Home ದೇಶ RSS, BJP ವಿರುದ್ಧ ಟೀಕೆ: ತುಷಾರ್ ಗಾಂಧಿ ಬಂಧನಕ್ಕೆ ಬಿಜೆಪಿ ಒತ್ತಾಯ

RSS, BJP ವಿರುದ್ಧ ಟೀಕೆ: ತುಷಾರ್ ಗಾಂಧಿ ಬಂಧನಕ್ಕೆ ಬಿಜೆಪಿ ಒತ್ತಾಯ

0

ತಿರುವನಂತಪುರಂ: ತಮ್ಮ ವಿರುದ್ಧ ಅನುಚಿತ ಹೇಳಿಕೆಗಳನ್ನು ನೀಡಿದ ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿಯನ್ನು ಬಂಧಿಸಬೇಕೆಂದು ಬಿಜೆಪಿ ನಾಯಕರು ಶುಕ್ರವಾರ ಒತ್ತಾಯಿಸಿದ್ದಾರೆ.

ಕೇರಳದ ನೆಯ್ಯಟ್ಟಿಂಕರದಲ್ಲಿ ಗುರುವಾರ ಗಾಂಧಿವಾದಿ ಪಿ. ಗೋಪಿನಾಥನ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ತುಷಾರ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಪಾಯಕಾರಿ ಶಕ್ತಿಗಳು ಎಂದು ಹೇಳಿದರು. ಅವು ಈಗ ಕೇರಳಕ್ಕೂ ಪ್ರವೇಶಿಸಿವೆ ಹೇಳಿದ ಅವರು ಆರ್‌ಎಸ್‌ಎಸ್ ಸಂಘಟನೆಯನ್ನು ವಿಷಕ್ಕೆ ಹೋಲಿಸಿದರು.

ಈ ಹೇಳಿಕೆಗಳನ್ನು ವಿರೋಧಿಸಿ, ಅಲ್ಲಿದ್ದ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ತಕ್ಷಣವೇ ಪ್ರತಿಭಟಿಸಿದರು. ತುಷಾರ್ ಗಾಂಧಿಯವರ ಕಾರನ್ನು ಅಡ್ಡಗಟ್ಟಿದರು. ಆದರೆ, ತುಷಾರ್ ಗಾಂಧಿ ಶುಕ್ರವಾರ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಅಥವಾ ಕ್ಷಮೆಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಚ್ಚಿಯ ಅಲುವಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. “ಗಾಂಧೀಜಿಯ ಹಂತಕನನ್ನು ಬೆಂಬಲಿಸುವ ಜನರು ಮಹಾತ್ಮರ ಪ್ರತಿಮೆಗೆ ಹೋಗಿ ಗುಂಡು ಹಾರಿಸಬಲ್ಲರು” ಎಂದು ಅವರು ಹೇಳಿದರು.

ಶುಕ್ರವಾರ ನೆಯ್ಯಟ್ಟಿಂಕರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ವಿ. ಮುರಳೀಧರನ್ ಭಾಗವಹಿಸಿದ್ದರು. ತುಷಾರ್ ಗಾಂಧಿ ಅವರು ಗಾಂಧೀಜಿಯವರ ಕುಟುಂಬದ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ ಮೂಲಕ ಆ ಹೆಸರಿನ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುರಳೀಧರನ್ ಟೀಕಿಸಿದರು.

ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಅನುಚಿತ ಹೇಳಿಕೆ ನೀಡಿದ್ದಕ್ಕಾಗಿ ತುಷಾರ್ ಗಾಂಧಿಯನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದರು.

You cannot copy content of this page

Exit mobile version