ಹೊಸದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ, ಗಣ್ಯರು ಹಂಚಿಕೊಂಡ ಶುಭಾಶಯಗಳಿಂದ ಸಾಮಾಜಿಕ ಜಾಲತಾಣಗಳು ತುಂಬಿ ಹೋಗಿವೆ.
ಹಿಂದೆಂದೂ ಇಲ್ಲದ ರೀತಿಯಲ್ಲಿ ಚಲನಚಿತ್ರ, ಕ್ರೀಡೆ, ಕೈಗಾರಿಕಾ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳ ಪ್ರಮುಖ ವ್ಯಕ್ತಿಗಳು ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ, ಅವರೊಂದಿಗೆ ತಾವು ಕಳೆದ ಸಂದರ್ಭಗಳನ್ನು ನೆನಪಿಸಿಕೊಂಡಿದ್ದಾರೆ. ಇವರೆಲ್ಲರೂ #MyModiStory ಎಂಬ ಒಂದೇ ಹ್ಯಾಶ್‌ಟ್ಯಾಗ್ ಬಳಸಿ ಶುಭಾಶಯ ಹೇಳುತ್ತಿರುವುದು ನೆಟ್ಟಿಗರಲ್ಲಿ ಸಂದೇಹಗಳನ್ನು ಹುಟ್ಟುಹಾಕಿದೆ.
ಇದು ‘ಪೇಯ್ಡ್ ಪಿಆರ್’ (ಕೂಲಿ ಪಡೆದು ಮಾಡುವ ಪ್ರಚಾರ) ಎಂದು ಆರೋಪಿಸಿರುವ ನೆಟ್ಟಿಗರು, ಬಿಜೆಪಿ ಐಟಿ ಸೆಲ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ಇದನ್ನು ಉತ್ತರ ಕೊರಿಯಾ ಮಾದರಿಯ ಕಡ್ಡಾಯ ಪ್ರಚಾರ ಎಂದು ಹಲವರು ಬಣ್ಣಿಸಿದ್ದಾರೆ.
ವಿಶ್ವನಾಥನ್ ಆನಂದ್‌ರ ತಪ್ಪಿನಿಂದ ಬಯಲಾದ ಸತ್ಯ
ಇದಕ್ಕೆ ಉದಾಹರಣೆಯಾಗಿ, ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು X (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿ, ತಕ್ಷಣವೇ ಅಳಿಸಿ ಹಾಕಿದ ಟ್ವೀಟ್ ಅನ್ನು ನೆಟ್ಟಿಗರು ಹೊರತಂದಿದ್ದಾರೆ. ಮೋದಿ ಜೊತೆ ಅಹಮದಾಬಾದ್‌ನಲ್ಲಿ ಊಟ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು ಆನಂದ್ ಅವರು ಟ್ವೀಟ್ ಮಾಡಿದ್ದರು.
ಆದರೆ, ಆ ಟ್ವೀಟ್‌ನ ಆರಂಭದಲ್ಲಿ “ವಿಶ್ವನಾಥನ್ ಆನಂದ್‌ಜಿ” ಎಂದು ಇರುವುದು ಕಂಡುಬಂದಿದೆ. ಇದರರ್ಥ, ಬಿಜೆಪಿ ಐಟಿ ಸೆಲ್‌ನಿಂದ ಫಾರ್ವರ್ಡ್ ಆದ ಸಂದೇಶವನ್ನು ಆನಂದ್ ಅವರು ಯಥಾವತ್ತಾಗಿ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿ, ಆದ ತಪ್ಪನ್ನು ತಕ್ಷಣವೇ ಅರಿತು ಆ ಪೋಸ್ಟ್ ಅನ್ನು ಅಳಿಸಿಹಾಕಿ, ‘ಜಿ’ ಪದವನ್ನು ಸರಿಪಡಿಸಿ ಮತ್ತೆ ಟ್ವೀಟ್ ಮಾಡಿದ್ದರು.
ಆದರೆ, ಆಗಾಗಲೇ ಆಗಬೇಕಾದ ಡ್ಯಾಮೇಜ್ ಆಗಿ ಹೋಗಿತ್ತು. ಬಿಜೆಪಿ ಐಟಿ ಸೆಲ್‌ನ ಈ ಪ್ರಚಾರದ ಹಂಬಲವನ್ನು ಪತ್ತೆಹಚ್ಚಿದ ನೆಟ್ಟಿಗರು, “ಈ ಕಕ್ಕುರ್ತಿ ಏಕೆ?” ಎಂದು ಪ್ರಶ್ನಿಸಿದ್ದಾರೆ.
ಸೆಲೆಬ್ರಿಟಿಗಳ ಮೇಲೂ ಟೀಕಾ ಪ್ರಹಾರ
ಮೋದಿಗೆ ಶುಭಾಶಯ ಕೋರಲು ಸ್ಪರ್ಧಿಸುತ್ತಿರುವ ಸೆಲೆಬ್ರಿಟಿಗಳ ವಿರುದ್ಧವೂ ಟೀಕಾ ಪ್ರಹಾರ ನಡೆದಿದೆ. “ದೇಶ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳ ಬಗ್ಗೆ ಎಂದಿಗೂ ಸರ್ಕಾರವನ್ನು ಪ್ರಶ್ನಿಸದ ಈ ಗಣ್ಯರು, ಇಂದು ಲಜ್ಜೆಗೆಟ್ಟು ನಕಲಿ #MyModiStory ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದು ಬಹಳ ನಾಚಿಕೆಗೇಡಿನ ಸಂಗತಿ” ಎಂದು ಒಬ್ಬ X ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವನಾಥನ್ ಆನಂದ್ ಅವರ ಪಿಆರ್ ಪ್ರಯತ್ನವು ಹಾಸ್ಯಾಸ್ಪದವಾಗಿದ್ದನ್ನು ಮತ್ತೊಬ್ಬ ನೆಟ್ಟಿಗರು ಪ್ರಸ್ತಾಪಿಸಿದ್ದಾರೆ. “ಬಿಜೆಪಿ ಐಟಿ ಸೆಲ್ ವಾಟ್ಸಾಪ್‌ನಲ್ಲಿ ಕಳುಹಿಸಿದ ಸ್ಕ್ರಿಪ್ಟನ್ನು ವಿಶ್ವನಾಥನ್ ಆನಂದ್ ಅವರು ಕಾಪಿ-ಪೇಸ್ಟ್ ಮಾಡಿದ್ದಾರೆ, ಆದರೆ ‘ವಿಶ್ವನಾಥನ್ ಆನಂದ್‌ಜಿ’ ಪದವನ್ನು ಅಳಿಸಲು ಮರೆತಿದ್ದರು, ನಂತರ ಅದನ್ನು ಡಿಲೀಟ್ ಮಾಡಿ ‘ಜಿ’ ಇಲ್ಲದೆ ರೀ-ಪೋಸ್ಟ್ ಮಾಡಿದ್ದಾರೆ” ಎಂದು ವೀಣಾ ಜೈನ್ ಎಂಬ ನೆಟ್ಟಿಗರು ಉಲ್ಲೇಖಿಸಿದ್ದಾರೆ.