Wednesday, August 27, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಮೊನ್ನೆ ಬಿಜೆಪಿ ಸೇರಿದ್ದ ಅಶೋಕ್ ಚವ್ಹಾಣ್‌ಗೆ ಟಿಕೇಟ್

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಅಶೋಕ್ ಚವ್ಹಾಣ್ ಅವರಿಗೆ ಮಹಾರಾಷ್ಟ್ರದಿಂದ ಟಿಕೇಟ್‌ ನೀಡಲಾಗಿದೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವ್ಹಾಣ್‌ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಮಹಾರಾಷ್ಟ್ರದಿಂದ ಚವ್ಹಾಣ್‌ ಸೇರಿದಂತೆ ಮೇಧಾ ಕುಲಕರ್ಣಿ, ಅಜಿತ್ ಗೋಪ್ಛಡೆ ಸ್ಪರ್ಧಿಸಲಿದ್ದಾರೆ. ಒಟ್ಟು 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ.

ಗುಜರಾತ್‌ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಗೋವಿಂದಭಾಯಿ ಧೋಲಾಕಿಯಾ, ಮಾಯಾಂಕ್ ಭಾಯ್ ನಾಯಕ್‌, ಮತ್ತು ಡಾ. ಜಶ್ವಂತ್‌ ಸಿನ್ಹ ಪರ್ಮಾರ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಧ್ಯಪ್ರದೇಶದಿಂದ ಕೇಂದ್ರ ಸಚಿವ ಎಲ್. ಮುರುಗನ್, ಉಮೇಶ್‌ನಾಥ್ ಮಹಾರಾಜ್, ಮಾಯಾ ನರೋಲಿಯಾ, ಬನ್ಸಿಲಾಲ್‌ ಗುರ್ಜರ್ ಹಾಗೂ ಒಡಿಶಾದಿಂದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈಗಾಗಲೇ ಟಿಕೆಟ್‌ ಘೋಷಿಸಿದೆ. ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ.

ಕೇಂದ್ರದ ಮಾಜಿ ಸಚಿವ ಆರ್‌.ಪಿ.ಎನ್. ಸಿಂಗ್, ಉತ್ತರಾಖಂಡ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಇದೆ.

ರಾಜ್ಯಸಭೆಯ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಕೇಂದ್ರ ಸಚಿವರಲ್ಲಿ ಯಾರೊಬ್ಬರ ಹೆಸರೂ ಪಟ್ಟಿಯಲ್ಲಿ ಇಲ್ಲ. ಇವರಲ್ಲಿ ಹೆಚ್ಚಿನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page