Sunday, June 16, 2024

ಸತ್ಯ | ನ್ಯಾಯ |ಧರ್ಮ

ಬಾಗಲಕೋಟೆಯ ‘ಕರ ಸೇವಕ’ ನಾರಾಯಣಸಾ ಭಾಂಡಗೆಗೆ ಬಿಜೆಪಿ ಬಹುಮಾನ: ಕರ್ನಾಟಕದಿಂದ ರಾಜ್ಯಸಭಾ ಟಿಕೆಟ್

ಬೆಂಗಳೂರು: ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಭಾನುವಾರ ಸಂಜೆ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬದಲಿಗೆ ಬಿಜೆಪಿ ಹೊಸ ಮುಖವನ್ನು ಮುನ್ನೆಲೆಗೆ ತಂದಿದೆ. ಪಕ್ಷವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕ ನಾರಾಯಣಸಾ ಕೆ ಭಾಂಡಗೆ ಅವರನ್ನು ಕರ್ನಾಟಕದಿಂದ ತನ್ನ ನಾಮನಿರ್ದೇಶಿತರನ್ನಾಗಿ ಹೆಸರಿಸಿದೆ.

ರಾಜೀವ್ ಚಂದ್ರಶೇಖರ್ ಅವರು ಪಕ್ಷದ ಆಯ್ಕೆಯಾಗಿರಬಹುದು ಎಂದು ನಿರೀಕ್ಷಿಸಿದ್ದ ರಾಜಕೀಯ ಆಸಕ್ತರಿಗೆ ಪಕ್ಷದ ಈ ನಡೆ ಆಶ್ಚರ್ಯ ತಂದಿದೆ. ಇದೇ ವೇಳೆ ಕರ್ನಾಟಕದಿಂದ ರಾಜ್ಯಸಭಾ ಸ್ಥಾನ ಬಯಸಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಕಡೆಗಣಿಸಲಾಗಿದೆ.

ಆರೆಸ್ಸೆಸ್ ನಾಯಕ ಮತ್ತು ಪಕ್ಷದ ದೀರ್ಘಕಾಲದ ಕಾರ್ಯಕರ್ತ ನಾರಾಯಣಸಾ ಭಾಂಡಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.

ನಾರಾಯಣಸಾ ಭಾಂಡಗೆ ಯಾರು?

ನಾರಾಯಣಸಾ ಅವರು ದೀರ್ಘಕಾಲದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವಾರು ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ.

ಹಿಂದುತ್ವವಾದಿ ನಾಯಕ ಬಾಗಲಕೋಟೆಯಲ್ಲಿ ಕೇವಲ 17 ವರ್ಷದವರಿದ್ದಾಗ ಆರ್‌ಎಸ್‌ಎಸ್‌ಗೆ ಸೇರ್ಪಡೆಯಾದರು. ಅಂದಿನಿಂದ ಅವರು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾರಾಯಣಸಾ ಹೇಳುವಂತೆ, ಅವರು ಬಾಗಲಕೋಟೆ ಜಿಲ್ಲೆಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಸ್ಥಾಪಕ ಸದಸ್ಯರಾಗಿದ್ದರು.

1973ರಲ್ಲಿ ಜನಸಂಘದ ಮೂಲಕ ರಾಜಕೀಯಕ್ಕೆ ಸೇರಿದ ಅವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 18 ದಿನಗಳ ಕಾಲ ಬಂಧಿತರಾಗಿದ್ದರು.

ಅವರು ರಾಮಮಂದಿರ ಆಂದೋಲನದ ಸಕ್ರಿಯ ಸದಸ್ಯರಾಗಿದ್ದರು ಮತ್ತು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಎರಡು ಬಾರಿ ‘ಕರ ಸೇವಕ’ ಆಗಿ ಭಾಗವಹಿಸಿದ್ದರು. ರಾಮಮಂದಿರ ನಿರ್ಮಾಣಕ್ಕೆ ಕಾರಣವಾದ ಹಲವಾರು ಚಳವಳಿಗಳು ಮತ್ತು ಪ್ರತಿಭಟನೆಗಳ ಭಾಗವಾಗಿದ್ದರು.

ಬಿಜೆಪಿಯ ಮಾಜಿ ರಾಜ್ಯ ಉಪಾಧ್ಯಕ್ಷ ಹಾಗೂ ಬಾಗಲಕೋಟ ಜಿಲ್ಲಾಧ್ಯಕ್ಷರಾಗಿದ್ದರು.

“ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಮಾಧ್ಯಮಗಳ ಮೂಲಕವೇ ನನಗೆ ಈ ವಿಷಯ ತಿಳಿಯಿತು. ಒಬ್ಬ ಸಾಮಾನ್ಯ ಪಕ್ಷದ ಕಾರ್ಯಕರ್ತನನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ, ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇದು ಪಕ್ಷಕ್ಕಾಗಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ. ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಕೆಲಸ ಗುರುತಿಸಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ನಾರಾಯಣಸಾ ಹೇಳಿದರು.

ಏತನ್ಮಧ್ಯೆ, ಪಕ್ಷವು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಲೋಕಸಭಾ ಕಣಕ್ಕೆ ಇಳಿಸಬಹುದು ಎನ್ನಲಾಗುತ್ತಿದೆ.

ರಾಜ್ಯಸಭಾ ಸೀಟು ದೊರೆತರೆ ಕಡೆಗೂ ತನಗೊಂದು ನೆಲಯಾಗಬಹುದು ಎಂದು ಭಾವಿಸಿದ್ದ ಮಾಜಿ ಸಚಿವ ವಿ. ಸೋಮಣ್ಣನವರಿಗೆ ನಿರಾಶೆಯಾಗಿದೆ. ಅವರ ಮುಂದಿನ ನಡೆ ಏನಿರಬಹುದು ಎನ್ನುವುದರ ಕುರಿತು ಈಗಾಗಲೇ ಊಹಾಪೋಹಗಳು ಓಡಾಡುತ್ತಿವೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರನ್ನು ಗುರುತಿಸುವ ಮೂಲಕ ರಾಜಕೀಯ ಚದುರಂಗದಲ್ಲಿ ಬಿಜೆಪಿ ಜಾಣ ನಡೆಯನ್ನು ಪ್ರದರ್ಶಿಸಿದೆ ಎನ್ನಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು