ರಾಜಣ್ಣ ಮತ್ತು ನಾನು ಒಟ್ಟಿಗೆ ಸೇರಿ ಪಕ್ಷ ಸಂಘಟನೆಗೆ ಶ್ರಮಿಸುತ್ತೇವೆ,” ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಸುರೇಂದ್ರಗೌಡ, ಕನಕಪ್ರಸಾದ್, ಮತ್ತು ನಗರಸಭೆ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು.