Home ದೇಶ ತಮಿಳುನಾಡು ರಾಜಕೀಯ: ಎಐಎಡಿಎಂಕೆ ವಿಭಜನೆಯ ತಂತ್ರ ಹೆಣೆದ ಬಿಜೆಪಿ!

ತಮಿಳುನಾಡು ರಾಜಕೀಯ: ಎಐಎಡಿಎಂಕೆ ವಿಭಜನೆಯ ತಂತ್ರ ಹೆಣೆದ ಬಿಜೆಪಿ!

0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಗೊಂದಲ ಮನೆ ಮಾಡಿದೆ. ದಳಪತಿ ವಿಜಯ್ ಅವರ ತಮಿಳಗಾ ವೆಟ್ಟಿ ಕಳಗಂ (ಟಿವಿಕೆ) ಸರ್ಕಾರ ರಚನೆಗೆ ಅಗತ್ಯವಾದ ಬಹುಮತದ ಅಂಚಿನಲ್ಲಿ ನಿಂತಿರುವ ಈ ಹೊತ್ತಿನಲ್ಲಿ, ಎನ್‌ಡಿಎ ಮಿತ್ರಪಕ್ಷ ಎಐಎಡಿಎಂಕೆಯನ್ನು ಟಿವಿಕೆ ಜೊತೆ ಕೈಜೋಡಿಸಲು ಬಿಜೆಪಿ ಒತ್ತಡ ಹೇರುತ್ತಿರುವ ಬೆಳವಣಿಗೆ ಬೆಳಕಿಗೆ ಬಂದಿದೆ.

ಬಹುಮತಕ್ಕೆ ೧೦ ಕೊರತೆ
ಸರ್ಕಾರ ರಚಿಸಲು ೧೧೮ ಶಾಸಕರ ಬೆಂಬಲ ಅಗತ್ಯವಿರುವ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆಗೆ ಇದುವರೆಗೆ ೧೦೮ ಶಾಸಕರ ಬಲವಿದೆ. ಹೀಗಾಗಿ, ಬಹುಮತಕ್ಕೆ ಇನ್ನೂ ೧೦ ಶಾಸಕರ ಕೊರತೆ ಇದ್ದು, ಮೈತ್ರಿ ಸಮೀಕರಣ ಹೇಗೆ ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ. ಈ ಅಂತರವನ್ನು ಮುಚ್ಚಲು ಬಿಜೆಪಿ ಪರ್ಯಾಯ ದಾರಿ ಹಿಡಿದಿದ್ದು, ಎಐಎಡಿಎಂಕೆ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ.

ಬಿಜೆಪಿಯ ಲೆಕ್ಕಾಚಾರ – ಕಾಂಗ್ರೆಸ್ ತಡೆಯುವ ಗುರಿ
ಟಿವಿಕೆ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ನಿರ್ಮಾಣವಾಗುವುದನ್ನು ತಡೆಯುವ ಉದ್ದೇಶದಿಂದ ಬಿಜೆಪಿ ಈ ನಡೆ ಇರಿಸಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರದ ಭಾಗಿದಾರರಾಗುವುದನ್ನು ತಪ್ಪಿಸಲು, ಎಐಎಡಿಎಂಕೆ ಮತ್ತು ಟಿವಿಕೆ ಒಟ್ಟಾಗಿ ಸಮ್ಮಿಶ್ರ ಸರ್ಕಾರ ರಚಿಸಬೇಕು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಟಿವಿಕೆ ಜೊತೆ ಕೈಜೋಡಿಸದಿದ್ದರೆ ಎಐಎಡಿಎಂಕೆಯನ್ನು ಎನ್‌ಡಿಎಯಿಂದ ಹೊರಹಾಕುವ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಎಐಎಡಿಎಂಕೆಯಲ್ಲಿಒಳಜಗಳ – ವಿಭಜನೆಯ ಆತಂಕ
ಬಿಜೆಪಿಯ ಈ ಒತ್ತಡ ಎಐಎಡಿಎಂಕೆ ಒಳಗೆ ತೀವ್ರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಒಂದು ಬಣ ಮತ್ತು ಅದನ್ನು ವಿರೋಧಿಸುವ ಮತ್ತೊಂದು ಬಣ ಪಕ್ಷದೊಳಗೆ ರೂಪುಗೊಂಡಿವೆ. ಹಿರಿಯ ಎಐಎಡಿಎಂಕೆ ನಾಯಕಿ ಲಿಮಾ ರೋಸ್ ಮಾರ್ಟಿನ್ – ಪ್ರಸಿದ್ಧ ಲಾಟರಿ ರಾಜನ ಪತ್ನಿ ಮತ್ತು ಪುದುಚೇರಿ ಶಾಸಕರ ತಾಯಿ – ಮಂಗಳವಾರ ರಾತ್ರಿ ಟಿವಿಕೆ ಮತ್ತು ಎಐಎಡಿಎಂಕೆ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದು, ಪಕ್ಷದ ಒಳ ಬಿಕ್ಕಟ್ಟನ್ನು ಮತ್ತಷ್ಟು ಬಯಲಿಗೆ ತಂದಿತು.

ಅಲ್ಲದೇ, ಪಕ್ಷದ ಕೆಲವು ನಾಯಕರಿಗೆ ಅಧಿಕಾರದ ಆಮಿಷ ತೋರಿಸಿ ಎಐಎಡಿಎಂಕೆ ವಿಭಜನೆಗೆ ಬಿಜೆಪಿ ನೆರವು ನೀಡಲು ಸಿದ್ಧವಾಗಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಶಿವಸೇನೆ ಮಾದರಿ ಮರುಕಳಿಕೆ?
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಇಬ್ಭಾಗ ಮಾಡಿ ತನ್ನ ಮುಖ್ಯಮಂತ್ರಿಯನ್ನು ಅಧಿಕಾರಕ್ಕೇರಿಸಿದ ಬಿಜೆಪಿಯ ಅದೇ ತಂತ್ರಗಾರಿಕೆ ಈಗ ತಮಿಳುನಾಡಿನಲ್ಲಿ ಮರಳಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಎಐಎಡಿಎಂಕೆ ಕೂಡ ಶಿವಸೇನೆಯಂತೆಯೇ ಹೋಳಾಗುವ ಆತಂಕ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.

ಈ ಬೆಳವಣಿಗೆ ಬಗ್ಗೆ ಎಐಎಡಿಎಂಕೆ ಮತ್ತು ಬಿಜೆಪಿ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದ್ದು, ತಮಿಳುನಾಡಿನ ಮುಂದಿನ ರಾಜಕೀಯ ನಡೆ ಯಾವ ದಿಕ್ಕು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಎಲ್ಲ ಕಡೆ ಮನೆ ಮಾಡಿದೆ.

You cannot copy content of this page

Exit mobile version