ದೆಹಲಿ: ಮತಾಂತರ ಮತ್ತು ಮಾನವ ಕಳ್ಳಸಾಗಣೆ ಆರೋಪಗಳ ಮೇಲೆ ಛತ್ತೀಸ್‌ಗಢದಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು (ನನ್‌ಗಳನ್ನು) ಬಂಧಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕೇರಳದ ಕ್ಯಾಥೋಲಿಕ್ ಸನ್ಯಾಸಿನಿಯರ ಬಂಧನವನ್ನು ಬಿಜೆಪಿ ನೇತೃತ್ವದ ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಸಮರ್ಥಿಸಿಕೊಂಡರೆ, ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಆರೋಪಗಳನ್ನು ತಳ್ಳಿಹಾಕಿದರು.
ಬಲವಂತದ ಮತಾಂತರ ಅಥವಾ ಮಾನವ ಕಳ್ಳಸಾಗಣೆಯಲ್ಲಿ ಆ ಸನ್ಯಾಸಿನಿಯರು ಭಾಗಿಯಾಗಿಲ್ಲ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು. ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಕೇರಳಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟೋನಿಯನ್ನು ಛತ್ತೀಸ್‌ಗಢಕ್ಕೆ ಕಳುಹಿಸಲಾಗಿದೆ ಎಂದು ಮಂಗಳವಾರ ತಿರುವನಂತಪುರಂನಲ್ಲಿ ಅವರು ಬಹಿರಂಗಪಡಿಸಿದರು.
ಬಜರಂಗ ದಳದ ದೂರಿನ ಆಧಾರದ ಮೇಲೆ ಬಂಧನ ನಡೆದಿದೆ ಎಂದು ಪತ್ರಕರ್ತರು ನೆನಪಿಸಿದಾಗ, ಆ ಸಂಘಟನೆಯ ಕ್ರಮಗಳನ್ನು ಖಂಡಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಚಂದ್ರಶೇಖರ್, “ಅನ್ಯಾಯವಾಗಿ ಯಾರು ವರ್ತಿಸಿದರೂ ಬಿಜೆಪಿ ಅದನ್ನು ಬಲವಾಗಿ ಖಂಡಿಸುತ್ತದೆ” ಎಂದು ಉತ್ತರಿಸಿದರು.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಯುಡಿಎಫ್ ಸಂಸದರ ತಂಡವು ಛತ್ತೀಸ್‌ಗಢದ ದುರ್ಗ್ ಕೇಂದ್ರ ಕಾರಾಗೃಹದಲ್ಲಿರುವ ಸನ್ಯಾಸಿನಿಯರನ್ನು ಭೇಟಿಯಾಯಿತು. ನಂತರ ಆ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿತು.
ಇದಕ್ಕೂ ಮೊದಲು, ಜೈಲಿನೊಳಗೆ ಪ್ರವೇಶ ನೀಡದ ಕಾರಣ, ಸಂಸದರ ತಂಡವು ಜೈಲಿನ ಹೊರಗೆ ಧರಣಿ ನಡೆಸಿತು. ಜೈಲಿನಲ್ಲಿರುವ ಸನ್ಯಾಸಿನಿಯರನ್ನು ಭೇಟಿಯಾಗಲು ತೆರಳಿದ್ದ ಎಡಪಕ್ಷಗಳ ನಾಯಕರಿಗೆ ಕಾರಾಗೃಹ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಆರೋಪಿಸಿದರು.
ಬಜರಂಗ ದಳದ ಸುಳ್ಳು ದೂರಿನ ಆಧಾರದ ಮೇಲೆ ಛತ್ತೀಸ್‌ಗಢ ಸರ್ಕಾರವು ಕ್ರೈಸ್ತ ಸನ್ಯಾಸಿನಿಯರನ್ನು ಬಂಧಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದರು. ಕ್ರೈಸ್ತರ ಮೇಲೆ ಸಂಘ ಪರಿವಾರದ ಕಿರುಕುಳಕ್ಕೆ ಇದು ಮತ್ತೊಂದು ನಿದರ್ಶನ ಎಂದು ಅವರು ಬಣ್ಣಿಸಿದರು. ಆದರೆ, ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಸೂಕ್ತ ಸಾಕ್ಷ್ಯಗಳ ಆಧಾರದ ಮೇಲೆಯೇ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಪ್ರಕರಣ ದಾಖಲಿಸಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.