Thursday, September 25, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ-ಆರ್‌ಎಸ್‌ಎಸ್ ದೇಶದ ಆತ್ಮವನ್ನು ನಾಶ ಮಾಡಲು ಹೊರಟಿವೆ, ನಾವು ಅದನ್ನು ತಡೆಯಲು ಹೋರಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ-ಆರ್‌ಎಸ್‌ಎಸ್ ದೇಶದ ಆತ್ಮವನ್ನು ಅಳಿಸಿಹಾಕಲು ಬಯಸುತ್ತಿವೆ, ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಹೋರಾಟ ಕೇವಲ ಚುನಾವಣೆಗಳಿಗಾಗಿ ಅಲ್ಲ, ಬದಲಾಗಿ ಭಾರತವನ್ನು ಉಳಿಸಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ. ಬಿಹಾರದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅನ್ಯಾಯದ ವಿರುದ್ಧ ಸದಾ ಹೋರಾಡಿದ ಪಾಟ್ನಾದ ನೆಲದಲ್ಲಿ ನಿಂತು ಮಾತನಾಡಿದ ಸಿದ್ದರಾಮಯ್ಯ, “ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಬಹಳ ಮಹತ್ವ ಪಡೆದಿದೆ. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯವನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮತ್ತು ಅವರ ಸಿದ್ಧಾಂತದ ಗುರುಗಳಾದ ಆರ್‌ಎಸ್‌ಎಸ್ ಹತ್ತಿಕ್ಕುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಭಾರತವು ಇಂದು ಆತ್ಮವಂಚನೆಯ ನೆರಳಿನಲ್ಲಿ ಬದುಕುತ್ತಿದೆ. ಸಂಸ್ಥೆಗಳನ್ನು ವಶಪಡಿಸಿಕೊಂಡು, ಸ್ವಾತಂತ್ರ್ಯವನ್ನು ಕಡಿತಗೊಳಿಸಲಾಗುತ್ತಿದೆ ಮತ್ತು ಜನರ ಜನಾದೇಶವನ್ನು ಕದಿಯಲಾಗುತ್ತಿದೆ. ಇಲ್ಲಿನ ‘ಡಬಲ್ ಇಂಜಿನ್ ಸರ್ಕಾರ’ ನಮ್ಮ ಪ್ರಜಾರಾಜ್ಯದ ಆತ್ಮವನ್ನೇ ಘಾಸಿಗೊಳಿಸುವ ಎರಡು ಅಲುಗುಗಳ ಕತ್ತಿಯಾಗಿದೆ. ಚುನಾವಣೆಗಳನ್ನು ಕದಿಯುವ ಮೂಲಕ ಬಿಜೆಪಿ ದೇಶಾದ್ಯಂತ ‘ಮತ ಕಳ್ಳತನ’ ದಲ್ಲಿ ತೊಡಗಿದೆ. ಶಾಸಕರನ್ನು ಖರೀದಿಸುವುದು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದು ಅವರ ಕೆಲಸವಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿಯವರು ಕರ್ನಾಟಕದ ಮಹದೇವಪುರ ಮತ್ತು ಆಳಂದ್‌ನಲ್ಲಿ ನಡೆದ ‘ಮತ ಕಳ್ಳತನ’ ವನ್ನು ಬಹಿರಂಗಪಡಿಸಿದರು. ಚುನಾವಣಾ ಅಕ್ರಮಗಳ ವಿರುದ್ಧ ಅವರ ಅವಿರತ ಹೋರಾಟವು ನ್ಯಾಯಯುತ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ನೀಡಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು. ಇತ್ತೀಚೆಗೆ ಬಿಹಾರದಲ್ಲಿ ಕಾಣುತ್ತಿರುವ ‘ಎಸ್ಐಆರ್’ (SIR) ದುರಂತವು ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಇಳಿಯುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ದೇಶೀಯವಾಗಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಮೋದಿ ಸರ್ಕಾರ ವಿದೇಶಾಂಗ ನೀತಿಯಲ್ಲಿಯೂ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. “ಒಂದು ಕಾಲದಲ್ಲಿ ಜಾಗತಿಕವಾಗಿ ಗೌರವಿಸಲ್ಪಟ್ಟ ಭಾರತದ ವಿದೇಶಾಂಗ ನೀತಿ, ಇಂದು ಮೌನ ಮತ್ತು ಅಧೀನ ಸ್ಥಿತಿಗೆ ಕುಸಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ನಾನು ಮಾಡಿದ್ದಾಗಿ ನಾಚಿಕೆಯಿಲ್ಲದೆ ಹೇಳಿಕೊಂಡಾಗ, ಮೋದಿ ಒಂದೂ ಮಾತೂ ಆಡಲಿಲ್ಲ. ಇದು ರಾಜತಾಂತ್ರಿಕತೆ ಅಲ್ಲ. ಇದು ನಮ್ಮ ಸಾರ್ವಭೌಮತ್ವದೊಂದಿಗೆ ಮಾಡಿಕೊಂಡ ರಾಜಿ. ಇಂತಹ ವೈಫಲ್ಯಗಳು ನಮ್ಮ ಮಿತ್ರರನ್ನು ಶತ್ರುಗಳನ್ನಾಗಿ ಮಾಡುತ್ತಿವೆ ಮತ್ತು ದೇಶವನ್ನು ಅಸ್ಥಿರಗೊಳಿಸಲು ಶತ್ರುಗಳನ್ನು ಒಗ್ಗೂಡಿಸುತ್ತಿವೆ” ಎಂದು ಅವರು ಹೇಳಿದರು.

“ಉದ್ಯೋಗಾವಕಾಶಗಳು ಮತ್ತು ವ್ಯಾಪಾರದ ನಷ್ಟಕ್ಕೆ ಹಾಗೂ ಮಿತ್ರರನ್ನು ಕಳೆದುಕೊಂಡಿರುವುದಕ್ಕೆ ಮೋದಿಯವರೇ ನೇರ ಹೊಣೆಗಾರರು. ಭಾರತವು ಸರ್ವಾಧಿಕಾರದ ನೆರಳಿನಲ್ಲಿ ಬದುಕುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ವಶಕ್ಕೆ ಪಡೆಯುವುದು, ಮತಾದೇಶವನ್ನು ಕದಿಯುವುದು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದು ಬಿಜೆಪಿಯ ಕೆಲಸ” ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page