ಸುರತ್ಕಲ್ ಅಕ್ರಮ ಟೋಲ್ ತೆರವಿನ ಆದೇಶ ಹೊರಬರುತ್ತಿದ್ದಂತೆ ಬಿಜೆಪಿ ಬೆಂಬಲಿಗರು ದಕ್ಷಿಣ ಕನ್ನಡ ಸಂಸದರು ಮತ್ತು ಶಾಸಕರಿಗೆ ಅಭಿನಂದನೆ ಸಲ್ಲಿಸುವ ನೂರಾರು ಫ್ಲೆಕ್ಸ್ ಗಳು ಸಿದ್ದಗೊಂಡಿದ್ದವು. ಆದರೆ ಅದೇ ಟೋಲನ್ನು ಹೆಜಮಾಡಿ ಟೋಲ್ ಗೆ ವಿಲೀನಗೊಳಿಸುವ ವಿಚಾರ ತಿಳಿಯುತ್ತಿದ್ದಂತೆ ಮಾಡಿಟ್ಟ ಫ್ಲೆಕ್ಸ್ ಗಳು ಸುರತ್ಕಲ್ ಸ್ಮಶಾನಕ್ಕೆ ಶಿಫ್ಟ್ ಆಗಿವೆ.
ಸುರತ್ಕಲ್ ಅಕ್ರಮ ಟೋಲ್ ತೆರವಿಗಾಗಿ ನಡೆಯುತ್ತಿರುವ ಹೋರಾಟ 32 ನೇ ದಿನಕ್ಕೆ ಕಾಲಿಟ್ಟಿದೆ. ನಿರಂತರ ಅಹೋರಾತ್ರಿ ಹೋರಾಟದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮಣಿದ ಕೇಂದ್ರ ಹೆದ್ದಾರಿ ಪ್ರಾಧಿಕಾರ, ಟೋಲ್ ತೆರವು ಮಾಡಲು ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಿದೆ.
ಆದರೆ ಆದೇಶದ ಜೊತೆಗೆ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ಜೊತೆಗೆ ವಿಲೀನದ ಸುದ್ದಿ ಹೊರಬರುತ್ತಿದ್ದಂತೆ ಸ್ಥಳೀಯವಾಗಿ ಮತ್ತೆ ಆಕ್ರೋಶ ವ್ಯಕ್ತವಾಗಿದ್ದು, ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರೆ ನಗೆಪಾಟಲು ಮತ್ತು ತಪ್ಪು ಸಂದೇಶ ರವಾನೆಯಾಗುವ ಹಿನ್ನೆಲೆಯಲ್ಲಿ ಎಲ್ಲಾ ಫ್ಲೆಕ್ಸ್ ಗಳನ್ನು ಸುರತ್ಕಲ್ ಸ್ಮಶಾನದಲ್ಲಿ ಅಡಗಿಸಿ ಇಡಲಾಗಿದೆ.
ಈ ನಡುವೆ ಬಿಜೆಪಿ ಸಂಸದರಿಗೆ ಮತ್ತು ಸ್ಥಳೀಯ ಬಿಜೆಪಿ ಶಾಸಕರಿಗೆ ಅಭಿನಂದನೆ ಕೋರುವ ನೂರಾರು ಫ್ಲೆಕ್ಸ್ ಗಳ ಬಗ್ಗೆ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರನ್ನು ಪೀಪಲ್ ಮೀಡಿಯಾ ಸಂಪರ್ಕಿಸಿದಾಗ, ‘ಟೋಲ್ ತೆರವು ಪ್ರಕ್ರಿಯೆ ನಮ್ಮ ಹೋರಾಟ ಸಮಿತಿಯ ಯಶಸ್ಸಿಗೆ ಸಾಕ್ಷಿ. ಆದರೆ ಸುರತ್ಕಲ್ ಟೋಲನ್ನು ಹೆಜಮಾಡಿ ಟೋಲ್ ಜೊತೆಗೆ ವಿಲೀನ ಮಾಡಿ, ಅಲ್ಲಿನ ಟೋಲ್ ದರವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ನಮ್ಮ ಹೋರಾಟ ಸಮಿತಿ ಖಂಡಿಸುತ್ತದೆ. ಈ ಸಂದರ್ಭದಲ್ಲಿ ಸುರತ್ಕಲ್ ನಲ್ಲಿ ಟೋಲ್ ತೆರವುಗೊಳಿಸಿದ ನಂತರ ಡಿಸೆಂಬರ್ 1 ರಂದು ಸುರತ್ಕಲ್ ನಲ್ಲಿ ನಮ್ಮ ಚಳುವಳಿ ಅಂತ್ಯಗೊಳ್ಳಲಿದೆ. ನಂತರ ಡಿಸೆಂಬರ್ 2 ಕ್ಕೆ ಸುಂಕ ಹೆಚ್ಚಳದ ವಿರುದ್ಧವಾಗಿ ಹೆಜಮಾಡಿಯಲ್ಲಿ ಹೋರಾಟ ಚಾಲನೆ ಪಡೆಯಲಿದೆ’ ಎಂದು ತಿಳಿಸಿದ್ದಾರೆ.
ಹಾಗೂ ‘ಟೋಲ್ ತೆರವು ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಬಿಜೆಪಿ ಸಂಸದರು ಮತ್ತು ಶಾಸಕರು ಇಲ್ಲಿನ ಜನರನ್ನು ದಡ್ಡರು ಎಂಬುದನ್ನು ಸಾಭೀತುಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ಗಳು. ಇಂತಹ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ಗಳು ಹೊರ ಬಿದ್ದರೆ ನೇರವಾಗಿ ಜನರಿಗೆ ದ್ರೋಹ ಬಗೆದಂತೆ. ಟೋಲ್ ದರ ಏರಿಕೆ ಬಗ್ಗೆ ಬಿಜೆಪಿಯಲ್ಲೇ ಅಸಮಾಧಾನ ಇದೆ ಎಂಬುದನ್ನು ಫ್ಲೆಕ್ಸ್ ಗಳು ಸ್ಮಶಾನದಲ್ಲಿ ಸಿಕ್ಕಿದ್ದಕ್ಕೆ ಸಾಕ್ಷಿಯಂತಿದೆ. ಇಂತಹ ಅಸಮರ್ಥ ಶಾಸಕರು ಸಂಸದರು ಕರಾವಳಿ ಭಾಗಕ್ಕೆ ಸಿಕ್ಕಿದ್ದು ಇಲ್ಲಿನ ಜನರ ದೌರ್ಭಾಗ್ಯ.’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈಗ ಹೆಜಮಾಡಿ ಟೋಲ್ ಸುಂಕ ಏರಿಕೆಯಿಂದ ಬಿಜೆಪಿ ಪಾಳಯದಲ್ಲೂ ಅಸಮಾಧಾನದ ಬೆಂಕಿ ಹತ್ತಿಕೊಂಡಿದೆ. ಇತ್ತ ಟೋಲ್ ತೆರವಿಗೆ ಅಭಿನಂದನೆಯನ್ನೂ ಸಲ್ಲಿಸಲಾಗದೆ, ಅತ್ತ ಹೆಚ್ಚಳಕ್ಕೆ ವಿರೋಧವನ್ನೂ ಮಾಡಲಾಗದ ಸ್ಥಿತಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಬಿಜೆಪಿ ಮಂದಿ ಬಂದು ನಿಂತದ್ದು ಸ್ಪಷ್ಟವಾಗಿದೆ.