Home ದೇಶ ಹರಿಯಾಣದಲ್ಲೂ ಬಿಜೆಪಿ, ಚುನಾವಣಾ ಆಯೋಗ ಜಂಟಿಯಾಗಿ ಮತಗಳ್ಳತನ: ರಾಹುಲ್ ಗಾಂಧಿ ಗಂಭೀರ ಆರೋಪ

ಹರಿಯಾಣದಲ್ಲೂ ಬಿಜೆಪಿ, ಚುನಾವಣಾ ಆಯೋಗ ಜಂಟಿಯಾಗಿ ಮತಗಳ್ಳತನ: ರಾಹುಲ್ ಗಾಂಧಿ ಗಂಭೀರ ಆರೋಪ

0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಿಜೆಪಿ ಪಕ್ಷ ಮತ್ತು ಚುನಾವಣಾ ಆಯೋಗದ ಮತಗಳ್ಳತನದ ಬಗ್ಗೆ ಸಾಕ್ಷಿ ಸಮೇತ ಮಾತನಾಡಿದರು. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದು ಬಿಜೆಪಿ ಪಕ್ಷ ಜನಾದೇಶವನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹರಿಯಾಣದಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅಮಾನ್ಯ ಮತದಾರರು ಮತ್ತು 19.26 ಲಕ್ಷ ಬೃಹತ್ ಮತದಾರರು ಸೇರಿದಂತೆ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ ಎಂದು ಹೇಳಿದ್ದಾರೆ. ಹರಿಯಾಣದ ಚುನಾವಣಾ ಪಟ್ಟಿಯಲ್ಲಿರುವ ಎಂಟು ಮತದಾರರಲ್ಲಿ ಒಬ್ಬರು ನಕಲಿ ಎಂಬ ಗಂಭೀರ ಆರೋಪ ಮಾಡಿದ್ದಾರೆ.

“ಹರಿಯಾಣದಲ್ಲಿ ನಮ್ಮ ಅಭ್ಯರ್ಥಿಗಳಿಂದ ಏನೋ ತಪ್ಪಾಗಿದೆ ಮತ್ತು ಪಕ್ಷಕ್ಕಾಗಿ ಏನೂ ಕೆಲಸ ಮಾಡುತ್ತಿಲ್ಲ ಎಂದು ನಮಗೆ ಬಹಳಷ್ಟು ದೂರುಗಳು ಬಂದಿದ್ದವು. ಮಧ್ಯಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರದ ಚುನಾವಣೆಗಳಲ್ಲಿ ನಮಗೆ ಆದ ವ್ಯತಿರಿಕ್ತ ಅನುಭವಗಳ ಅಡಿಯಲ್ಲಿ ನಾವು ಹರಿಯಾಣ ರಾಜ್ಯದ ಮೇಲೆ ಗುರಿ ಇಟ್ಟು, ಅಲ್ಲಿ ಏನಾಯಿತು ಎಂಬುದರ ಕುರಿತು ವಿವರಗಳನ್ನು ಕಲೆ ಹಾಕಲು ನಿರ್ಧರಿಸಿದೆವು. ಆಗ ಸಿಕ್ಕಿದ್ದೇ ಹರಿಯಾಗಣ ಮತಗಳ್ಳತನದ ಮಾಹಿತಿ” ಎಂದು ರಾಹುಲ್ ಗಾಂಧಿ ಹೇಳಿದರು.

ಕಾಂಗ್ರೆಸ್‌ನ ಭರ್ಜರಿ ಗೆಲುವನ್ನು ಸೋಲಾಗಿ ಪರಿವರ್ತಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಿತೂರಿ ನಡೆಸುತ್ತಿವೆ ಎಂದು ರಾಹುಲ್ ಆರೋಪಿಸಿದರು.

“ಭಾರತದ ಯುವಜನರು, ಜೆನ್ ಝಡ್ ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಏಕೆಂದರೆ ಇದು ನಿಮ್ಮ ಭವಿಷ್ಯದ ಬಗ್ಗೆ. ನಾನು ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದೇನೆ, ಭಾರತದಲ್ಲಿನ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಾನು ಪ್ರಶ್ನಿಸುತ್ತಿದ್ದೇನೆ, ಆದ್ದರಿಂದ ನಾನು ಅದನ್ನು 100% ಪುರಾವೆಗಳೊಂದಿಗೆ ಮಾಡುತ್ತಿದ್ದೇನೆ” ಎಂದು ರಾಹುಲ್ ಗಾಂಧಿ ಹೇಳಿದರು.

“ಕಾಂಗ್ರೆಸ್‌ನ ಭರ್ಜರಿ ಗೆಲುವನ್ನು ಸೋಲಾಗಿ ಪರಿವರ್ತಿಸಲು ಬಿಜೆಪಿ ಪಕ್ಷ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ಒಂದು ಯೋಜನೆಯನ್ನು ರೂಪಿಸಲಾಗಿದೆ ಎಂಬುದು ನಮಗೆ ಖಚಿತವಾಗಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇಡೀ ಪತ್ರಿಕಾಗೋಷ್ಠಿಯಲ್ಲಿ ಹೈಲೈಟ್ ಆದ ಅಂಶವೆಂದರೆ ಬ್ರೆಜಿಲಿಯನ್ ಮಾಡೆಲ್ ಒಬ್ಬರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 10 ವಿಭಿನ್ನ ಬೂತ್‌ಗಳಲ್ಲಿ ವಿಭಿನ್ನ ಹೆಸರುಗಳಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ ಎಂಬ ಅಂಶ ಹೆಚ್ಚು ಗಮನ ಸೆಳೆಯಿತು. ಆ ಮಹಿಳೆ ಯಾರು? ಅವಳ ಹೆಸರೇನು? ಅವಳು ಎಲ್ಲಿಂದ ಬಂದಿದ್ದಾಳೆ?” ಎಂದು ರಾಹುಲ್ ಗಾಂಧಿ ಗಂಭೀರ ಪ್ರಶ್ನೆ ಎತ್ತಿದ್ದಾರೆ.

ಆಕೆಯ ಫೋಟೋ ಬಿತ್ತರಿಸಿದ ರಾಹುಲ್ ಗಾಂಧಿ ಅವರು ಹರಿಯಾಣದಲ್ಲಿ 10 ವಿಭಿನ್ನ ಬೂತ್‌ಗಳಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ ಮತ್ತು ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ… ಎಂದು ಬಹು ಹೆಸರುಗಳನ್ನು ಹೊಂದಿದ್ದಾರೆ… ಆದರೆ ಅವರು ವಾಸ್ತವವಾಗಿ ಬ್ರೆಜಿಲಿಯನ್ ಮಾಡೆಲ್ ಎಂದು ತಿಳಿದುಬಂದಿದೆ” ಎಂದು ಅವರು ಹೇಳಿದರು.

You cannot copy content of this page

Exit mobile version