Friday, June 14, 2024

ಸತ್ಯ | ನ್ಯಾಯ |ಧರ್ಮ

ವೈಫಲ್ಯ ಕುರಿತು ಬಿಜೆಪಿ ಸರ್ಕಾರ ಉತ್ತರ : ಮತ್ತೆ ಕಿಡಿಕಾರಿದ ಸಿದ್ದರಾಮಯ್ಯ!

ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಬೆಳೆ, ಆಸ್ತಿಪಾಸ್ತಿ ನಷ್ಟ, ಜೀವ ಹಾನಿ, ಇವನ್ನು ತಡೆಗಟ್ಟುವಲ್ಲಿ ಸರ್ಕಾರದ ವೈಫಲ್ಯ ಕುರಿತು ಪ್ರತಿಪಕ್ಷಗಳು ಕೇಳಿರುವ ಪ್ರಶ್ನೆಗಳಿಗೆ ಸರ್ಕಾರ ನೀಡಿರುವ ಉತ್ತರಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಜನರು ಅನುಭವಿಸಿದ ಕಷ್ಟ ನಷ್ಟಗಳ ಬಗ್ಗೆ ಕಳೆದ 4 ದಿನಗಳಿಂದ ಸದನದಲ್ಲಿ ಸುದೀರ್ಘ ಚರ್ಚೆ ನಡೆದಿರುವುದು ಉತ್ತಮ ವಿಚಾರ. ಈ ಬಗ್ಗೆ ನಾನು ಸೇರಿದಂತೆ ಪ್ರತಿಪಕ್ಷಗಳ ಎಲ್ಲಾ ಸದಸ್ಯರು ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದೆವು. ನಮ್ಮ ಪ್ರಶ್ನೆಗಳಿಗೆ ಸರ್ಕಾರ ನೀಡಿರುವ ಉತ್ತರ ತೃಪ್ತಿದಾಯಕ ಹಾಗೂ ಪರಿಪೂರ್ಣವಾಗಿಲ್ಲ ಎಂದು ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ ಅರಣ್ಯ ಇಲಾಖೆಯ ಅಧೀನದಲ್ಲಿರುವ Environmental management and policy research institute ಎಂಬ ಸಂಸ್ಥೆ ನೀಡಿರುವ ವರದಿಯಲ್ಲಿ 2030ರ ವೇಳೆಗೆ ಹವಾಮಾನ ಬದಲಾವಣೆಯಿಂದ ಕೆಲವು ಬೆಳೆಗಳು ಕಡಿಮೆ ಆಗುತ್ತವೆ, ಕೆಲವು ಬೆಳೆಗಳ ಪ್ರಮಾಣ ಹೆಚ್ಚಾಗುತ್ತದೆ ಎಂದಿದೆ, ಈ ವರದಿ ಆಧಾರಿಸಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ನಾನು ಪ್ರಶ್ನಿಸಿದ್ದೆ, ಸಚಿವರಾಗಲೀ, ಮುಖ್ಯಮಂತ್ರಿಗಳಾಗಲೀ ಈ ಬಗ್ಗೆ ಉತ್ತರ ನೀಡಿಲ್ಲ. ಕಳೆದ ವರ್ಷದ ಅಧಿವೇಶನದಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಮಾಡಿದ್ದೆ. ಆದರೂ ಸರ್ಕಾರ ಈ ಬಗ್ಗೆ ಯಾವ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಜ್ಞಾನಿಗಳು ಅಂದಾಜಿಸಿದಂತೆಯೇ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವರ್ಷ ವಾಡಿಕೆಗಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ. ಎರಡನೇ ವಿಚಾರವೆಂದರೆ, ಎನ್‌,ಡಿ,ಆರ್‌,ಎಫ್‌ ನಾರ್ಮ್ಸ್ 2020 ಕ್ಕೆ ಬದಲಾವಣೆಯಾಗಬೇಕಿತ್ತು, ಅವಧಿ ಮುಗಿದು 2 ವರ್ಷಗಳು ಕಳೆದರೂ ಹೊಸ ನಿಯಮಗಳನ್ನು ರೂಪಿಸಿ ಜಾರಿ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಹೀಗಾಗಿ ನಾವೆಲ್ಲ ಸದನದಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡೋಣ ಎಂದು ಮೊನ್ನೆ ಮಾತನಾಡುವಾಗ ಹೇಳಿದ್ದೆ. ಈ ಮಾತನ್ನು ಕುಮಾರಸ್ವಾಮಿ ಅವರು ಕೂಡ ಹೇಳಿದ್ದರು, ಆದರೆ ಸರ್ಕಾರ ಉತ್ತರ ನೀಡುವಾಗ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಾಲಿನ ಮುಂಗಾರಿನಲ್ಲಿ 82.67 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು, ಆದರೆ ಬಿತ್ತನೆಯಾದದ್ದು 74.37 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಂದರೆ ಸುಮಾರು 8 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ, ಬಿತ್ತನೆಗಾಗಿ ಬೀಜ, ಗೊಬ್ಬರ, ಕೀಟನಾಶಕ ಇವೆಲ್ಲವನ್ನು ರೈತರು ಕೂಡಿಟ್ಟುಕೊಂಡಿದ್ದರು, ಬಿತ್ತನೆ ಮಾಡಲು ಸಾಧ್ಯವಾಗದ್ದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಇವರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಜೊತೆಗೆ ಸುಮಾರು 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಂದರೆ ಒಟ್ಟು 18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಈ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ನಾನು ಒತ್ತಾಯ ಮಾಡಿದ್ದೆ, ಆದರೆ ಸರ್ಕಾರದ ಉತ್ತರದಲ್ಲಿ ಈ ಬಗ್ಗೆ ಯಾವ ಪ್ರತಿಕ್ರಿಯೆ ಬಂದಿಲ್ಲ. ನಾನು ಈ ಎಲ್ಲಾ ರೈತರಿಗೂ ಬೆಳೆನಷ್ಟ ಪರಿಹಾರವನ್ನು ನೀಡಬೇಕು ಎಂದು ಮತ್ತೊಮ್ಮೆ ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

2019ರಲ್ಲಿ ಅತಿವೃಷ್ಟಿಯಿಂದಾಗಿ ಮನೆಗಳು ಬಿದ್ದು ಹೋಗಿದ್ದವು, ಅವುಗಳಿಗೆ ಈ ವರೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿಲ್ಲ. ನಾನು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ವೇಳೆ ಜನರು ಪರಿಹಾರ ಕೊಡಿಸುವಂತೆ ನನ್ನಲ್ಲಿ ಮನವಿ ಮಾಡಿದ್ದರು. ಇದನ್ನು ಸರ್ಕಾರದ ಗಮನಕ್ಕೂ ತಂದಿದ್ದೇನೆ. ಸರ್ಕಾರ ನೀಡಿರುವ ಉತ್ತರದಲ್ಲಿ ಪೂರ್ಣ ಮನೆ ಬಿದ್ದುಹೋಗಿದ್ದರೆ ಮೊದಲ ಕಂತಿನಲ್ಲಿ 91,000 ಹಣ ನೀಡಿರುವುದಾಗಿ, 15-20% ಮನೆ ಬಿದ್ದುಹೋಗಿದ್ದರೆ 50,000 ನೀಡಿರುವುದಾಗಿ ಹೇಳಿದೆ. ಇದನ್ನು ಹೊರತು ಪಡಿಸಿ ಬಿ ಕೆಟಗರಿಯಲ್ಲಿ 75% ವರೆಗೆ ಮನೆ ಹಾನಿಯಾಗಿದ್ದರೆ 3 ಲಕ್ಷದ ವರೆಗೆ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು, ಆದರೆ ಈ ಮನೆಗಳಿಗೆ ಈ ವರೆಗೆ ಪರಿಹಾರ ನೀಡಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಅನೇಕ ಹಳ್ಳಿಗಳಲ್ಲಿ ನೀರು ನುಗ್ಗಿದ ಸಂದರ್ಭದಲ್ಲಿ ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ, ಚಿಕ್ಕ ಪುಟ್ಟ ಅಂಗಡಿಗಳು, ಹೊಟೇಲ್‌ ಗಳು, ಗುಡಿ ಕೈಗಾರಿಕೆಗಳು ನೀರಿನಲ್ಲಿ ಮುಳುಗಿ ಇವುಗಳ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಈ ಜನರಿಗೆ ಪರಿಹಾರ ನೀಡಿರುವ ಮಾಹಿತಿ ಸರ್ಕಾರ ನೀಡಿರುವ ಉತ್ತರದಲ್ಲಿ ಇಲ್ಲದೇ ಇರುವುದರಿಂದ ಇವರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.

