Thursday, December 5, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ರಾಜಕೀಯ ಲಾಭಕ್ಕಾಗಿ ವಕ್ಫ್ ವಿರುದ್ಧ ಹೋರಾಟ

ಹಾಸನ: ವಕ್ಫ್ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿ ವಿರುದ್ಧ ಮುಖಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದರು.

ಜನ ಕಲ್ಯಾಣ ಸಮಾವೇಶದಲ್ಲಿ ಭಾಗಿಯಾಗುವ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ರಾಜಕೀಯಕ್ಕಾಗಿ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.

೨೦೧೪ ರಲ್ಲಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದರು. ಯಾರೆಲ್ಲಾ ಅತಿಕ್ರಮಣ ಮಾಡಿದ್ದಾರೋ ಅದೆಲ್ಲವನ್ನೂ ತೆರವು ಗೊಳಿಸುತ್ತೇವೆ ಎಂದಿದ್ದರು. ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಸಹ ಅದನ್ನೇ ಹೇಳಿದ್ದರು. ನಮಗಿಂತ ಹೆಚ್ಚು ನೋಟಿಸ್ ಕೊಟ್ಟಿರುವುದು ಅವರೇ ಎಂದು ಟಾಂಗ್ ನೀಡಿದರು.

ಅವರು ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿಲ್ಲ. ಅದರ ಬಗ್ಗೆ ಈಗ ಏನನ್ನೂ ಮಾತನಾಡುತ್ತಿಲ್ಲ. ಆದರೀಗ ನಮ್ಮ ವಿರುದ್ಧ ಹೋರಾಟದ ನಾಟಕ ಆಡುತ್ತಿದ್ದಾರೆ. ಇದು ರಾಜಕೀಯ ಇಬ್ಬಂದಿತನ ಎಂದು ವಾಗ್ದಾಳಿ ನಡೆಸಿದರು.

ಇನ್ನೇನು ಚಳಿಗಾಲದ ಅಧಿವೇಶನ ಆರಂಭ ಆಗುತ್ತಿದೆ. ಅಲ್ಲಿ ಮಾತನಾಡಲು ಅವರಿಗೆ ವಿಷಯಗಳಿಲ್ಲ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ನಾವು ಮೂರನ್ನೂ ಗೆದ್ದಿದ್ದೇವೆ. ೨೫ ವರ್ಷಗಳ ನಂತರ ಶಿಗ್ಗಾಂವಿಯಲ್ಲಿ ಜಯ ಸಾಧಿಸಿದ್ದೇವೆ. ಚನ್ನಪಟ್ಟಣದಲ್ಲೂ ಗೆದ್ದಿದ್ದೇವೆ. ಇದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರು ರಾಜಕೀಯ ನಾಟಕ ಶುರು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಇದೆ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page