Monday, July 28, 2025

ಸತ್ಯ | ನ್ಯಾಯ |ಧರ್ಮ

ಅತ್ಯಾಚಾರಿಗೆ ಆರು ಬಾರಿ ಪೆರೋಲ್ ನೀಡಿದ ಮಾಜಿ ಜೈಲು ಅಧಿಕಾರಿಗೆ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಸ್ಥಾನ

ಚಂಡೀಗಢ: ಅತ್ಯಾಚಾರ ಪ್ರಕರಣದ ಅಪರಾಧಿ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಈಗಾಗಲೇ ಹತ್ತು ಬಾರಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾನೆ.

ಹರಿಯಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಕ್ಷವು ಅತ್ಯಾಚಾರಿಯೊಬ್ಬನಿಗೆ ಆರು ಬಾರಿ ಪೆರೋಲ್‌ ನೀಡಿದ ಮಾಜಿ ಜೈಲು ಅಧಿಕಾರಿಗೂ ಸ್ಥಾನ ನೀಡಿದೆ.

ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಸ್ತುತ ಈ ಸ್ವಯಂಘೋಷಿತ ದೇವಮಾನವ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ ಗುರ್ಮೀತ್ ರಾಮ್ ರಹೀಮ್ ನಾಲ್ಕು ವರ್ಷಗಳಲ್ಲಿ ಹತ್ತು ಬಾರಿ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾನೆ. ಈತ ಲೋಕಸಭೆ ಚುನಾವಣೆಗೂ ಮುನ್ನ ಜನವರಿಯಲ್ಲಿ 50 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಇತ್ತೀಚಿನ ಹರಿಯಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವನಿಗೆ ಆಗಸ್ಟ್ ತಿಂಗಳಲ್ಲಿ 21 ದಿನಗಳ ಕಾಲ ಪೆರೋಲ್ ನೀಡಲಾಗಿದೆ.

ಏತನ್ಮಧ್ಯೆ, ಗುರ್ಮೀತ್ ರಾಮ್ ರಹೀಮ್‌ಗೆ ಆರು ಬಾರಿ ಪೆರೋಲ್ ನೀಡಿದ್ದ ಜೈಲು ಅಧಿಕಾರಿ ಸುನಿಲ್ ಸಾಂಗ್ವಾನ್ ಇತ್ತೀಚೆಗೆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅಚ್ಚರಿಯೆಂಬಂತೆ 67 ಅಭ್ಯರ್ಥಿಗಳೊಂದಿಗೆ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸುನಿಲ್ ಸಾಂಗ್ವಾನ್ ಹೆಸರಿದೆ.
ಅವರನ್ನು ಪಕ್ಷವು ದಾದ್ರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಮತ್ತೊಂದೆಡೆ, 2019ರಲ್ಲಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಬಿಜೆಪಿಯ ಮಾಜಿ ನಾಯಕ ಸೋಮವೀರ್ ಸಾಂಗ್ವಾನ್ ಅವರು ಮತ್ತೆ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಈ ಬಾರಿ ಅವರು ಕಾಂಗ್ರೆಸ್‌ ಟಿಕೆಟ್‌ ಮೂಲಕ ಸ್ಪರ್ಧಿಸುವ ನಿರೀಕ್ಷೆಯಿದೆ.

ಈ ನಡುವೆ ಅತ್ಯಾಚಾರ ಪ್ರಕರಣದ ವಿರುದ್ಧ ಕೋಲ್ಕತ್ತಾದಲ್ಲಿ ಭಯಂಕರ ಹೋರಾಟ ನಡೆಸುತ್ತಿರುವ ಬಿಜೆಪಿ ಇತ್ತ ಇಂತಹ ಅಧಿಕಾರಿಗೆ ಟಿಕೆಟ್‌ ನೀಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಜೊತಗೆ ಕಾಂಗ್ರೆಸ್‌ ಕೂಡಾ ಬಿಜೆಪಿಯ ಈ ನಡೆಯನ್ನು ಟೀಕಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page