Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯೇ ಇಡಿ ಹೆಸರಿನಲ್ಲಿ ತನಿಖೆ ನಡೆಸುತ್ತಿದೆ: ಎಎಪಿ ಆರೋಪ

ನವದೆಹಲಿ: ಇಡಿ ಸ್ವಾಯತ್ತ ಸಂಸ್ಥೆ ಎನ್ನುವುದು ಸಂಪೂರ್ಣ ಸುಳ್ಳು. ಬಿಜೆಪಿ ಕಚೇರಿಯೇ ಇಡಿ ಹೆಸರಿನಲ್ಲಿ ತನಿಖೆ ನಡೆಸುತ್ತಿದೆ ಎಂದು ಎಎಪಿ ಆರೋಪಿಸಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಚಿವೆ ಅತಿಶಿ, ಜಾರಿ ನಿರ್ದೇಶನಾಲಯವು ಸ್ವತಂತ್ರ ತನಿಖಾ ಸಂಸ್ಥೆ ಎನ್ನುವುದು ಸುಳ್ಳು. ಇಡಿ ಆರೋಪಿತರಿಗೆ ಏನಾದರೂ ಹೇಳಬೇಕಾದರೆ, ಮೊದಲು ಆರೋಪಪಟ್ಟಿ ಸಿದ್ದಪಡಿಸಿಕೊಂಡು ಸಲ್ಲಿಸಬೇಕು. ಅದನ್ನು ನ್ಯಾಯಾಧೀಶರ ಮುಂದೆ ಒಪ್ಪಿಸಬೇಕು. ಇದ್ಯಾವುದು ಇಲ್ಲದೇ ಬಿಜೆಪಿ ತಾಳಕ್ಕೆ ಇಡಿ ಕುಣಿಯುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ಹಗರಣದ ದಾಖಲೆಗಳನ್ನು ಹೊಂದಿರುವ ಹಳೆಯ ಫೋನ್ ಅನ್ನು ಕಳೆದುಕೊಂಡಿದ್ದಾರೆ ಎನ್ನುವುದೆಲ್ಲ ಸುಳ್ಳು ಆರೋಪ ಎಂದು ತಿರಸ್ಕರಿಸಿರುವ ಅವರು, ಬಿಜೆಪಿ ಕಚೇರಿಯಿಂದಲೇ ತನಿಖೆ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯ ಬಿಜೆಪಿಯ ರಾಜಕೀಯ ಪಾಲುದಾರ  ಪಕ್ಷದಂತೆ ವರ್ತಿಸುತ್ತಿದೆ ಎಂದು ದೂರಿದರು.

ದೇಶದ ಸಂವಿಧಾನ ಮತ್ತು ಕಾನೂನು ಇಡಿ ಅಧಿಕಾರಿಗಳಿಗೆ ಅಧಿಕಾರ ನೀಡಿದೆ ಎಂದು ಹೇಳಲು ಬಯಸುತ್ತೇನೆ. ನೀವು ಸಂವಿಧಾನವನ್ನು ಉಲ್ಲಂಘಿಸಬೇಡಿ; ಸಂವಿಧಾನವನ್ನು ಕೊಲ್ಲಬೇಡಿ. ನೀವು ಭಾರತೀಯ ಜನತಾ ಪಕ್ಷದ ಅಂಗಸಂಸ್ಥೆಯಲ್ಲ. ನೀವು ಈ ದೇಶದ ಕಾನೂನುಗಳ ಅಡಿಯಲ್ಲಿ ರಚಿಸಲಾದ ಸ್ವತಂತ್ರ ತನಿಖಾ ಸಂಸ್ಥೆ ಎಂಬುದನ್ನು ಮರೆಯಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಎರಡು ವರ್ಷಗಳ ಹಿಂದೆ ಕೇಜ್ರಿವಾಲ್ ಅವರು ಅಬಕಾರಿ ಹಗರಣ ನಡೆದಾಗ ಬಳಸಿದ್ದ ಫೋನ್ ಕಾಣೆಯಾಗಿದೆ ಎಂದು ಕೇಜ್ರಿವಾಲ್‌ ಹೇಳುತ್ತಿದ್ದಾರೆ ಎಂದು ಇಡಿ ಮೂಲಗಳು ನಿನ್ನೆ ಮಾಹಿತಿ ನೀಡಿದ್ದವು.

ಕೇಜ್ರಿವಾಲ್ ಅವರನ್ನು ಗುರುವಾರ ಸಂಜೆ ತಡರಾತ್ರಿ ಬಂಧಿಸಲಾಗಿದ್ದು, ಅವರು ಜೈಲಿನಿಂದಲೇ ಸಿಎಂ ಅಧಿಕಾರ ಚಲಾಯಿಸುವುದಾಗಿ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು