ನನಗೆ ಜೀವಬೆದರಿಕೆ ಹಾಕುವ ಬದಲು ಕುರಾನಿನ ಪುಟಗಳನ್ನು ಹರಿದುಹಾಕಿ’: ಪ್ರವಾದಿ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್

ಲಕ್ನೋ: ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಉತ್ತರ ಪ್ರದೇಶ ಮೂಲದ ಮುಸ್ಲಿಂ ಹೋರಾಟಗಾರ್ತಿ ಹಾಗೂ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್, ನಿರಂತರ ಜೀವಬೆದರಿಕೆಗಳು ಬರುತ್ತಿವೆ ಎಂದು ಬಹಿರಂಗಪಡಿಸಿದ್ದಾರೆ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವ ಅವರು, ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳಲ್ಲಿ ಬರೆದಿರುವ ವಿಷಯಗಳನ್ನಷ್ಟೇ ತಾವು ಪ್ರಸ್ತಾಪಿಸಿರುವುದಾಗಿ ಹೇಳಿದ್ದಾರೆ.

ದೈನಿಕ್ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾಜಿಯಾ, “ಕುರಾನ್‌ನಲ್ಲಿ ಏನಿದೆಯೋ ಅದನ್ನಷ್ಟೇ ನಾನು ಹೇಳುತ್ತಿದ್ದೇನೆ. ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನಾನು ಹೇಳಿದ್ದು ತಪ್ಪಾಗಿದ್ದರೆ, ಅಂತಹ ಹೇಳಿಕೆಗಳಿರುವ ಕುರಾನ್‌ನ ಪುಟಗಳನ್ನು ಹರಿದುಹಾಕಲಿ. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವುದರಿಂದ ಯಾರಿಗೇನು ಸಿಗುತ್ತದೆ?” ಎಂದು ಸವಾಲು ಹಾಕಿದ್ದಾರೆ. ಪ್ರವಾದಿ ಮತ್ತು ಆಯಿಷಾ ಅವರ ವಿವಾಹದ ಕುರಿತು ನಾಲ್ಕು ಅಧಿಕೃತ ಹದೀಸ್‌ಗಳಲ್ಲಿ ಉಲ್ಲೇಖಿಸಿರುವ ಅಂಶಗಳನ್ನೇ ತಾವು ಹೇಳಿದ್ದು, ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಖಾನ್, ಮನುಸ್ಮೃತಿಯನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವ ರಾಹುಲ್ ಗಾಂಧಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಹಿಂದೂ ಧಾರ್ಮಿಕ ಗ್ರಂಥಗಳನ್ನು ಪ್ರಶ್ನಿಸುವ ಗಾಂಧಿ, ಕುರಾನ್‌ನಲ್ಲಿ ಬರೆದಿರುವ ವಿಷಯಗಳ ಬಗ್ಗೆಯೂ ಮಾತನಾಡಲಿ ಎಂದು ಆಗ್ರಹಿಸಿ, ಮುಸ್ಲಿಂ ಮೌಲ್ವಿಗಳ ವಿವಾದಾತ್ಮಕ ಮಾತುಗಳನ್ನು ಕಡೆಗಣಿಸುವ ರಾಹುಲ್ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ತಾವು ಮುಸ್ಲಿಂ ಹಿನ್ನೆಲೆಯಿಂದ ಬಂದಿದ್ದರೂ ಅಲ್ಪಸಂಖ್ಯಾತೆ ಎಂದು ಭಾವಿಸುವುದಿಲ್ಲ, ತಮ್ಮ ಸಂಸ್ಕೃತಿ ಮತ್ತು ಆಚರಣೆಗಳು ಸನಾತನ ಧರ್ಮಕ್ಕೆ ಹೊಂದಿಕೊಂಡಿವೆ ಎಂದರು.

ಮುಸ್ಲಿಂ ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಲು, ತ್ರಿವಳಿ ತಲಾಖ್, ಬಾಲ್ಯವಿವಾಹ ಹಾಗೂ ಮದರಸಾಗಳಲ್ಲಿನ ಅಕ್ರಮಗಳ ವಿರುದ್ಧ ತಾವು ಧ್ವನಿ ಎತ್ತುತ್ತಿರುವುದಾಗಿ ತಿಳಿಸಿದ ನಾಜಿಯಾ, ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಕುರಿತು ತಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿಕೊಂಡರು. ವಕ್ಫ್ ಮಂಡಳಿಯ ವ್ಯವಸ್ಥೆಯನ್ನು ‘ಲ್ಯಾಂಡ್ ಜಿಹಾದ್’ನ ಜೀವಂತ ಉದಾಹರಣೆ ಎಂದು ಕರೆದರು. ಜೂನ್ ತಿಂಗಳಲ್ಲಿ ಪಾಡ್‌ಕಾಸ್ಟ್‌ವೊಂದರಲ್ಲಿ ಅವರು ನೀಡಿದ್ದ ಹೇಳಿಕೆ ವೈರಲ್ ಆದ ಬಳಿಕ ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಮತ್ತು ಹೈದರಾಬಾದ್ ಸೇರಿದಂತೆ ಹಲವೆಡೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿ ಪ್ರತಿಭಟನೆಗಳು ನಡೆದಿದ್ದವು.

Related Articles

ಇತ್ತೀಚಿನ ಸುದ್ದಿಗಳು