Sunday, January 11, 2026

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್ ಸಂಕೋಳ್ ಆತ್ಮಹತ್ಯೆ – ಕುಟುಂಬ ಕಲಹ ಶಂಕೆ

ದಾವಣಗೆರೆ: ದಾವಣಗೆರೆ ಪಾಲಿಕೆಯ ಬಿಜೆಪಿ ಮಾಜಿ ಸದಸ್ಯ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ್ ಸಂಕೋಳ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದ ಹೊರವಲಯದಲ್ಲಿರುವ ತಮ್ಮದೇ ಜಮೀನಿನಲ್ಲಿ, ತಮ್ಮದೇ ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಚಂದ್ರಶೇಖರ್ ಸಂಕೋಳ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರಿನೊಳಗೆ ಟಯರ್‌ಗಳನ್ನು ಇಟ್ಟುಕೊಂಡು ಬೆಂಕಿ ಹಚ್ಚಿಕೊಂಡಿರುವುದರಿಂದ ಕಾರು ಹಾಗೂ ಮೃತದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿ ಭೀಕರ ದೃಶ್ಯ ಕಂಡುಬಂದಿದೆ.

ಘಟನೆಯ ಕೆಲ ಸಮಯದ ಮೊದಲು ಚಂದ್ರಶೇಖರ್ ಸಂಕೋಳ್ ಅವರ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಆತ್ಮಹತ್ಯೆ ಯತ್ನದ ವಿಚಾರ ತಿಳಿದು ತೀವ್ರ ಮನನೊಂದಿದ್ದ ಚಂದ್ರಶೇಖರ್ ಸಂಕೋಳ್ ಈ ದುಡುಕಿನ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಶಾಮನೂರು ಗ್ರಾಮದಲ್ಲಿ ಸಿಮೆಂಟ್ ಹಾಗೂ ಕಬ್ಬಿಣದ ಅಂಗಡಿ ನಡೆಸುತ್ತಿದ್ದ ಚಂದ್ರಶೇಖರ್ ಸಂಕೋಳ್ ಜಿಲ್ಲೆಯಾದ್ಯಂತ ಪರಿಚಿತ ಉದ್ಯಮಿಯಾಗಿದ್ದರು. ಬಿಜೆಪಿ ಪಕ್ಷದ ಪ್ರಮುಖ ಮುಖಂಡರಾಗಿದ್ದ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅಡಿಕೆ ತೋಟಗಳು, ವಾಣಿಜ್ಯ ಕಾಂಪ್ಲೆಕ್ಸ್‌ಗಳನ್ನೂ ಹೊಂದಿದ್ದ ಅವರು, ಇತ್ತೀಚೆಗೆ ಸಾಲದ ಒತ್ತಡದಲ್ಲಿದ್ದರು ಎನ್ನಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆಪ್ತರು ಸ್ಥಳಕ್ಕೆ ಧಾವಿಸಿ ಕಣ್ಣೀರಿಟ್ಟರು. “ದುಡುಕುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು” ಎಂದು ಶೋಕ ವ್ಯಕ್ತಪಡಿಸಿದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇನ್ನು ಹದಡಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಸೊಕೋ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಕ್ರೈಂ ಸೀನ್ ರಿಕ್ರಿಯೇಷನ್ ಮಾಡಲಾಗುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕುಟುಂಬ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದು ಅಥವಾ ಮಕ್ಕಳ ಆತ್ಮಹತ್ಯೆ ಯತ್ನದ ಹಿನ್ನೆಲೆ ಮನನೊಂದು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪ್ರಕರಣದ ನಿಖರ ಕಾರಣ ತನಿಖೆ ಬಳಿಕ ತಿಳಿಯಲಿದೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page