Sunday, December 1, 2024

ಸತ್ಯ | ನ್ಯಾಯ |ಧರ್ಮ

ಹೈಕಮಾಂಡ್ ಅಂಗಳ ತಲುಪಿದ ಬಿಜೆಪಿ ‘ಬಣ ಜಗಳ’ ; ಯತ್ನಾಳ್ ಉಚ್ಛಾಟನೆ ಬಗ್ಗೆ ಚರ್ಚೆ!

ಬಿಜೆಪಿಯಲ್ಲಿನ ಎರಡು ಬಣ ರಾಜಕೀಯದ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿರುವ ಬೆನ್ನಹಿಂದೆಯೇ ಈ ಬಣ ಜಗಳದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಸಂಸದರ ತಂಡವೊಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದೆ.

ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಈರಣ್ಣ ಕಡಾಡಿ, ಬಿ.ವೈ.ರಾಘವೇಂದ್ರ, ಜಗದೀಶ್ ಶೆಟ್ಟರ್‌ ಸೇರಿ ವಿವಿಧ ಸಂಸದರು ದೆಹಲಿಯಲ್ಲಿ ಶನಿವಾರ ಅಮಿತ್ ಶಾರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರವನ್ನು ಟಾರ್ಗೆಟ್ ಮಾಡಲು ಹಲವು ವಿಚಾರಗಳಿದ್ದರೂ ಬಿಜೆಪಿ ಒಳಗಿನ ಬಣ ರಾಜಕೀಯದಿಂದ ಅದು ಹಿನ್ನೆಲೆಗೆ ಬರುವಂತಾಗಿದೆ. ಪ್ರಮುಖವಾಗಿ ಯತ್ನಾಳ್ ಬಣ ಹಾದಿ ಬೀದಿಯಲ್ಲೂ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಟಾರ್ಗೆಟ್ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವಾಗಿ ಪರಿಣಮಿಸಿದೆ ಎಂದು ಅಮಿತ್ ಶಾ ಭೇಟಿಯಲ್ಲಿ ಚರ್ಚೆ ನಡೆದಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಪ್ರಮುಖವಾಗಿರುವ ಬಿಜೆಪಿ ಇನ್ನೊಂದು ಬಣಕ್ಕೆ ಕರೆದು ಹೈಕಮಾಂಡ್ ನಾಯಕರು ಸರಿಯಾದ ಎಚ್ಚರಿಕೆ ನೀಡಬೇಕು. ಇಲ್ಲವಾದರೆ ಅವರ ಆಟಾಟೋಪ ನಿಲ್ಲುವುದಿಲ್ಲ. ಇದು ಪಕ್ಷಕ್ಕೆ ಮುಜುಗರ ಉಂಟುಮಾಡಲು ಪ್ರಮುಖ ವಿಚಾರವಾಗಿದೆ. ಅವರ ಯಾವುದೇ ಬೇಡಿಕೆಗೂ ಹೈಕಮಾಂಡ್ ಮಣಿಯಬಾರದು. ಇದು ಪಕ್ಷದ ಮುಂದಿನ ಭವಿಷ್ಯಕ್ಕೆ ಮಾರಕ. ಹಾಗೊಂದು ವೇಳೆ ತೀರಾ ಒತ್ತಡ ತಂದರೆ ಆ ಬಣದ ನೇತೃತ್ವ ವಹಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಜಿಎಂ ಸಿದ್ದೇಶ್ವರ್, ರಮೇಶ್ ಜಾರಕಿಹೊಳಿಯಂತಹ ಪ್ರಮುಖ ನಾಯಕರಿಗೆ ಉಚ್ಛಾಟನೆಯ ಬಿಸಿ ಮುಟ್ಟಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಧ್ಯ ಈ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿ ಎಂದು ಪ್ರಹ್ಲಾದ ಜೋಷಿ ತಂಡ ಮನವಿ ಮಾಡಿದ್ದಾರೆ. ಇನ್ನೇನು ಒಂದೆರಡು ತಿಂಗಳಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಹೀಗಾಗಿ, ಬಣ ಜಗಳ ಇತ್ಯರ್ಥ ಮಾಡುವ ಬಗ್ಗೆ ತಕ್ಷಣ ಗಮನ ಹರಿಸಿ ಎಂದು ನಿಯೋಗ ಕೋರಿದೆ.

ಮೊದಲ ಹಂತದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿಗೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ಅವರನ್ನು ಉಚ್ಚಾಟನೆ ಮಾಡುವುದು ಬೇಡ. ಆದರೆ ಇಲ್ಲದ ಬೇಡಿಕೆ ಇಟ್ಟು ಪಕ್ಷಕ್ಕೆ ಮುಜುಗರ ತರುವುದೇ ಆದರೆ ಉಚ್ಛಾಟನೆ ಅನಿವಾರ್ಯ. ಬಿಜೆಪಿಯ ಹಿಂದೆ ಬಲವಾಗಿ ನಿಂತಿರುವುದು ಲಿಂಗಾಯತ ಸಮುದಾಯ. ಜಾತಿ ಹಿನ್ನೆಲೆಯಲ್ಲೂ ಯಡಿಯೂರಪ್ಪ ಸಮುದಾಯದ ನಾಯಕರಾಗಿರುವಾಗ ಅವರ ವಿರುದ್ಧ ನಿಂತಿರುವ ಯತ್ನಾಳ್ ಅವರ ಉಚ್ಛಾಟನೆ ಪಕ್ಷಕ್ಕೆ ಯಾವುದೇ ನಷ್ಟ ಇರುವುದಿಲ್ಲ. ಹೀಗಾಗಿ ಹೈಕಮಾಂಡ್ ಅವರನ್ನು ಕರೆಸಿ ಬುದ್ಧಿ ಹೇಳಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page