ಹೊಲ, ಗದ್ದೆಗಳಲ್ಲಿ ಮಳೆ ನೀರು ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗಿರುವುದರಿಂದ ಮತ್ತೆ ಈಗ ಆ ಭೂಮಿಯಲ್ಲಿ ಬೆಳೆ ಬೆಳೆಯಲು ರೈತರು ಕಷ್ಟ ಪಡಬೇಕಾಗಿದೆ. ಈ ರೈತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರ್ಕಾರದ ಉತ್ತರದಲ್ಲಿ ಪ್ರಸ್ತಾಪವಾಗಿಲ್ಲ. ಇದನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬೆಂಗಳೂರು ನಗರದಲ್ಲಿ ನಡೆದಿರುವ ಭೂ ಒತ್ತುವರಿ ಬಗ್ಗೆ ನಮ್ಮ ಸರ್ಕಾರದ ಅವಧಿಯಲ್ಲಿ ಸಮೀಕ್ಷೆ ನಡೆಸಿದ್ದೆವು, ಈ ಸಮೀಕ್ಷೆಯಲ್ಲಿ 1953 ಒತ್ತುವರಿಗಳನ್ನು ಗುರುತಿಸಲಾಗಿತ್ತು, ಇವುಗಳಲ್ಲಿ 1300 ಒತ್ತುವರಿಗಳನ್ನು ನಾವು ತೆರವು ಮಾಡಿದ್ದೆವು, ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಉಳಿದ 653 ಒತ್ತುವರಿಗಳನ್ನು ತೆರವುಗೊಳಿಸಿದ್ದರೆ ಈಗ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಸಿದ್ದರಾಮಯ್ಯ ತಿಳಿಸಿದರು.

2007ರಲ್ಲಿ ಬೆಂಗಳೂರು ನಗರಕ್ಕೆ 110 ಹಳ್ಳಿಗಳನ್ನು ಹೊಸದಾಗಿ ಸೇರಿಸಲಾಯಿತು. ಇವುಗಳ ವ್ಯಾಪ್ತಿ 225 ಚ.ಕಿ.ಮೀ. ಈ ಪುರಸಭೆ, ನಗರಸಭೆ ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರು, ಒಳಚರಂಡಿ, ಮಳೆ ನೀರು ಹರಿದು ಹೋಗಲು ಸೂಕ್ತ ಕಾಲುವೆ ಇವು ಯಾವು ಇರಲಿಲ್ಲ. ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಎದುರಾದದ್ದು ಈ ಪ್ರದೇಶಗಳಲ್ಲೇ ಹೆಚ್ಚು. ಕೆಂಪೇಗೌಡರಿಂದ ನಿರ್ಮಾಣವಾದ ಬೆಂಗಳೂರು ನಗರದ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಇರಲಿಲ್ಲ. ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು ಎಂದು ಹೇಳಿದರು.

2021-22 ರಲ್ಲಿ ಒತ್ತುವರಿ ತೆರವು ಮಾಡಲು, ಒಳ ಚರಂಡಿಗಳ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ 1 ರೂಪಾಯಿ ಹಣವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದ ಕೆಲಸ ನಡೆಯದೆ ಅವುಗಳೆಲ್ಲ ಒತ್ತುವರಿಯಾಗಿವೆ. ಕೆಲವು ದಿನಗಳ ಹಿಂದೆ ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಹೋದಾಗ ನಲ್ಲೂರಹಳ್ಳಿಯಲ್ಲಿ ಮಳೆ ನೀರು 4 ರಿಂದ 5 ಅಡಿ ವರೆಗೆ ಸಂಗ್ರಹವಾಗಿತ್ತು. ಕೆರೆ ಪಕ್ಕದಲ್ಲಿ ಅಪಾರ್ಟ್‌ ಮೆಂಟ್‌ ನಿರ್ಮಾಣ ಮಾಡಿದ್ದಾರೆ. ಒತ್ತುವರಿ ಮಾಡಿಯೇ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತೆ. ಇದಕ್ಕೆ ಲೈಸನ್ಸ್‌ ನೀಡಿದವರು ಯಾರು? ಈ ಅಕ್ರಮಗಳನ್ನು ಪತ್ತೆ ಹಚ್ಚಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರ ಪ್ರವಾಹ ಬಂದ ಮೇಲೆ 1600 ಕೋಟಿ ಹಣವನ್ನು ಬೆಂಗಳೂರು ನಗರದ ಮೂಲಸೌಕರ್ಯ ಕಾರ್ಯಗಳಿಗೆ ನೀಡುವುದಾಗಿ ಹೇಳಿದ್ದರೂ ಈ ವರೆಗೆ ಕೆಲಸ ಆರಂಭವಾಗಿಲ್ಲ. ಈ ಬಗ್ಗೆ ಸರ್ಕಾರ ಸದನಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಗೆ ರಾಜ್ಯದ ಜನ ಬೆಲೆ ತೆರಬೇಕಾಗಿ ಬಂದಿದೆ ಎಂದು ಸಿದ್ದರಾಮಯ್ಯ ಗುಡುಗಿದರು.

Related Articles

ಇತ್ತೀಚಿನ ಸುದ್ದಿಗಳು