Monday, July 28, 2025

ಸತ್ಯ | ನ್ಯಾಯ |ಧರ್ಮ

ಹಣದ ಹೊಳೆಯಲ್ಲಿ ತೇಲುತ್ತಿರುವ ಬಿಜೆಪಿ, ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಈ ಪಕ್ಷಕ್ಕೆ?

ಚುನಾವಣಾ ಬಾಂಡ್‌ಗಳ ಹೊರತಾಗಿ ಇತರ ರೂಪಗಳಲ್ಲಿ ಕಾರ್ಪೊರೇಟ್‌ಗಳಿಂದ ಭಾರಿ ಪ್ರಮಾಣದ ಹಣವನ್ನು ಪಡೆದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಸ್ತುತ ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡಲಿದೆ ಎಂದು ನೀವು ಊಹಿಸಬಲ್ಲಿರಾ?

ಕಳೆದ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಖರ್ಚು ಮತ್ತು ಈಗಾಗಲೇ ನಡೆದ ಎರಡು ಹಂತದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಮಾಡಿದ ಖರ್ಚು ವೆಚ್ಚದ ಆಧಾರದ ಮೇಲೆ ವೀಕ್ಷಕರು ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಗಳು ಮಾಡಿರುವ ಅಂದಾಜಿನಲ್ಲಿ ಬೆರಗುಗೊಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಆ ವಿವರಗಳಿರುವ ಲೇಖನವನ್ನು ‘ದಿ ವೈರ್’ ಪ್ರಕಟಿಸಿದೆ.

ಈ ಲೇಖನದ ಪ್ರಕಾರ, ಆಂಧ್ರಪ್ರದೇಶದಂತಹ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ವೆಚ್ಚವನ್ನು ಸೇರಿಸಿದರೆ, 2024ರ ಚುನಾವಣೆಯಲ್ಲಿ ಬಿಜೆಪಿ ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುತ್ತದೆ! ಇದುವರೆಗೆ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ ಬಿಜೆಪಿಗೆ ಚುನಾವಣಾ ಬಾಂಡ್‌ ರೂಪದಲ್ಲಿ ಬರೋಬ್ಬರಿ 6 ಸಾವಿರ ಕೋಟಿ ರೂ. ಸಂದಾಯವಾಗಿದೆ. ಆದರೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಲು ಹೇಗೆ ಸಾಧ್ಯ? ಪಕ್ಷ ಎಲ್ಲಿಂದ ಹಣ ಒಟ್ಟುಗೂಡಿಸಿದೆ ಎನ್ನುವುದು ಈಗ ಬಹಿರಂಗ ರಹಸ್ಯ.

ಎಷ್ಟು ಹಣ…?

2015-16ನೇ ಹಣಕಾಸು ವರ್ಷದಿಂದ 2022-23ರವರೆಗೆ ಚುನಾವಣೆ ಮತ್ತು ಸಾಮಾನ್ಯ ಪ್ರಚಾರಕ್ಕಾಗಿ ಪ್ರತಿ ವರ್ಷ 5,744 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಬಿಜೆಪಿ ತನ್ನ ಖಾತೆಗಳಲ್ಲಿ ತೋರಿಸಿದೆ. ಆದಾಗ್ಯೂ, ವಿವಿಧ ಸಂಘಟನೆಗಳು ಮತ್ತು ವೀಕ್ಷಕರು ಹೇಳುವುದೇ ಬೇರೆ. ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಮತ್ತು ಹಲವಾರು ಸಂಘಟನೆಗಳ ಅಧ್ಯಯನದ ಪ್ರಕಾರ, ಬಿಜೆಪಿ 2019ರ ಚುನಾವಣೆಯಲ್ಲಿ ಬರೋಬ್ಬರಿ 27,000 ಕೋಟಿ ರೂ. ಖರ್ಚು ಮಾಡಿದೆ.

ದೇಶಾದ್ಯಂತದ ಎಲ್ಲ ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಚುನಾವಣಾ ಆಯೋಗ ನಿಗದಿ ಪಡಿಸಿದ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಹಲವು ವರದಿಗಳು ತೀರ್ಮಾನಿಸಿವೆ. CMS ಅಧ್ಯಯನದ ಪ್ರಕಾರ, 2019ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮಾಡಿದ ಒಟ್ಟು ವೆಚ್ಚ 60,000 ಕೋಟಿ ರೂ. ಅದರಲ್ಲಿ ಬಿಜೆಪಿ ಪಾಲು ಶೇ.45ರಷ್ಟಿದೆ. 1998ರ ಸಾರ್ವತ್ರಿಕ ಚುನಾವಣೆಯ ವೆಚ್ಚದಲ್ಲಿ ಬಿಜೆಪಿ ಪಾಲು ಕೇವಲ ಶೇ.20ರಷ್ಟಿತ್ತು ಎಂಬುದು ಗಮನಾರ್ಹ.

2019ರ ಚುನಾವಣೆಯಲ್ಲಿ ಬಿಜೆಪಿ 1998ರ ಚುನಾವಣೆಗಿಂತ ಶೇ.25ರಷ್ಟು ಹೆಚ್ಚುವರಿ ಖರ್ಚು ಮಾಡಿದೆ. ಇದು ರಾಜ್ಯ ವಿಧಾನಸಭೆಗಳ ವೆಚ್ಚದ ಜೊತೆಗೆ! ಬೆಳವಣಿಗೆ ದರವನ್ನು ಪರಿಗಣಿಸದೆ 2019ರ ಚುನಾವಣೆಯಲ್ಲಿ ಮಾಡಿದಂತೆಯೇ ಈ ಚುನಾವಣೆಯಲ್ಲಿಯೂ ಬಿಜೆಪಿ ಖರ್ಚು ಮಾಡಲಿದೆ ಎಂದು ಭಾವಿಸಿದರೆ, ಆ ಮೊತ್ತ 60,750 ಕೋಟಿ ಎಂದು ಅಂದಾಜಿಸಲಾಗಿದೆ. ರಾಜ್ಯ ವಿಧಾನಸಭೆಗಳಿಗೆ ಚುನಾವಣಾ ಆಯೋಗ ನಿಗದಿಪಡಿಸಿದ ವೆಚ್ಚ 40 ಲಕ್ಷ ರೂ.

ಛತ್ತೀಸ್‌ಗಢದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವನ್ನು ಸೂಕ್ಷ್ಮವಾಗಿ ಗಮನಿಸಿದ ತಜ್ಞರ ಪ್ರಕಾರ, ಪ್ರತಿ ಕ್ಷೇತ್ರದ ಅಭ್ಯರ್ಥಿಗಳಿಗೆ ಪಕ್ಷವು ನೇರವಾಗಿ ಮೂರರಿಂದ ನಾಲ್ಕು ಕೋಟಿ ರೂಪಾಯಿಗಳನ್ನು ನೀಡಿದೆ. ಇದಲ್ಲದೆ, ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಖರ್ಚು ಮಾಡಿದೆ. ಬಿಜೆಪಿ ಅಭ್ಯರ್ಥಿಗಳೂ ತಮ್ಮ ಸ್ವಂತಕ್ಕೆ ಅಪಾರ ಹಣ ಖರ್ಚು ಮಾಡಿದ್ದಾರೆ. ಇದೆಲ್ಲವನ್ನೂ ಒಟ್ಟುಗೂಡಿಸಿದರೆ ಚುನಾವಣಾ ಆಯೋಗ ನಿಗದಿಪಡಿಸಿದ ಮೊತ್ತಕ್ಕೂ ಬಿಜೆಪಿ ಮಾಡಿರುವ ವೆಚ್ಚಕ್ಕೂ ಎಲ್ಲೂ ತಾಳೆಯಾಗುವುದಿಲ್ಲ ಎನ್ನುತ್ತಾರೆ.

ಇನ್ನೊಂದು ಅಂದಾಜಿನ ಪ್ರಕಾರ ಜಿಲ್ಲಾ ಕಚೇರಿಗಳ ನಿರ್ಮಾಣಕ್ಕೆ 2,661 ಕೋಟಿ ರೂ., ಇತರೆ ಕಟ್ಟಡಗಳ ನಿರ್ಮಾಣಕ್ಕೆ 900 ಕೋಟಿ ರೂ. ರಾಜ್ಯ ಚುನಾವಣೆಗೆ 16,492 ಕೋಟಿ ರೂ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 54,000 ಕೋಟಿಯಿಂದ 87,750 ಕೋಟಿ ರೂಪಾಯಿ ಖರ್ಚು ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಈ ಮೊತ್ತ ಎಲ್ಲಿಂದ ಬಂತು?

ಬಿಜೆಪಿಗೆ ಇಷ್ಟೊಂದು ಹಣ ಎಲ್ಲಿಂದ, ಹೇಗೆ ಬರುತ್ತಿದೆ ಎಂಬುದು ಚರ್ಚೆಯ ವಿಷಯವಾಗಿದೆ. ಬಿಜೆಪಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಕಚೇರಿಗಳನ್ನು ನಿರ್ಮಿಸುತ್ತಿದೆ. ಇವುಗಳ ಜೊತೆಗೆ, ಚುನಾವಣಾ ಪ್ರಚಾರಕ್ಕಾಗಿ ಸಂಯೋಜಿತ ವೆಚ್ಚವು ಕಡಿಮೆ ಅಂದಾಜಿನಲ್ಲಿ 1.07 ಲಕ್ಷ ಕೋಟಿ ರೂಪಾಯಿಗಳಾಗಿರುತ್ತದೆ ಎಂದು ವೀಕ್ಷಕರು ನಂಬಿದ್ದಾರೆ. ಇದು 2014-15ರಿಂದ 2022-23ರವರೆಗೆ ಬಿಜೆಪಿಯ ಅಧಿಕೃತ ಆದಾಯವಾದ 14,663 ಕೋಟಿ ರೂ.ಗಿಂತ ಐದರಿಂದ ಏಳು ಪಟ್ಟು ಹೆಚ್ಚು! ಇದನ್ನು ಪರಿಗಣಿಸಿದರೆ, ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷವು ಒಟ್ಟು ಮೊತ್ತದ ಕೇವಲ 10 ಪ್ರತಿಶತವನ್ನು ಪಡೆದಿದೆ!

Related Articles

ಇತ್ತೀಚಿನ ಸುದ್ದಿಗಳು

You cannot copy content of this page