Monday, June 17, 2024

ಸತ್ಯ | ನ್ಯಾಯ |ಧರ್ಮ

ಪುತ್ತೂರಿನ ಬಂಡಾಯಕ್ಕೆ ಬೆಚ್ಚಿಬಿದ್ದ ಬಿಜೆಪಿ

ಬಿಜೆಪಿಯ ಮಾನದಂಡದ ರೀತಿಯಲ್ಲೆ ಯಂಗ್, ಎನರ್ಜೆಟಿಕ್ ಮುಖವನ್ನು ತರಲು ಬಿಜೆಪಿಗೆ ಸಾಧ್ಯ ಆಗಲಿಲ್ಲ. ಸುಳ್ಯದಲ್ಲಿ ಕೂಡ ಇದೇ ಕತೆ. ಪುತ್ತೂರಿನಲ್ಲಿ ಬ್ರಾಹ್ಮಣ ಬಂಡಾಯದ ಸೂಚನೆ ಇದ್ದ ಹೊರತಾಗಿಯೂ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರಂತಹ ಅಸಾಮಾನ್ಯ ಕಾರ್ಯಕರ್ತನ ಹೆಸರು ಯಾರಿಗೂ ನೆನಪಿಗೆ ಬರಲಿಲ್ಲ – ನವೀನ್‌ ಪುತ್ತೂರು.

ಮಂಗಳೂರು ಉತ್ತರ (ಸುರತ್ಕಲ್) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಎದುರಿಸುತ್ತಿರುವ ಸ್ಥಿತಿಗಿಂತಲೂ ಹೀನಾಯವಾಗಿದೆ ಪುತ್ತೂರಿನಲ್ಲಿ ಡಬಲ್ ಎಂಜಿನ್ ಸರಕಾರ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿಯ ದುಸ್ಥಿತಿ.

ಪುತ್ತೂರಿನಲ್ಲಿ ಸಂಘಪರಿವಾರದವರೇ ಸೃಷ್ಟಿಸಿಕೊಂಡ ಸಮಸ್ಯೆ ಇದು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಒಂದು ಸೀಟು ಗೆಲ್ಲಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಒಂದು ಸೀಟು ಹೆಚ್ಚು ಗೆಲ್ಲಲು ಅಶೋಕ್ ಕುಮಾರ್ ರೈ ಕೊಡಿಂಬಾಡಿ ಸಹಾಯ ಮಾಡುವುದು ಖಚಿತವಾಗಿದೆ.

ಈಗ ಪುತ್ತೂರಿನಲ್ಲಿ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಅಲ್ಲ ಎಂದು ಪುತ್ತೂರಿನ ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗದ ಯುವಕರು ಹೇಳುತ್ತಾರೆ. ಅರುಣ್ ಪುತ್ತಿಲ ಎಂಬ ಬ್ರಾಹ್ಮಣ ಯುವಕನ ಹವಾ ಜಾಸ್ತಿ ಇರುವುದೇ ದಲಿತ ಕಾಲೋನಿಗಳಲ್ಲಿ ಮತ್ತು ಹಿಂದುಳಿದ ವರ್ಗದ ವಲಯದಲ್ಲಿ.

ಹಿಂದೂಗಳಿಗೆ ಟಿಕೇಟ್ ನೀಡುವ ಬಿಜೆಪಿ ಪುತ್ತೂರಿನ ಮಟ್ಟಿಗೆ ಅರೆಭಾಷೆ ಗೌಡರಿಗೆ ಮಣೆ ಹಾಕಿದೆ. ಈ ಸಮುದಾಯದ ಮತಗಳೇನು ದೊಡ್ಡ ಪ್ರಮಾಣದಲ್ಲಿ ಇಲ್ಲ. ಅರ್ಧ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯಕ್ಕೆ ಹೋಲಿಸಿದರೆ ಅದೊಂದು ಗಮನಾರ್ಹ ಓಟು ಬ್ಯಾಂಕ್ ಅಲ್ಲ. ಮಾತ್ರವಲ್ಲದೆ, ಬಹಿರಂಗವಾಗಿ ಹೇಳಿಕೊಳ್ಳಲು ಧರ್ಮ ರಾಜಕಾರಣ  ಮಾಡುವ ಬಿಜೆಪಿ ಓಟು ಬ್ಯಾಂಕಿಗಾಗಿಯೇ ಬಂಟ ಸಮುದಾಯಕ್ಕೆ ಹೆಚ್ಚು ಟಿಕೇಟ್ ನೀಡುತ್ತದೆ. ಈ ಸಮುದಾಯಗಳ ಮತಗಳು ಜಾತಿ ಆಧಾರದಲ್ಲಿ ಚಲಾವಣೆ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪುತ್ತೂರಿನಲ್ಲಿ ಮುಸ್ಲಿಂರ ನಂತರ ದೊಡ್ಡ ಸಂಖ್ಯೆಯ ಮತಗಳಿರುವುದು ದಲಿತರು, ಕಾಯಕ ವರ್ಗದ ಹಿಂದುಳಿದವರು ಮತ್ತು ಜನಿವಾರ ಹಾಕುವ ಸಮುದಾಯಗಳವರದ್ದು. ಎಲ್ಲವನ್ನು ಒಟ್ಟು ಸೇರಿಸಿದಾಗ ಗಮನಾರ್ಹ ಮತ ಬ್ಯಾಂಕ್ ಆಗುತ್ತದೆ. ಈ ಕಾರಣಕ್ಕಾಗಿಯೇ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅರುಣ್ ಪುತ್ತಿಲ ಚುನಾವಣಾ ಸ್ಪರ್ಧೆ ಮಹತ್ವ ಪಡೆದುಕೊಂಡಿದೆ. ಆದರೆ, ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿರುವ ಬ್ರಾಹ್ಮಣರ ಸಂಖ್ಯೆಯು ಗಮನಾರ್ಹವಾಗಿದೆ.

ಅರುಣ್ ಪುತ್ತಿಲ

ಅರುಣ್ ಪುತ್ತಿಲ ಎಂಬ ಸಮಸ್ಯೆಯನ್ನು ಎಳೆದು ಹಾಕಿಕೊಂಡಿರುವುದು ಸಂಘಪರಿವಾರವೇ ಆಗಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಪರಿವಾರದ ಧರ್ಮ ರಾಜಕಾರಣ ಅರ್ಥಾತ್ ಮುಸ್ಲಿಂ ದ್ವೇಷ ರಾಜಕಾರಣ, ಮಾರಲ್ ಪೊಲೀಸಿಂಗ್, ಜಟ್ಕ ಹಲಾಲ್ ವಿವಾದ, ಮಸೀದಿ ವಿವಾದಗಳು ಇಂದು ಬಿಜೆಪಿಗೆ ತಿರುಗು ಬಾಣವಾಗಿದೆ. ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರು ಇಂದು ಬಿಜೆಪಿ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ. ಮಸೀದಿಗೆ ಕಲ್ಲು ಬಿಸಾಡುತ್ತಿದ್ದವರು ಇಂದು ದೇವಾಲಯಗಳಲ್ಲಿ ಅನಾಹುತ ಮಾಡುತ್ತಿದ್ದಾರೆ, ಹಿಂದೂಗಳಿಗೆ ಕಂಟಕ ಆಗುತ್ತಿದ್ದಾರೆ ಎಂದು ಈಗ ಸ್ವತಃ ಆರ್ ಎಸ್ ಎಸ್ ಮುಖಂಡರೇ ಹೇಳುತ್ತಿದ್ದಾರೆ.

ಎರಡನೆಯದಾಗಿ ಯಾಕೆ ಪುತ್ತಿಲ ಸ್ಪರ್ಧೆಗೆ ಈಳಿಯಲು ಕಾರಣವಾಗಿದ್ದು? ಕಳೆದ ಬಾರಿಯ ಚುನಾವಣೆಗೆ ಮುನ್ನ ಕೆಲಸ ಮಾಡಿ ಎಂದು ಪುತ್ತಿಲಗೆ ಸೂಚನೆ ನೀಡಿದ್ದು ಇದೇ ಪರಿವಾರದ ಮುಖಂಡರು. ಇದೊಂದು ಚುನಾವಣಾ ತಂತ್ರ. ಚುನಾವಣೆಗೆ ಕೆಲವು ತಿಂಗಳು ಇರುವಾಗ ಒಂದಿಬ್ಬರು ಕೆಲಸ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಕೊನೆಗೆ ತಮಗೆ ಬೇಕಾದವರಿಗೆ, ದೆಹಲಿಯಲ್ಲಿ ಪಾಸಾದವರಿಗೆ ಟಿಕೇಟ್ ದೊರೆಯುತ್ತದೆ. ಕಳೆದ ಬಾರಿ ಹೀಗೇ ಆಯಿತು. ಪುತ್ತಿಲ ತನ್ನ ಸಂಗಡಿಗರೊಂದಿಗೆ ಫೀಲ್ಡ್ ಮಾಡಿದ್ದೇ ಮಾಡಿದ್ದು, ಟಿಕೇಟ್ ತನಗೆ ಖಚಿತ ಎಂಬಂತಿತ್ತು ಪುತ್ತಿಲ ಕ್ಷೇತ್ರ ಸಂಪರ್ಕ.

ಅಶೋಕ್ ಕುಮಾರ್ ರೈ

ಮೊಗವೀರರು, ಬಿಲ್ಲವರೊಂದಿಗೆ ತಮ್ಮ ಓಟ್ ಬ್ಯಾಂಕ್  ಮಾಡಿಕೊಂಡಿರುವ ಅರೆ ಭಾಷೆ ಗೌಡರನ್ನು ಬಿಜೆಪಿ ಒಲೈಸುವುದು ಅನಿವಾರ್ಯ ಆಗಿತ್ತು. ಸಾಲದಕ್ಕೆ ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಎಂಬಿಬ್ಬರು ಇದೇ ಸಮುದಾಯದ ಪ್ರಭಾವಿ ಮುಖಂಡರು ಬಿಜೆಪಿಯಲ್ಲಿದ್ದಾರೆ. ಹಾಗೇ ಸಂಜೀವ ಮಠಂದೂರು ಎಂಬ ಸಂಘದ ವ್ಯಕ್ತಿ ಮತ್ತೊಂದು ಬಾರಿ ಚುನಾವಣೆಗೆ ನಿಂತು ಗೆದ್ದು ಶಾಸಕರಾದರು. ಆದರೆ, ಅಧಿಕಾರ ಮಾಡಿದವರು ಬೇರೆಯೇ.

ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಇದೇ ಮೊದಲಲ್ಲ. ಈ ಹಿಂದೆ ಮಾಜಿ ಬಿಜೆಪಿ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಟಿಕೇಟ್ ನೀಡಲಿಲ್ಲ ಎಂದು ಮಾಜಿ ಶಾಸಕರಾದ ದಿ. ಉರಿಮಜಲು ರಾಮ್‌ ಭಟ್ ಅವರ ನೇತೃತ್ವದಲ್ಲಿ  ಶಕುಂತಳಾ ಶೆಟ್ಟಿ ಸ್ಪರ್ಧಿಸಿ ಗಮನಾರ್ಹ ಮತಗಳನ್ನು ಗಳಿಸಿದ್ದರು. ಇದರಿಂದಾಗಿ ಆನಂತರ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಸೇರಿ ಶಾಸಕಿಯಾದರು. ಹಾಗೇ ನೋಡಿದರೆ ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹಾಲು ನೀರಿನಂತೆ ಇದೆ. ಇಂದು ಪುತ್ತೂರಿನಲ್ಲಿ ಕಾಂಗ್ರೆಸ್ಸನ್ನು ಮುನ್ನಡೆಸುತ್ತಿರುವವರೇ ಬಿಜೆಪಿಯ ಸ್ವಾಭಿಮಾನಿಗಳು. ಬಿಜೆಪಿಯಲ್ಲಿ ಅಧಿಕಾರ ಚಲಾವಣೆ ಮಾಡುವವರು ಕಾಂಗ್ರೆಸ್ಸಿಗರು. ಹಾಲಿ ಬಿಜೆಪಿ ಶಾಸಕ ಸಂಜೀವಣ್ಣನ ಕಾರುಬಾರು ಎನೂ ನಡೆಯುತ್ತಿರಲಿಲ್ಲ!

ಇದನ್ನೂ ಓದಿ-https://peepalmedia.com/shettara-melata-joshige-sankata/ ಶೆಟ್ಟರ ಮೇಲಾಟ ಜೋಶಿಗೆ ಸಂಕಟ?

ಯಾವಾಗ ಸಂಜೀವಣ್ಣನಿಗೆ ಟಿಕೇಟ್ ಕೈತಪ್ಪಿತೊ ಆಗ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ನಾಯಕತ್ವ ಸೋತಿತು. ಬಿಜೆಪಿಯ ಮಾನದಂಡದ ರೀತಿಯಲ್ಲೆ ಯಂಗ್ ಎನರ್ಜೆಟಿಕ್ ಮುಖವನ್ನು ತರಲು ಬಿಜೆಪಿಗೆ ಸಾಧ್ಯ ಆಗಲಿಲ್ಲ. ಸುಳ್ಯದಲ್ಲಿ ಕೂಡ ಇದೇ ಕತೆ. ಪುತ್ತೂರಿನಲ್ಲಿ ಬ್ರಾಹ್ಮಣ ಬಂಡಾಯದ ಸೂಚನೆ ಇದ್ದ ಹೊರತಾಗಿಯೂ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರಂತಹ ಅಸಾಮಾನ್ಯ ಕಾರ್ಯಕರ್ತನ ಹೆಸರು ಯಾರಿಗೂ ನೆನಪಿಗೆ ಬರಲಿಲ್ಲ.

ಈಗ ಪುತ್ತೂರಿನಲ್ಲಿ ಮುಖಭಂಗದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಪರಿವಾರಕ್ಕೆ ಇನ್ನು ಸಮಯ ಇದೆಯಾ? ಕಾಂಗ್ರೆಸ್ಸನ್ನು ಸೋಲಿಸಲು ಆಗದಿದ್ದರು ಎರಡನೇ ಸ್ಥಾನ ಬಿಜೆಪಿ ಕಳಕೊಂಡರೆ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಕರಾವಳಿಯ ಪ್ರತಿಯೊಂದು ಊರಿನಲ್ಲು ಇಂತಹದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದನ್ನು ಸಂಪರ್ಕ ಚತುರರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗೆ ನೋಡಿದರೆ ಕಾಂಗ್ರೆಸ್ಸಿಗಿಂತಲೂ ಹಚ್ಚಿನ ಅಶಿಸ್ತಿನ ಪರಿಸ್ಥಿತಿ ಇದಾಗಿದೆ.

ನವೀನ್‌ ಪುತ್ತೂರು

ರಾಜಕೀಯಾಸಕ್ತರು

ಇದನ್ನೂ ಓದಿ-ಸಂಘಪರಿವಾರದ ಹೆಣ ರಾಜಕಾರಣ

Related Articles

ಇತ್ತೀಚಿನ ಸುದ್ದಿಗಳು