Monday, June 17, 2024

ಸತ್ಯ | ನ್ಯಾಯ |ಧರ್ಮ

ಚುನಾವಣೆ ನಂತರ ಬಿಜೆಪಿ ಜೆಡಿಎಸ್ ಮೈತ್ರಿ ಖತಂ!

ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಮುರಿದು ಬೀಳುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಜೆಡಿಎಸ್ ಮತ್ತು ಬಿಜೆಪಿ ಎರಡೂ ಮೂಲಗಳಿಂದ ಸಿಕ್ಕ ಮಾಹಿತಿಯಂತೆ ಕಾಂಗ್ರೆಸ್ ಪಕ್ಷ ಸೋಲಿಸುವ ಏಕೈಕ ಉದ್ದೇಶದಿಂದ ಈ ಎರಡೂ ಪಕ್ಷಗಳು ಒಟ್ಟಾಗಿವೆಯೇ ಹೊರತು ಈ ಮೈತ್ರಿ ಮುಂದುವರಿಯಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಸಧ್ಯ ಜೆಡಿಎಸ್ ಕಡೆಯಿಂದ ಕೇಳಿ ಬಂದ ಅಪಸ್ವರ ಏನೆಂದರೆ, ರಾಜ್ಯದಲ್ಲಿ ಜೆಡಿಎಸ್ ಅಳಿವು ಉಳಿವಿನ ದಾರಿಯಲ್ಲಿ ನಡೆಯುತ್ತಿದೆ‌. ಶತಾಯಗತಾಯ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಜೆಡಿಎಸ್ ಗೆ ಎದುರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಬಲಿಷ್ಠ ಪಕ್ಷವಾಗಿರುವಾಗ ಆ ಪಕ್ಷದ ಜೊತೆಗೆ ಮೈತ್ರಿ ಅಸಾಧ್ಯ. ಸೀಟು ಹಂಚಿಕೆ ವಿಚಾರವಂತೂ ದೂರದ ಮಾತು. ಹೀಗಿರುವಾಗ ಕಳೆದ ಬಾರಿಯ ಒಂದೂ ಸೀಟು ಕೈ ತಪ್ಪಿ ಹೋದರೆ ಸಂಸತ್ತಿನಲ್ಲಿ ಜೆಡಿಎಸ್ ಗೆ ಒಂದು ಸ್ಥಾನವೂ ಇಲ್ಲದಂತಾಗಲಿದೆ. ಹೀಗಾಗಿ ಈ ಮೈತ್ರಿ ಅನಿವಾರ್ಯವೇ ಹೊರತು ಅವಶ್ಯಕ ಆಗಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ರಾಜಕೀಯವಾಗಿ ಬಿಜೆಪಿ ಜೊತೆಗಿನ ಮೈತ್ರಿ ದೂರವಾಗಲು ಇನ್ನೊಂದು ಕಾರಣ ಏನೆಂದರೆ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷ ಹೊರತುಪಡಿಸಿ ಈವರೆಗೆ ಬಿಜೆಪಿ ಜೊತೆಗೆ ಗುರುತಿಸಿಕೊಂಡ ಯಾವೊಂದು ಪ್ರಾದೇಶಿಕ ಪಕ್ಷಗಳೂ ಜೀವಂತವಾಗಿಲ್ಲ. ಇದ್ದರೂ ಸಹ ಬಿಜೆಪಿ ಪಕ್ಷ ಕೊಟ್ಟ ಭಿಕ್ಷೆಯಂತಹ ಸ್ಥಾನಮಾನಕ್ಕೆ ತೃಪ್ತಿ ಪಟ್ಟು ಇದ್ದಾರೆ. ಕಾಂಗ್ರೆಸ್ ಜೊತೆಗೆ INDIA ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಡಿಎಂಕೆ, ತೃಣಮೂಲ ಕಾಂಗ್ರೆಸ್, ಕೇರಳದ ಪ್ರಾದೇಶಿಕ ಪಕ್ಷಗಳು, ಆಮ್ ಆದ್ಮಿ ಪಕ್ಷ, ಶಿವಸೇನೆ, ಕಮ್ಯುನಿಸ್ಟ್ ಪಾರ್ಟಿ, RJD, NCP, ಸಮಾಜವಾದಿ ಪಾರ್ಟಿ ಸೇರಿದಂತೆ ಮೈತ್ರಿಕೂಟದ ಎಲ್ಲಾ 24 ಪಕ್ಷಗಳು ಘಟಾನುಘಟಿ ಪಕ್ಷಗಳೇ.. ಹಾಗೆಯೇ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಹೀಗಿರುವಾಗ, ಬಿಜೆಪಿ ಪಕ್ಷದ ಸಖ್ಯದಿಂದ ಎಷ್ಟು ಬೇಗ ಹೊರಬರುವುದೋ ಅಷ್ಟು ಬೇಗ ಜೆಡಿಎಸ್ ಗೆ ಉಳಿಗಾಲ ಎಂಬುದು ಜೆಡಿಎಸ್ ಪಕ್ಷದ ಮೂಲದಿಂದ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಜಾತ್ಯಾತೀತ ಎಂಬ ಹಣೆಪಟ್ಟಿ ಹೊಂದಿರುವ ಪಕ್ಷ ಕೋಮುವಾದಿ ಎಂದೇ ಗುರುತಿಸಿಕೊಂಡ ಪಕ್ಷದ ಜೊತೆಗೆ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ತಮಗೆ ಅಪವಾದ ತಪ್ಪಿದ್ದಲ್ಲ. ಈಗಾಗಲೇ ಆದಷ್ಟು ತಮ್ಮ ಪಕ್ಷದ ವರ್ಚಸ್ಸು ಕುಂದಿರುವ ಹೊತ್ತಲ್ಲಿ ಜೆಡಿಎಸ್ ಇನ್ನೂ ಬಿಜೆಪಿ ಜೊತೆಯಲ್ಲಿ ಗುರುತಿಸಿಕೊಂಡರೆ ತನ್ನ ಅಸ್ತಿತ್ವಕ್ಕೆ ಕುಂದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ಮೂಲಗಳಿಂದ ಬಂದ ಅಭಿಪ್ರಾಯವಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲೂ ಸಹ ಇದರ ಛಾಯೆ ದಟ್ಟವಾಗಿದ್ದು ದೇವೇಗೌಡರ ಅಳಿಯ ಸಿಎನ್ ಮಂಜುನಾಥ್ ಗೆಲುವು ಸಹ ಅನುಮಾನ ಎನ್ನುವಂತಾಗಿದೆ. ಹೀಗಿರುವಾಗ ಚುನಾವಣೆ ಸಮಯದಲ್ಲಷ್ಟೆ ಬಿಜೆಪಿ ಸೇರ್ಪಡೆಯಾಗಿ, ಚುನಾವಣೆ ನಂತರ ಜೆಡಿಎಸ್ ಸೇರ್ಪಡೆ ಅಥವಾ ರಾಜಕೀಯದಿಂದ ದೂರ ಸರಿಯುವ ಬಗ್ಗೆಯೂ ಸಿಎನ್ ಮಂಜುನಾಥ್ ತನ್ನ ಆಪ್ತರಲ್ಲಿ ಹೇಳಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಭ್ಯರ್ಥಿಗಳ ಆಯ್ಕೆ ಗೊಂದಲದಲ್ಲಿದ್ದ ಸಂದರ್ಭದಲ್ಲಿಯೂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಸಣ್ಣಗೆ ಮುನಿಸಿಕೊಂಡಿದ್ದು ಇನ್ನೂ ಸಹ ಜೆಡಿಎಸ್ ಪಾಳಯದಲ್ಲಿ ಮರೆತಿಲ್ಲ. ಕೇವಲ 2 ಸೀಟಿಗೆ ತೃಪ್ತಿ ಪಡುವಂತಾದರೆ ಈ ಮೈತ್ರಿಯ ಅಗತ್ಯ ಇರಲಿಲ್ಲ ಎಂದೇ ಜೆಡಿಎಸ್ ನಾಯಕ ತನ್ನ ಅಸಮಾಧಾನ ಹೊರಹಾಕಿದ್ದರು.

