Thursday, June 20, 2024

ಸತ್ಯ | ನ್ಯಾಯ |ಧರ್ಮ

ಮಣಿಪುರದಲ್ಲಿ ಚರ್ಚಿಗೆ ಬೆಂಕಿ ಹಚ್ಚಿದ ಘಟನೆಗಳನ್ನು ಪ್ರತಿಭಟಿಸಿ ಮಿಜೋರಾಂ ಬಿಜೆಪಿ ಉಪಾಧ್ಯಕ್ಷ ರಾಜೀನಾಮೆ

 ಮಿಜೋರಾಂ ಬಿಜೆಪಿ ನಾಯಕ ಆರ್ ವನ್ರಾಮ್‌ ಚುವಾಂಗಾ ಅವರು ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಜುಲೈ 13ರ ತಮ್ಮ ರಾಜೀನಾಮೆ ಪತ್ರದಲ್ಲಿ, ಮಣಿಪುರದಲ್ಲಿ ಇತ್ತೀಚೆಗೆ ಕ್ರಿಶ್ಚಿಯನ್ ಚರ್ಚುಗಳ ನಾಶವನ್ನು “ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳ ಬೆಂಬಲದೊಂದಿಗೆ” ನಡೆಸಲಾಗಿದೆ ಎಂಬ ನಂಬಿಕೆಯನ್ನು ಅವರು ಬಲವಾಗಿ ವ್ಯಕ್ತಪಡಿಸಿದ್ದಾರೆ.

ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಧರ್ಮದ ವಿರುದ್ಧ ಎಸಗಲಾಗುತ್ತಿರುವ “ಕ್ರಿಮಿನಲ್ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಸಲುವಾಗಿ” ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ವನ್ರಾಮ್‌ ಚುವಾಂಗಾ ಹೇಳಿದ್ದಾರೆ. ಮಣಿಪುರದಲ್ಲಿ ಇತ್ತೀಚೆಗೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಪರಿಣಾಮವಾಗಿ, ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ 357 ಕ್ರಿಶ್ಚಿಯನ್ ಚರ್ಚುಗಳು, ಪಾದ್ರಿ ವಸತಿಗೃಹಗಳು ಮತ್ತು ಕಚೇರಿ ಕಟ್ಟಡಗಳನ್ನು ಮೈಟಿ ಉಗ್ರಗಾಮಿಗಳು ಸುಟ್ಟು ಬೂದಿ ಮಾಡಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂಫಾಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚ್ ಕಟ್ಟಡಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಖಂಡಿಸಿಲ್ಲ ಅಥವಾ ದೂಷಿಸಿಲ್ಲ ಎಂದು ಮಿಜೋರಾಂ ರಾಜ್ಯ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ವನ್ರಾಮ್‌ ಚುವಾಂಗಾ ಹೇಳಿದ್ದಾರೆ.

“ಕೇಂದ್ರ ಸರ್ಕಾರವೂ ಕ್ರಿಶ್ಚಿಯನ್‌ ಚರ್ಚುಗಳನ್ನು ಸುಡುವುದನ್ನು ವಿರೋಧಿಸಿ ಯಾವುದೇ ಹೇಳಿಕೆ ನೀಡಿಲ್ಲ” ಎಂದು ಅವರು ಬರೆದಿದ್ದಾರೆ.

ಈ ವರ್ಷದ ಕೊನೆಯಲ್ಲಿ ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಸಮಯದಲ್ಲಿ ಅವರು ರಾಜೀನಾಮೆ ನೀಡಿರುವುದು ಕುತೂಹಲಕಾರಿಯಾಗಿದೆ.

ಈಶಾನ್ಯ ರಾಜ್ಯದಲ್ಲಿ ಮೈಟಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಆರಂಭಗೊಂಡ ದಿನದಿಂದ ಇದುವರೆಗೆ ಇದುವರೆಗೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.

ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ಆಗ್ರಹಿಸಿ ಮೈಟಿ ಸಮುದಾಯದ ಬೇಡಿಕೆಯಿಟ್ಟಿರುವುದನ್ನು ವಿರೋಧಿಸಿ ಮೇ 3ರಂದು ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಡೆಸಿದ ನಂತರ ಉಭಯ ಸಮುದಾಯಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.

ಈ ಸಂಘರ್ಷದಿಂದಾಗಿ, ಸಾವಿರಾರು ಜನರು ಸ್ಥಳಾಂತರಗೊಂಡಿದ್ದು, ಅವರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ದೊಡ್ಡ ಸಂಖ್ಯೆಯ ಅರೆಸೈನಿಕ ಪಡೆಗಳ ಉಪಸ್ಥಿತಿಯ ಹೊರತಾಗಿಯೂ, ಹಿಂಸಾಚಾರವು ಅಲ್ಲಲ್ಲಿ ನಡೆಯುತ್ತಲೇ ಇದೆ.

Related Articles

ಇತ್ತೀಚಿನ ಸುದ್ದಿಗಳು