Saturday, June 15, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಸಚಿವನ ಅಭಿವೃದ್ಧಿಯ ರಾಜಮಾರ್ಗ : ಸವಾಲೆಸಗಿದ ಹೆಚ್‌ಡಿಕೆ

ಬೆಂಗಳೂರು : ಅಭಿವೃದ್ಧಿ ರಾಜಮಾರ್ಗದ ಮತ್ತು ರಾಜಕೀಯ ಅಧಿಕಾರದ ಬಗ್ಗೆ ವೇದಾಂತ ಹೇಳಿದ ಬಿಜೆಪಿ ಸಚಿವ ಡಾ. ಸಿ ಎನ್‌ ಅಶ್ವತ್‌ ನಾರಾಯಣ್‌ ಅವರಿಗೆ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್‌ ಮುಖಾಂತರ ಪ್ರಶ್ನಾ ಸುರಿಮಳೆ ಸುರಿಸಿ ಸವಾಲೆಸಗಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ಹೆಚ್‌ ಡಿ ಕುಮಾರಸ್ವಾಮಿಯವರು “ಅಭಿವೃದ್ಧಿ ಕೆಲಸ ಎಂದರೇನು? ಅಶ್ವತ್‌ ನಾರಾಯಣ್‌ ಅವರೇ,  ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೇ ಅನುಭವವೇ ಇದೆ. ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ʼಕಳ್ಳಮಾರ್ಗʼದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ʼರಾಜಮಾರ್ಗʼ” ಎಂದು ಪ್ರಶ್ನಾ ಮಳೆಯನ್ನು ಸುರಿಸಿದ್ದಾರೆ.

“ʼಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂದು ನಾನು ಭಾವಿಸಿದ್ದಿದ್ದರೆ ನೀವು ಮಲ್ಲೇಶ್ವರದಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಇನ್ನು; ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ” ಎಂದು ಹೇಳಿ ಟೀಕಿಸಿದ್ದಾರೆ.

ರಾಜಕೀಯದ ಅಧಿಕಾರದ ವೇದಾಂತ ಮಾತನಾಡಿದ ಅಶ್ವತ್‌ ನಾರಾಯಣ್‌ ಅವರಿಗೆ “ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ, ಹೌದು. ಆದರೆ ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ? ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ ʼಅಡ್ಡಮಾರ್ಗʼ ಹಿಡಿದಿದ್ದು ಏಕೆ? ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್‌ ಕಮಲದ ಸರಕಾರ ಮಾಡಿದ್ದು ಯಾಕೆ? ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ ಎಂದು ಅಶ್ವತ್‌ ನಾರಾಯಣ್‌ರವರ ರಾಜಕೀಯ ಅಡ್ಡಮಾರ್ಗದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ʼಅಶ್ವತ್‌ ನಾರಾಯಣ್‌ ಅವರೇ, ಬಿಜೆಪಿ ಸರಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ. ʼಎಂಎಲ್‌ಸಿ ಕೋರಿಕೆ ಮೇರೆಗೆ…ʼ ಎಂದು ಬಿಡುಗಡೆ ಮಾಡಿದ 50 ಕೋಟಿ ರೂ ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ ಎಂದು ಬಿಜೆಪಿಯವರ ಅಭಿವೃದ್ಧಿ ಬಗ್ಗೆ ಟ್ವೀಟ್‌ ಮಾಡಿದ ಹೆಚ್‌ಡಿ ಕುಮಾರಸ್ವಾಮಿಯವರು ಸಚಿವ ಡಾ. ಸಿ ಎನ್‌ ಅಶ್ವತ್‌ ನಾರಾಯಣ್‌  ಅವರಿಗೆ ಸವಾಲೆಸಗಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ಮಹಾತ್ಮ ಗಾಂಧಿ- ಕಸ್ತೂರ್ಬಾ ಅವರ ದಾಂಪತ್ಯ ಹೇಗಿತ್ತು ಗೊತ್ತೆ? ಕಸ್ತೂರ್ಬಾ ಅವರ ಕೊನೆಯ ಆಸೆ ಏನಾಗಿತ್ತು? ಗಾಂಧೀಜಿ ಅದನ್ನು ಈಡೇರಿಸಿದರೆ? ಈ ಮನಕಲಕುವ ವಿವರಗಳನ್ನು ಬಿಡಿಸಿಟ್ಟಿದ್ದಾರೆ ಚಿಂತಕ ನಿಕೇತ್ ರಾಜ್ ಮೌರ್ಯ.

Related Articles

ಇತ್ತೀಚಿನ ಸುದ್ದಿಗಳು