ಇನ್ನು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಸಹ ಒಂದು ಸ್ಪಷ್ಟ ಸಿದ್ಧಾಂತ ಮತ್ತು ನಿಲುವಿಗೆ ನಿಲ್ಲದೇ ಇರುವುದು ಜೆಡಿಎಸ್ ಕಾರ್ಯಕರ್ತರಲ್ಲೇ ಗೊಂದಲ ಮತ್ತು ಅಸಮಾಧಾನ ಏರ್ಪಟ್ಟಿದೆ. ಈಗಾಗಲೇ ಜೆಡಿಎಸ್ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಎರಡೆರಡು ಬಾರಿ ಮೈತ್ರಿ ಮಾಡಿ ಮುರಿದು ಬಿದ್ದಿರುವಾಗ ವಿರೋಧಿಗಳಿಗೆ ಉತ್ತರ ಕೊಡುವಲ್ಲಿಯೂ ಸಹ ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಗೆ ಬೈದು ವಿರೋಧಿಸಿಕೊಂಡು ಬಂದಿದ್ದ ಸಿದ್ಧಾಂತವನ್ನೇ ಏಕಾಏಕಿ ಅಪ್ಪಿಕೊಂಡಿರುವುದು ಸಹ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಉಂಟುಮಾಡಿದೆ‌.

ಅಷ್ಟೆ ಅಲ್ಲದೆ ಪಕ್ಷದ ಯಾವೊಬ್ಬ ಮುಖಂಡ, ಶಾಸಕರೊಂದಿಗೂ ಚರ್ಚಿಸದೇ, ರಾಜ್ಯ ಬಿಜೆಪಿ ನಾಯಕರೊಂದಿಗೂ ಸಮಾಲೋಚಿಸದೇ ನೇರವಾಗಿ ಬಿಜೆಪಿ ಹೈಕಮಾಂಡ್ ಕದ ತಟ್ಟಿದ ನಂತರ ನಿರ್ಮಾಣಗೊಂಡ ಮೈತ್ರಿಯನ್ನು ಕಾರ್ಯಕರ್ತರು, ಮುಖಂಡರು ಮತ್ತು ಪಕ್ಷದ ಉನ್ನತ ಮಟ್ಟದ ನಾಯಕರು ಅನಿವಾರ್ಯವಾಗಿ ಒಪ್ಪಬೇಕಾದ ಸ್ಥಿತಿ, ಜೆಡಿಎಸ್ ಪಕ್ಷದೊಳಗೇ ಆಂತರಿಕ ಸರ್ವಾಧಿಕಾರವನ್ನು ಅನಿವಾರ್ಯವಾಗಿ ಒಪ್ಪುವ ಹಂತಕ್ಕೆ ಜೆಡಿಎಸ್ ತಲುಪಿರುವುದು, ಈ ಬಗ್ಗೆ ಕುಮಾರಸ್ವಾಮಿ ಮೇಲೆ ಕೆಲವು ನಾಯಕರು ಸಣ್ಣ ಅಸಮಾಧಾನ ಹೊಂದಿರುವ ಹಿನ್ನೆಲೆಯಲ್ಲಿ ಚುನಾವಣೆ ನಂತರ ಬಿಜೆಪಿ ಸಖ್ಯ ತೊರೆಯುವ ಬಗ್ಗೆ ಎಲ್ಲಾ ಮುನ್ಸೂಚನೆಗಳು ಹಾಗೂ ಸಾಧ್ಯತೆಗಳು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು