Home ರಾಜಕೀಯ ಬಿಜೆಪಿಗೆ ಬ್ಯಾಲೆಟ್‌ ಪೇಪರ್‌ ಭಯವಿಲ್ಲ: ಬಿ.ವೈ. ವಿಜಯೇಂದ್ರ

ಬಿಜೆಪಿಗೆ ಬ್ಯಾಲೆಟ್‌ ಪೇಪರ್‌ ಭಯವಿಲ್ಲ: ಬಿ.ವೈ. ವಿಜಯೇಂದ್ರ

0

ಬೆಂಗಳೂರು: ಬ್ಯಾಲೆಟ್‌ ಪೇಪರ್ ಬಳಕೆಯ ನಿರ್ಧಾರಕ್ಕೆ ಬಿಜೆಪಿಯು ಹೆದರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಮೂರು ಬಾರಿ ಸತತವಾಗಿ ಅಧಿಕಾರದಲ್ಲಿರುವುದರಿಂದ, ಬ್ಯಾಲೆಟ್‌ ಪೇಪರ್ ಚುನಾವಣೆಗಳಿಗೆ ಹೆದರುವ ಅಗತ್ಯ ನಮಗಿಲ್ಲ. ಇವಿಎಂಗಳ ಬಗ್ಗೆಯೂ ನಮಗೆ ಯಾವುದೇ ಭೀತಿ ಇಲ್ಲ. ಒಂದು ವೇಳೆ ರಾಹುಲ್ ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಇವಿಎಂ ಬಗ್ಗೆ ಸಮಸ್ಯೆ ಇದ್ದರೆ, ಕಾಂಗ್ರೆಸ್ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಸತತವಾಗಿ ಸೋಲುತ್ತಿರುವ ಕಾಂಗ್ರೆಸ್, ಇಂದು ಹತಾಶೆಯಿಂದ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಿದೆ. ಇವಿಎಂಗಳ ಬಗ್ಗೆ ದೋಷಪೂರಿತ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್‌ನವರು ಎಲ್ಲದಕ್ಕೂ ವಿರೋಧ ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್, ಆರ್ಟಿಕಲ್ 370, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಎಲ್ಲ ವಿಷಯಗಳನ್ನೂ ಅವರು ವಿರೋಧಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ದೇಶದ ಜನತೆ ಕಾಂಗ್ರೆಸ್ ಬಗ್ಗೆ ಏಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆ ಪಕ್ಷ ಚಿಂತಿಸಬೇಕೇ ಹೊರತು, ಇವಿಎಂಗಳ ವಿರೋಧಿಸುವುದು ಮೂರ್ಖತನದ ಪರಮಾವಧಿ ಎಂದು ಅವರು ಟೀಕಿಸಿದರು.

‘ಕಾಂಗ್ರೆಸ್‌ಗೆ ಪಾರದರ್ಶಕತೆ ಬೇಕಿಲ್ಲ’: ಡಾ. ಅಶ್ವತ್ಥನಾರಾಯಣ

ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಮತ ಚಲಾಯಿಸಿದ ನಂತರ ವಿವಿಪ್ಯಾಟ್‌ನಲ್ಲಿ ಪಾರದರ್ಶಕವಾಗಿ ಮಾಹಿತಿ ಸಿಗುತ್ತದೆ. ಇದಕ್ಕಿಂತ ಹೆಚ್ಚಿನ ತಂತ್ರಜ್ಞಾನ ಬೇಕೇ? ಅನೇಕ ಅಗ್ನಿಪರೀಕ್ಷೆಗಳ ನಂತರವೇ ಎಲ್ಲರೂ ಇವಿಎಂ ಅನ್ನು ಒಪ್ಪಿಕೊಂಡಿರುವುದು. ತಂತ್ರಜ್ಞಾನ ಸುಧಾರಣೆಗಳಿಗೆ ದೇಶದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಕರ್ನಾಟಕವು ದೇಶದ ಹೆಮ್ಮೆಯ ಕಿರೀಟವಾಗಿದೆ. ಇಂತಹ ಪ್ರಗತಿಪರ ರಾಜ್ಯಕ್ಕೆ ಕಾಂಗ್ರೆಸ್ ವಿಲನ್ ರೂಪದಲ್ಲಿ ಬಂದಿದೆ. ಇವರಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಗೂಂಡಾಗಿರಿ ಮಾಡುವುದು, ಮತಗಟ್ಟೆಗಳ ಮೇಲೆ ಹಿಡಿತ ಸಾಧಿಸುವುದು, ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದು ಇವರ ಏಕೈಕ ಉದ್ದೇಶವೇ ಹೊರತು, ಸಮಾಜದ ಬಗ್ಗೆ ಅವರಿಗೆ ಎಳ್ಳಷ್ಟೂ ಕಾಳಜಿ ಇಲ್ಲ. ರಾಜ್ಯದ ಅಭಿವೃದ್ಧಿ ಅಥವಾ ಆಡಳಿತ ಸುಧಾರಣೆ ಮಾಡುವುದನ್ನು ಬಿಟ್ಟು ಕೇವಲ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

You cannot copy content of this page

Exit mobile version