ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಜನರು ಪರದಾಡುವಂತಾಗಿದ್ದು, ಬಿಜೆಪಿ ಸರ್ಕಾರ ಮತ್ತು ಸಚಿವರ ನಿರ್ಲಕ್ಷ್ಯದ ಕುರಿತು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಸವರಾಜ ಬೊಮ್ಮಾಯಿ ಅವರೇ, ಅಧಿಕಾರದಲ್ಲಿದ್ದು ಕಾಂಗ್ರೆಸ್ ದೂಷಣೆ ಮಾಡುವ ಬದಲು ನಿಮ್ಮವರು ಏನು ಮಾಡ್ತಿದಾರೆ ನೋಡಿಕೊಳ್ಳಿ. ಒಬ್ಬ ಸಚಿವರು ಪ್ರವಾಹ ಪರಿಹಾರ ಸಭೆಯಲ್ಲಿ ನಿದ್ದೆ ಮಾಡ್ತಿದ್ದಾರೆ, ಮತ್ತೊಬ್ಬ ಸಂಸದರು ಬೆಣ್ಣೆದೋಸೆ ತಿನ್ನುತ್ತಿದ್ದಾರೆ. ಇನ್ನುಳಿದ ಸಚಿವರುಗಳು ನಾಪತ್ತೆಯಾಗಿದ್ದಾರೆ, ಇದನ್ನೆಲ್ಲ ಮಾಡಲು ಕಾಂಗ್ರೆಸ್ ಹೇಳಿತ್ತಾ?ಎಂದು ಪ್ರಶ್ನಿಸಿದೆ.
ಬೆಂಗಳೂರಿನ ಅವಾಂತರಕ್ಕೆ ಕಾಂಗ್ರೆಸ್‌ನ್ನು ದೂಷಿಸುವ ಸಿಎಂ ಮಾತು ‘ಕುಣಿಲಾರದವರು ನೆಲ ಡೊಂಕು’ ಎನ್ನುವಂತಿದೆ. ಬೆಂಗಳೂರಿಗೆ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ವಿಶೇಷಣಗಳು ಸಿಕ್ಕಿದ್ದು ಕಾಂಗ್ರೆಸ್ ಶ್ರಮದಿಂದ, ಇದ್ದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ. ಇಂತಹ ಭವ್ಯ ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ್ದು ನಿಮ್ಮ 50% ಕಮಿಷನ್ ದಾಹ ಅಲ್ಲವೇ. ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬೊಮ್ಮಾಯಿ ಅವರೇ, ಕಳೆದ ವರ್ಷವೇ ರಾಜಕಾಲುವೆ ಅಭಿವೃದಿಗಾಗಿ ₹1500 ಕೋಟಿ ಘೋಷಿಸಿದ್ದಿರಿ, ಆದರೆ ಕೊಟ್ಟಿದ್ದು ₹400 ಕೋಟಿ ಮಾತ್ರ. ಅದರಲ್ಲೂ ಈಗ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದೀರಿ. ಈ ವಿಳಂಬ ಮಾಡಲು ಕಾಂಗ್ರೆಸ್ ಹೇಳಿತ್ತೆ? ಉಳಿದ ₹1100 ಕೋಟಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ? ರಾಜಕಾಲುವೆ ಅಭಿವೃದ್ಧಿ ನಿಮಗೆ ಬೇಕಿರಲಿಲ್ಲ ಅಲ್ಲವೇ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯನ್ನು ಟೀಕಿಸಿದೆ.