ಯಲ್ಲಾಪುರ: ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಹಾಗೂ ಬೆಂಬಲಿಗರು ಗುರುವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ, ಬನವಾಸಿ ಬ್ಲಾಕ್ ಸಂಯುಕ್ತಾಶ್ರಯದಲ್ಲಿ ಕಾರ್ಯಕರ್ತರ ಸಮಾವೇಶ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಮಾವೇಶದಲ್ಲಿ ವಿವೇಕ್ ಹೆಬ್ಬಾರ್ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿನಾಥ ಗಾಂವಕರ ಅವರು ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಇದೇ ವೇಳೆ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಉಸ್ತುವಾರಿ ಶಂಕರಗೌಡ ಪಾಟೀಲ, ಪ್ರಮುಖರಾದ ವೆಂಕಟೇಶ ಹೆಗಡೆ, ಸತೀಶ ನಾಯ್ಕ, ಆರ್.ಎಚ್.ನಾಯ್ಕ, ರಾಮಕೃಷ್ಣ ಮೂಲಿಮನಿ, ರವಿ ನಾಯ್ಕ, ದ್ಯಾಮಣ್ಣ ದೊಡ್ಮನಿ, ಸಿ.ಎಫ್.ನಾಯ್ಕ, ಪ್ರಕಾಶ ಹೆಗಡೆ ಮುಂತಾದವರು ಕಾರ್ಯಕ್ರಮದಲ್ಲಿ ಊಪಸ್ಥಿತರಿದ್ದರು.
ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಕಳೆದ ಹಲವಾರು ತಿಂಗಳಿಂದ ರಾಜ್ಯಾದ್ಯಂತ ಕೇಳಿ ಬರುತ್ತಿದೆ, ಶಿವರಾಮ ಹೆಬ್ಬಾರ ಕೂಡ ಹಲವಾರು ವೇದಿಕೆಗಳಿಗೆ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಈಗ ಸ್ವತಃ ಅವರ ಮಗನೇ ಕಾಂಗ್ರೆಸ್ ಸೇರಿರುವುದರಿಂದ ಈ ಸುದ್ದಿಗೆ ಮತ್ತಷ್ಟು ಬಲ ಬಂದಿದೆ.
ಲೋಕ ಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ವಿವೇಕ್ ಹೆಬ್ಬಾರ ಅವರ ಈ ನಡೆ ಲೋಕಸಭಾ ಅಬ್ಯರ್ಥಿ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ಸ್ಪರ್ಧೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ,