Tuesday, February 11, 2025

ಸತ್ಯ | ನ್ಯಾಯ |ಧರ್ಮ

‘ಶೀಶ್ ಮಹಲ್’ ನಿವಾಸವನ್ನು ಹಿಂದಿನ ಸ್ವರೂಪಕ್ಕೆ ಬದಲಿಸಿ ಎಂದು ದೆಹಲಿ ಗವರ್ನರ್ ಅವರನ್ನು ಒತ್ತಾಯಿಸಿದ ಬಿಜೆಪಿ

ದೆಹಲಿ ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಅದರ ಮೂಲ ಸ್ವರೂಪಕ್ಕೆ ಮರು ಸ್ಥಾಪಿಸುವಂತೆ ಭಾರತೀಯ ಜನತಾ ಪಕ್ಷ ಸೋಮವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಒತ್ತಾಯಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ತಮ್ಮ ಪಕ್ಷದ ಮುಖ್ಯಮಂತ್ರಿಯವರು 6, ಫ್ಲ್ಯಾಗ್‌ಸ್ಟಾಫ್ ರಸ್ತೆಯಲ್ಲಿರುವ ಈ ಬಂಗಲೆಯಲ್ಲಿ ವಾಸಿಸುವುದಿಲ್ಲ ಎಂದು ಪಕ್ಷ ತಿಳಿಸಿದೆ. ಬಿಜೆಪಿಯಿಂದ “ಶೀಶ್ ಮಹಲ್” ಅಥವಾ ಶ್ರೀಮಂತ ಅರಮನೆ ಎಂದು ಕರೆಯಲ್ಪಡುವ ಈ ನಿವಾಸವನ್ನು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದರು.

ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿತು. ಎಎಪಿ 22 ಕ್ಷೇತ್ರಗಳನ್ನು ಗೆದ್ದುಕೊಂಡಿತು.

ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು, ಕೇಜ್ರೀವಾಲ್‌ ಸರ್ಕಾರ ಎಂಟು ಟೈಪ್-ಫೈವ್ ಫ್ಲಾಟ್‌ಗಳು ಮತ್ತು ಎರಡು ಸರ್ಕಾರಿ ಬಂಗಲೆಗಳನ್ನು ಸಿವಿಲ್ ಲೈನ್ಸ್‌ನಲ್ಲಿರುವ 6, ಫ್ಲ್ಯಾಗ್‌ಸ್ಟಾಫ್ ರಸ್ತೆಯ ಬಂಗಲೆಯೊಂದಿಗೆ ವಿಲೀನಗೊಳಿಸಿ “50,000 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಅದ್ದೂರಿ ಸಂಕೀರ್ಣ”ವನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ.

“ಈ ಆಸ್ತಿಗಳನ್ನು ಅವುಗಳ ಮೂಲ ಸ್ಥಿತಿಗೆ ಪುನಃಸ್ಥಾಪಿಸಲು ಮತ್ತು 6, ಫ್ಲ್ಯಾಗ್‌ಸ್ಟಾಫ್ ರಸ್ತೆಯನ್ನು 10,000 ಚದರ ಮೀಟರ್‌ಗಿಂತ ಕಡಿಮೆ ಇರುವ ಅದರ ಹಿಂದಿನ ಪ್ರದೇಶಕ್ಕೆ ಹಿಂದಿರುಗಿಸಲು” ಅವರು ಲೆಫ್ಟಿನೆಂಟ್ ಗವರ್ನರ್ ಅವರ “ತುರ್ತು ಹಸ್ತಕ್ಷೇಪ” ವನ್ನು ಕೋರಿದರು.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ ಈ ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚ್‌ದೇವ ಹೇಳಿದರು.

ದೆಹಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಪಕ್ಷ ಇನ್ನೂ ಘೋಷಿಸಿಲ್ಲ, 26 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದಿದೆ.

ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ ರಾಷ್ಟ್ರ ರಾಜಧಾನಿಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು “ಶೀಶ್ ಮಹಲ್” ಆಗಿ ಪರಿವರ್ತಿಸಲಾಯಿತು ಎಂದು ಬಿಜೆಪಿ ಪದೇ ಪದೇ ಟೀಕಿಸಿತ್ತು.

ನಿವಾಸದೊಳಗೆ 40 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ನವೀಕರಣ ಕಾರ್ಯ ನಡೆದಿದೆ ಎಂದು ಹಿಂದುತ್ವ ಪಕ್ಷ ಆರೋಪಿಸಿದೆ.

ಜನವರಿ 28 ರಂದು ದೆಹಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಜ್ರಿವಾಲ್ “ಶೀಶ್ ಮಹಲ್” ನಿರ್ಮಿಸಿದ್ದಾರೆ ಎಂಬ ಬಿಜೆಪಿಯ ಹೇಳಿಕೆಗಳನ್ನು ಪುನರುಚ್ಚರಿಸಿದರು .

Related Articles

ಇತ್ತೀಚಿನ ಸುದ್ದಿಗಳು

You cannot copy content of this page